Friday, November 22, 2024
Homeರಾಜ್ಯಲೈಂಗಿಕ ದೌರ್ಜನ್ಯ ಆರೋಪ ಕುರಿತು ಯಡಿಯೂರಪ್ಪ ಹೇಳಿದ್ದೇನು..?

ಲೈಂಗಿಕ ದೌರ್ಜನ್ಯ ಆರೋಪ ಕುರಿತು ಯಡಿಯೂರಪ್ಪ ಹೇಳಿದ್ದೇನು..?

ಬೆಂಗಳೂರು,ಮಾ.15- ಹದಿನೇಳು ವರ್ಷದ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪವನ್ನು ಸಾರಾ ಸಗಾಟಾಗಿ ನಿರಾಕರಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾನೂನು ಮೂಲಕವೇ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

ತಮ್ಮ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆ ದೂರು ದಾಖಲಾದ ಬೆನ್ನಲ್ಲೇ ತುರ್ತು ಪತ್ರಿಕಾಗೋಷ್ಟಿ ನಡೆಸಿದ ಅವರು, ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂಬ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದರು. ಖಂಡಿತವಾಗಿ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಉಪಕಾರ ಮಾಡಲು ಹೋಗಿ ನನಗೆ ಸಂಕಷ್ಟ ಎದುರಾಗಿದೆ. ಕಾನೂನು ಮೂಲಕವೇ ಹೋರಾಟ ಮಾಡುತ್ತೇನೆ. ಇದರಲ್ಲಿ ರಾಜಕೀಯ ಬೆರೆಸಲು ನಾನು ಇಷ್ಟಪಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಹಿಳೆ ಮತ್ತು ಮಗಳು ನನ್ನ ಬಳಿ ಸಹಾಯ ಕೇಳಿ ಬಂದಿದ್ದರು. ನಾನು ಕೈಲಾದಷ್ಟು ಸಹಾಯ ಮಾಡಿ ಕಳುಹಿಸಿದ್ದೆ. ಉಪಕಾರ ಮಾಡಿದವರಿಗೆ ಈ ರೀತಿ ಕಾನೂನಿನ ಸಂಕಷ್ಟ ಎದುರಾಗುತ್ತದೆ ಎಂಬುದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಾಯಿ-ಮಗಳು ಅನೇಕ ಬಾರಿ ಬಂದು ಹೋಗಿದ್ದಾರೆ. ಅದಾದನಂತರ ಅವರು ಏನೇನೊ ಮಾತನಾಡಿದರು. ನಾನು ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ. ಈ ರೀತಿ ನನ್ನ ವಿರುದ್ಧವೇ ದೂರು ದಾಖಲಾಗಿರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಕೆಲವರು ಬಾರಿ ಸಹಾಯ ಮಾಡುವಾಗಲೂ ಹತ್ತಾರು ಬಾರಿ ಯೋಚನೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ನನ್ನ ಪರಿಸ್ಥಿತಿ ಬೇರೆಯವರಿಗೂ ಬರಬಹುದು ಎಂದು ಎಚ್ಚರಿಸಿದರು.

ಒಂದೂವರೆ ತಿಂಗಳ ಹಿಂದೆ ನಮ್ಮ ಮನೆಗೆ ಕಣ್ಣೀರು ಹಾಕುತ್ತಾ ಬಂದಿದ್ದರು. ನನಗೆ ಅನ್ಯಾಯವಾಗಿದೆ ನ್ಯಾಯ ಒದಗಿಸಿ ಎಂದು ಕೇಳಿಕೊಂಡಿದ್ದರು. ನಾನೇ ಆ ಮಹಿಳೆಯನ್ನು ನಗರ ಪೊಲೀಸ್ ಆಯುಕ್ತರ ಬಳಿ ಕಳುಹಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದೆ. ಈಗ ಯಾರೋ ಒಬ್ಬ ಮಹಿಳೆ ದೂರು ಕೊಟ್ಟಿದ್ದಾರೆ. ಇರಲಿ ಬಿಡಿ. ಕಾನೂನು ಮೂಲಕವೇ ಹೋರಾಟ ಮಾಡುತ್ತೇನೆ ಎಂದರು.

ಇದು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ದೂರು ನೀಡಿರುವುದು ರಾಜಕೀಯ ಪ್ರೇರಿತವೇ ಎಂಬ ಮಾಧ್ಯಮದವರ ಪ್ರಶ್ನೆಗೆ ನಾನು ಖಂಡಿತವಾಗಿಯೂ ಹಾಗೆ ಹೇಳಲಾರೆ. ಮಹಿಳೆ ಯಾವ ಕಾರಣಕ್ಕಾಗಿ ದೂರು ಕೊಟ್ಟಿದ್ದಾರೋ ಗೊತ್ತಿಲ್ಲ ಎಂದು ಅಸಮಾಧಾನದಿಂದಲೇ ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ವಾತಾವರಣವಿದೆ. ಈ ಬಾರಿ ನಾವು ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ. ದೇಶದಲ್ಲಿ ಮತ್ತೆ ಮೋದಿಯವರು ಪ್ರಧಾನಿಯಾಗುವುದು 100ಕ್ಕೆ ನೂರರಷ್ಟು ಖಚಿತ ಎಂಬ ವಿಶ್ವಾಸವನ್ನು ಯಡಿಯೂರಪ್ಪ ವ್ಯಕ್ತಪಡಿಸಿದರು. 17 ವರ್ಷದ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನಲೆಯಲ್ಲಿ ಯಡಿಯೂರಪ್ಪ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.

RELATED ARTICLES

Latest News