ಬೆಂಗಳೂರು, ಸೆ.25- ಅಣ್ಣನ ಮನೆಗೆ ಬಂದು ತಂಗುತ್ತಿದ್ದ ಆಟೋ ಚಾಲಕ ಹಾಗೂ ಹೋಮ್‍ಕೇರ್ ನೌಕರನನ್ನು ತಮ್ಮ ರಾಡ್‍ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಜೆಪಿ ನಗರದ ನಿವಾಸಿ ಗಣೇಶ (43) ಕೊಲೆಯಾದ ವ್ಯಕ್ತಿ. ಇವರು ಹಿಂದೆ ಆಟೋ ಚಾಲಕರಾಗಿದ್ದು, ಈಗ ಹೋಮ್‍ಕೇರ್‍ವೊಂದರಲ್ಲಿ ಉದ್ಯೋಗಿಯಾಗಿದ್ದರು.
ಸಾರ್ವಭೌಮನಗರದ ಶಾರದಾ ನಗರದಲ್ಲಿ ಮಲ್ಲೇಶ್ ಎಂಬುವವರು ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಅಲ್ಲಿಗೆ ಅವರ ಸ್ನೇಹಿತ ಗಣೇಶ ತನ್ನ ಮನೆ ಬಿಟ್ಟು ಬಂದು ಉಳಿದುಕೊಂಡಿದ್ದ. ಇದು ಮಲ್ಲೇಶನ ತಮ್ಮ ನಾರಾಯಣನಿಗೆ ಇಷ್ಟವಿರಲಿಲ್ಲ.
ನಮ್ಮ ಅಣ್ಣನ ಮನೆಯಲ್ಲಿ ನೀನು ಇರುವುದು ಬೇಡ. ನಿಮ್ಮ ಮನೆಗೆ ಹೋಗು ಎಂದು ಗಣೇಶನಿಗೆ ಹಲವಾರು ಬಾರಿ ನಾರಾಯಣ ಎಚ್ಚರಿಕೆ ನೀಡಿದ್ದ. ಆದರೆ, ನಿನ್ನೆ ಮಲ್ಲೇಶ ಇಲ್ಲದಿದ್ದ ಸಂದರ್ಭದಲ್ಲಿ ಗಣೇಶ ಮನೆಯಲ್ಲಿದ್ದ. ರಾತ್ರಿ ಅಣ್ಣನ ಮನೆಗೆ ಬಂದ ನಾರಾಯಣ ಗಣೇಶನನ್ನು ನೋಡಿ ಮನೆಯಲ್ಲಿ ಏಕೆ ಇದ್ದೀಯ ಎಂದು ಗಲಾಟೆ ಮಾಡಿದ್ದಾನೆ. ಇದು ವಿಕೋಪಕ್ಕೆ ಹೋಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
KRS ಸದ್ಯದ ಚಿತ್ರ ತೋರಿಸಿ ಕಣ್ಣೀರಿಟ್ಟ ದೇವೇಗೌಡರು
ಈ ವೇಳೆ ಮುಂಜಾನೆ 2.30ರ ಸಮಯದಲ್ಲಿ ನಾರಾಯಣ ರಾಡ್‍ನಿಂದ ಗಣೇಶನ ತಲೆಗೆ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಕೂಗಾಟ ಕೇಳಿ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಗಣೇಶ ಬಿದ್ದಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಮುಂದಾದಾಗ ಆತ ಕೊನೆಯುಸಿರೆಳೆದಿದ್ದಾನೆ.
ನಾರಾಯಣ ಪರಾರಿಯಾಗಿದ್ದು, ಸುದ್ದಿ ತಿಳಿದ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ರಾಜ್ಯಾದ್ಯಂತ ಏಕಕಾಲದಲ್ಲಿ ಜನತಾ ದರ್ಶನ, ಸ್ಥಳದಲ್ಲೇ ಪರಿಹಾರ