ತುಮಕೂರು,ಜ.8- ನಾನು ಮೊಂಡು ಧೈರ್ಯ ಮಾಡಿ ಚಿರತೆ ಬಾಲ ಹಿಡಿದು ಎಳೆಯದಿದ್ದರೆ ಅದು ರೈತರ ಆಕ್ರೋಶಕ್ಕೆ ಬಲಿಯಾಗಬೇಕಿತ್ತು ಎಂದು ಚಿರತೆ ಹಿಡಿದು ರಾಜ್ಯದ ಮನೆ ಮಾತಾಗಿರುವ ಆನಂದ್ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ನಮ ಊರಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.
ಈ ಸಿಸಿ ಕ್ಯಾಮೆರಾದಲ್ಲಿ ಎರಡು ಮೂರು ಚಿರತೆಗಳು ಬಂದು ಹೋಗುವುಗದು ಸೆರೆಯಾಗಿತ್ತು. ನಮ ಊರು ಗುಂಪಾಗಿರುವ ಮನೆಗಳ ಹಳ್ಳಿಯಲ್ಲ, ಅವರವರ ತೋಟಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವುದರಿಂದ ನಮದು 60 ತೋಟದ ಸಾಲಿನ ಮನೆಗಳಿರುವ ಚಿಕ್ಕ ಊರು. ಹೀಗಾಗಿ ನಾವು ಭಯಭೀತರಾಗಿದ್ದೇವು ಎಂದಿದ್ದಾರೆ.
ನಮ ಊರಿನ ಹಾಗೂ ಪಕ್ಕದ ಊರಿನಲ್ಲೂ ಸಹ ಕುರಿಗಳನ್ನು ಚಿರತೆಗಳು ಹೊತ್ತೋಯಿದ್ದವು, ಇದ್ದರಿಂದ ಜನ ಭಯಭೀತರಾಗಿ, ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದೆವು.ಅರಣ್ಯ ಇಲಾಖೆಯವರು ಚಿರತೆ ಸೆರೆಗೆ ಬೋನು ಸಹ ತಂದಿಟ್ಟಿದರು. ಆ ಚಿರತೆಗಳು, ಬೋನಿಗೆ ಬಿದ್ದಿರಲಿಲ್ಲ, ಮೊನ್ನೆ ಹೊಲದಲ್ಲಿ ಮೇವು ಕುಯಿತ್ತಿರುವಾಗ ಪ್ರಾಣಿಯ ಸಪ್ಪಳವಾಗಿದೆ. ಮೇವು ಕುಯುತ್ತಿದ್ದವರು ಹೆದರಿಕೊಂಡು ಓಡಿ ಬಂದರು. ನಂತರ ನಾನು ಹೋಗಿ ನೋಡಲಾಗಿ ಹೊಲದಲ್ಲಿ ಬದ್ದುವಿನ ಮೇಲೆ ಚಿರತೆ ಮಲಗಿತ್ತು.
