Thursday, May 2, 2024
Homeಬೆಂಗಳೂರುಬೆಂಗಳೂರಿಗರೇ ಇಲ್ಲಿ ಗಮನಿಸಿ, ಇದು ನೀರಿನ ವಿಷಯ

ಬೆಂಗಳೂರಿಗರೇ ಇಲ್ಲಿ ಗಮನಿಸಿ, ಇದು ನೀರಿನ ವಿಷಯ

ಬೆಂಗಳೂರು,ಮಾ.15- ರಾಜ್ಯ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ನೀರಿಗೆ ಹಾಹಾಕಾರ ಉಂಟಾಗಿದ್ದು, ಹೋಳಿ ಆಚರಣೆ ನೆಪದಲ್ಲಿ ಬೇಕಾಬಿಟ್ಟಿ ನೀರು ವ್ಯರ್ಥ ಮಾಡಿದರೆ ಜಲಮಂಡಳಿ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ನಗರದಾದ್ಯಂತ ಕುಡಿಯುವ ನೀರಿಗೆ ತೀವ್ರ ತೊಂದರೆ ಎದುರಾಗಿದ್ದು, ಬೋರ್‍ವೆಲ್‍ಗಳು ಬತ್ತಿಹೋಗಿವೆ. ಶುದ್ದ ಕುಡಿಯುವ ನೀರಿನ ಘಟಕಗಳು ಬಂದ್ ಆಗಿದ್ದು ಕುಡಿಯುವ ನೀರಿಗೂ ಸಹ ತತ್ವಾರ ಎದುರಾಗಿದೆ.

ಹೋಳಿ ಹಬ್ಬ ಆಚರಣೆ ನೆಪದಲ್ಲಿ ಬೇಕಾಬಿಟ್ಟಿ ನೀರು ವ್ಯರ್ಥ ಮಾಡಿದರೆ ಜಲಮಂಡಳಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ವಾಣಿಜ್ಯ ಉದ್ದೇಶದಿಂದ ಹೆಚ್ಚು ಜನರನ್ನು ಸೇರಿಸಿ ಆಚರಣೆ ನೆಪದಲ್ಲಿ ನೀರನ್ನು ವ್ಯರ್ಥ ಮಾಡುವಂತಿಲ್ಲ ಎಂದು ಜಲಮಂಡಳಿ ಅಧ್ಯಕ್ಷ ಪ್ರಸಾತ್ ಮನೋಹರ್ ಎಚ್ಚರಿಕೆ ನೀಡಿದ್ದಾರೆ.

ಮನೆಗಳಲ್ಲಿ ನೀರನ್ನು ವ್ಯರ್ಥ ಮಾಡದೆ ಜಲಸ್ನೇಹಿ ಹೋಳಿ ಆಚರಿಸುವಂತೆ ಜನರಿಗೆ ಮನವಿ ಮಾಡಿದ್ದು, ಹೆಚ್ಚು ಜನರು ಸೇರಿ ನೀರನ್ನು ಬಳಸಿಕೊಂಡು ಹಬ್ಬ ಆಚರಣೆ ಮಾಡುವಂತಿಲ್ಲ ಎಂದು ಹೇಳಿದ್ದಾರೆ.

ಟ್ಯಾಂಕರ್ ನೋಂದಣಿ ಡೆಡ್‍ಲೈನ್ ಮುಕ್ತಾಯ:
ಇಲ್ಲಿಯವರೆಗೂ ನಗರ ವ್ಯಾಪ್ತಿಯಲ್ಲಿ 1560 ನೀರಿನ ಟ್ಯಾಂಕರ್‍ಗಳ ನೋಂದಣಿಯಾಗಿದೆ. ಇಲ್ಲಿಯವರೆಗೂ ನೋಂದಣಿಯಾಗದ ಟ್ಯಾಂಕರ್‍ಗಳಿಗೆ ಜಲಮಂಡಳಿ ಆರ್‍ಟಿಒ ಸಹಯೋಗದಲ್ಲಿ ಬಿಸಿ ಮುಟ್ಟಿಸಲು ಸಜ್ಜಾಗಿದ್ದು, ನೋಂದಣಿ ಆಗಿರುವ ಟ್ಯಾಂಕರ್‍ಗಳಿಗೆ ಸ್ಟಿಕ್ಕರ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ಸ್ಟಿಕ್ಕರ್ ಜೊತೆಗೆ ದರ ಪಟ್ಟಿ ಕೂಡ ಟ್ಯಾಂಕರ್‍ಗಳ ಮಾಲೀಕರು ಅಳವಡಿಸಬೇಕು. ನೀರು ಸರಬರಾಜು ವೇಳೆ ಹೆಚ್ಚಿನ ಹಣ ಕೇಳಿದರೆ ಹೆಲ್ಪ್‍ಲೈನ್ ಮೂಲಕ ದೂರು ನೀಡಲು ಅವಕಾಶವಿದೆ.

ಸಾರ್ವಜನಿಕರಿಂದ ದೂರುಗಳು ಬಂದರೆ ಕೂಡಲೇ ಅಂತಹ ಟ್ಯಾಂಕರ್ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು. ಕಟ್ಟಡ ನಿರ್ಮಾಣ ಹೆಸರಿನಲ್ಲಿ ಅನಗತ್ಯವಾಗಿ ನಗರದಲ್ಲಿ ನೀರು ಪೋಲಾಗುತ್ತಿರುವ ವಿಚಾರಕ್ಕೆ ಸಂಬಂಸಿದಂತೆ ಮಾತನಾಡಿದ ಅವರು, ಜಲಮಂಡಳಿಯ ನಿಯಮಗಳನ್ನು ಉಲ್ಲಂಘಿಸಿದರೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ರದ್ದು ಮಾಡಲು ಬಿಬಿಎಂಪಿಗೆ ಜಲಮಂಡಳಿ ಪ್ರಸ್ತಾವನೆ ಸಲ್ಲಿಸಿದೆ. ಸಂಸ್ಕರಿಸಿದ ನೀರಿನ ಹೊರತಾಗಿ ಇತರೆ ನೀರನ್ನು ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳದಂತೆ ತಾಕೀತು ಮಾಡಿದರು.

RELATED ARTICLES

Latest News