ಕೂಡಲೇ ಆರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದೆ. ಅಷ್ಟರಲ್ಲಿ ಗ್ರಾಮಸ್ಥರು ಜಮಾಯಿಸಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಚಿರತೆ ಸೆರೆಗಾಗಿ ಕಾರ್ಯಾಚರಣೆ ಪ್ರಾರಂಭಿಸಿದರು. ಅಲ್ಲಿ ಸೇರಿದ ಜನ ದೊಣ್ಣೆ, ಕಲ್ಲುಗಳಿಂದ ಚಿರತೆಯನ್ನು ಬೆದರಿಸಿದರು. ಇದನ್ನು ತಪ್ಪಿಸುವ ಸಲುವಾಗಿ ನಾನೇ ಬಾಲವನ್ನು ಹಿಡಿದುಕೊಂಡೆ. ಆಗ ಅದು ಎದ್ದು ಒಂದು ಸುತ್ತು ಬಂದಿತು, ಕೂಡಲೇ ಅರಣ್ಯ ಇಲಾಖೆಯವರು ಬಲೆಯನ್ನು ಹಾಕಿ ಸೆರೆ ಹಿಡಿದರು. ನಾನು ಅದನ್ನು ಎಳೆಯದಿದ್ದರೆ ರೈತರ ಆಕ್ರೋಶಕ್ಕೆ ಬಲಿಯಾಗು ತ್ತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಕಾಡು ಪ್ರಾಣಿಗಳನ್ನು ಕಂಡರೆ ಸಾಕು ಕಿಲೋಮೀಟರ್ಗಟ್ಟಲೇ ಓಡುವ ಜನರ ಈ ಮಧ್ಯೆ ಆನಂದ್ ಯಾವುದೇ ಅಳುಕಿಲ್ಲದೆ ಸಾಕುಪ್ರಾಣಿಯನ್ನು ಹಿಡಿಯುವಂತೆ ಚಿರತೆಯ ಬಾಲವನ್ನು ಹಿಡಿದು ಬಲೆಗೆ ಕೆಡವಿ ಸಾಹಸ ಮೆರೆದಿರುವುದು ಸಾರ್ವಜನಕ ಪ್ರಶಂಸೆಗೆ ಪಾತ್ರವಾಗಿದೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ಲಾಗಿದ್ದು ಯುವಕನ ಎಂಟೆಡೆ ಗುಂಡಿಗೆಯನ್ನು ನೆಟ್ಟಿಗರು ಹಾಗೂ ಜಿಲ್ಲೆಯ ಜನ ಕೊಂಡಾಡಿದ್ದಾರೆ.
ಸಿಕ್ಕಿಬಿದ್ದಿರುವ ನಾಲ್ಕುವರ್ಷದ ಚಿರತೆ. ಬೆಳಗ್ಗೆಯಿಂದ ಸುಮಾರು ಗಂಟೆಗಳ ಕಾಲ ಜಮೀನಿನ ಬದುವಿನಲ್ಲೇ ಮಲಗಿತ್ತು ಅದಕ್ಕೆ ಆರೋಗ್ಯ ಸಮಸ್ಯೆಯಿಂದ ನಿತ್ರಾಣಗೊಂಡಿತ್ತು ಮಾತ್ರವಲ್ಲ ಅದಕ್ಕೆ ಇತ್ತಿಚೆಗೆ ಕಣ್ಣು ಕುರುಡಾಗಿತ್ತು ಎಂದು ಅರಣ್ಯ ಇಲಾಖೆ ಸಿಬ್ಬಂದಿಗಳು ತಿಳಿಸಿದ್ದಾರೆ. ಈ ಚಿರತೆ ಬರೀ ಶಬ್ದವನ್ನು ಅಲಿಸಿ ಜನರು ಮತ್ತು ಪ್ರಾಣಿಗಳು ಇರುವಿಕೆಯನ್ನು ಗುರುತಿಸಲ್ಪಡುತಿತ್ತು.
ಸುರಕ್ಷಿತವಾಗಿ ಸೆರೆ ಹಿಡಿದ ಚಿರತೆಯನ್ನು ಮೈಸೂರಿನ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದ್ದು, ಆರೈಕೆ ಮಾಡಲಾಗುತ್ತಿದೆ ಎಂದಿದ್ದಾರೆ.ಚಿರತೆಗೆ ಚಿಕಿತ್ಸೆಯಿಂದ ದೃಷ್ಟಿ ಬಂದರೆ ಮತ್ತೆ ಕಾಡಿಗೆ ಬಿಡಲಾಗುವುದು. ಇಲ್ಲವೆಂದರೆ ಪುನರ್ವಸತಿ ಕೇಂದ್ರದಲ್ಲೇ ಅದರ ಪಾಲನೆ ಪೋಷಣೆ ಮಾಡಲಾಗುವುದೆಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಿರತೆ ಬಾಲ ಹಿಡಿಯುವಾಗ ಆತನಿಗೇನು ಗೊತ್ತು. ಇದು ಕಣ್ಣು ಕಾಣದ ಚಿರತೆ ಎಂದು. ಆದರೂ ಧೈರ್ಯ ಬೇಕಲ್ಲ. ಆತನ ಗುಂಡಿಗೆಗೆ ಇಡೀ ಗ್ರಾಮಸ್ಥರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.