Wednesday, May 1, 2024
Homeರಾಷ್ಟ್ರೀಯಬ್ರೇಕಿಂಗ್ : ನಾಳೆ ಲೋಕಸಮರಕ್ಕೆ ಮಹೂರ್ತ ಫಿಕ್ಸ್

ಬ್ರೇಕಿಂಗ್ : ನಾಳೆ ಲೋಕಸಮರಕ್ಕೆ ಮಹೂರ್ತ ಫಿಕ್ಸ್

ನವದೆಹಲಿ,ಮಾ.15- ಶತಕೋಟಿ ಭಾರತೀಯರು ಚಾತಕಪಕ್ಷಿಯಂತೆ ಎದುರು ನೋಡುತ್ತಿರುವ, ವಿವಿಧ ರಾಜಕೀಯ ಪಕ್ಷಗಳಿಗೆ ಮಾಡು ಇಲ್ಲವೇ ಮಡಿ ಎಂಬಂತಿರುವ 18ನೇ ಲೋಕಸಭಾ ಚುನಾವಣಾ ಮಹಾಸಮರಕ್ಕೆ ನಾಳೆಯೇ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಲಿದೆ. ಶನಿವಾರ ಮಧ್ಯಾಹ್ನ 3 ಗಂಟೆಗೆ ನವದೆಹಲಿಯಲ್ಲಿರುವ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ಕರೆದಿದ್ದು, ಲೋಕಸಭೆ ಕುರುಕ್ಷೇತ್ರಕ್ಕೆ ಮುಹೂರ್ತ ನಿಗದಿಯಾಗಲಿದೆ.

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್‍ಕುಮಾರ್ ಹಾಗೂ ನೂತನ ಆಯುಕ್ತರಾಗಿರುವ ಜ್ಞಾನೇಶ್‍ಕುಮಾರ್ ಮತ್ತು ಸುಖ್‍ಬೀರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಚುನಾವಣೆಯ ದಿನಾಂಕವನ್ನು ಘೋಷಿಸಲಿದ್ದಾರೆ. ಒಟ್ಟು 543 ಲೋಕಸಭಾ ಕ್ಷೇತ್ರಗಳ ಜೊತೆಗೆ ಒರಿಸ್ಸಾ, ಆಂಧ್ರಪ್ರದೇಶ ಮತ್ತು ಜಮ್ಮುಕಾಶ್ಮೀರ ವಿಧಾನಸಭೆ ಚುನಾವಣೆಗಳಿಗೂ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

2019ರಲ್ಲಿ ದೇಶಾದ್ಯಂತ ಏಳು ಹಂತದ ಮತದಾನ ನಡೆದಿತ್ತು. ಈ ಬಾರಿಯೂ ಹೆಚ್ಚು ಕಡಿಮೆ ಅಷ್ಟೇ ಹಂತದ ಮತದಾನ ನಡೆಯುವ ಸಾಧ್ಯತೆ ಇದೆ. ಕಳೆದ 2019ರ ಮಾರ್ಚ್ 10ರಂದು ದಿನಾಂಕವನ್ನು ಘೋಷಣೆ ಮಾಡಲಾಗಿತ್ತು. ಏಪ್ರಿಲ್ 11ರಿಂದ ಮೇ 19ರವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆದು ಮೇ 25ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಂಡಿತ್ತು.

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಮೇ 18 ಮತ್ತು ಮೇ 23 ಸೇರಿದಂತೆ ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ 14 ಹಾಗೂ 2ನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಸಲಾಗಿತ್ತು. ವಿದ್ಯಾರ್ಥಿಗಳ ಪರೀಕ್ಷೆಗಳು, ಧಾರ್ಮಿಕ ಆಚರಣೆಗಳಿಗೆ ಅಡೆತಡೆಯಾಗದಂತೆ ಆಯೋಗ ಪರಿಶೀಲಿಸಿ ದಿನಾಂಕವನ್ನು ನಿಗದಿಪಡಿಸಲಿದೆ.

ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದ 80 ಲೋಕಸಭಾ ಕ್ಷೇತ್ರಗಳಿಗೆ 5 ಹಂತದ ಮತದಾನ ನಡೆಯುವ ಸಂಭವವಿದೆ. ನಕ್ಸಲ್ ಪೀಡಿತ ರಾಜ್ಯಗಳಾದ ಛತ್ತೀಸ್‍ಘಡ, ಜಾರ್ಖಂಡ್‍ನಲ್ಲೂ 5 ಹಂತ ಹಾಗೂ ಬಿಹಾರದಲ್ಲಿ 2 ಹಂತದ ಮತದಾನಕ್ಕೆ ದಿನಾಂಕವನ್ನು ಆಯೋಗ ನಿಗದಿಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಉಗ್ರರ ಉಪಟಳವಿರುವ ಜಮ್ಮುಕಾಶ್ಮೀರದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ನಡೆಯುವುದರಿಂದ ಆಯೋಗ 5 ಹಂತದ ಮತದಾನ ನಡೆಸಲು ಆಯೋಗ ತೀರ್ಮಾನಿಸಿದೆ.

ಚುನಾವಣಾ ತಯಾರಿಗಳನ್ನು ಚುರುಕುಗೊಳಿಸುವ ಹಾಗೂ ಸ್ಥಿತಿಗತಿಗಳ ಬಗ್ಗೆ ಮಾಹಿತಿ ತಿಳಿಯಲು ಆಯೋಗ ಕೆಲವು ತಿಂಗಳಿನಿಂದ ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಅಕಾರಿಗಳ (ಸಿಇಒ) ಜತೆ ಸತತವಾಗಿ ಸಭೆಗಳನ್ನು ನಡೆಸಿತ್ತು. ಸಮಸ್ಯೆ ಇರುವ ಪ್ರದೇಶಗಳು, ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಸಾಗಣೆ, ತಮಗೆ ಅಗತ್ಯವಿರುವ ಭದ್ರತಾ ಪಡೆಗಳು, ಗಡಿಗಳಲ್ಲಿನ ತಪಾಸಣೆಯನ್ನು ಬಿಗಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳ ಪಟ್ಟಿಗಳನ್ನು ಸಿಇಒಗಳು ಆಯೋಗಕ್ಕೆ ನೀಡಿದ್ದಾರೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ:
ಲೋಕಸಭೆ ಚುನಾವಣೆಯು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯಲು ಅನುಕೂಲವಾಗುವಂತೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ನಿಯೋಜಿಸಲು ಚುನಾವಣಾ ಆಯೋಗ ನಿರ್ಧಾರ ಕೈಗೊಂಡಿದೆ. ಚುನಾವಣಾ ಆಯೋಗದಲ್ಲಿ ಕೃತಕ ಬುದ್ಧಿಮತ್ತೆಗೆ ಮೀಸಲಾದ ಘಟಕವೊಂದನ್ನು ತೆರೆಯಲಾಗಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ಗುರುತಿಸಿ, ತೆರವುಗೊಳಿಸುತ್ತದೆ.

ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುಳ್ಳು ಹಾಗೂ ಪ್ರಚೋದನಾಕಾರಿ ಅಂಶಗಳನ್ನು ಬಹಳ ತ್ವರಿತವಾಗಿ ತೆಗೆದು ಹಾಕಲಾಗುತ್ತದೆ. ಯಾವುದೇ ಪಕ್ಷ ಅಥವಾ ಅಭ್ಯರ್ಥಿ ನಿಯಮಗಳ ಉಲ್ಲಂಘನೆಯನ್ನು ಮುಂದುವರಿಸಿದರೆ ಆಯೋಗವು ಖಾತೆಗಳನ್ನು ಅಮಾನತು ಅಥವಾ ಬ್ಲಾಕ್ ಮಾಡುವಂತೆ ಸಾಮಾಜಿಕ ಜಾಲತಾಣ ಕಂಪೆನಿಗಳಿಗೆ ಸೂಚಿಸುವಂತಹ ಕಠಿಣ ಕ್ರಮ ಕೈಗೊಳ್ಳುತ್ತದೆ. ಫ್ಯಾಕ್ಟ್ ಚೆಕ್ಕಿಂಗ್, ಸುಳ್ಳು ಸುದ್ದಿಗಳನ್ನು ತಡೆಯುವುದು, ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸುವುದರತ್ತ ಆಯೋಗ ಗಮನ ಹರಿಸಿದೆ.

ಚುನಾವಣಾ ಆಯೋಗದ ಡೇಟಾ ಪ್ರಕಾರ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ದೇಶದಲ್ಲಿ 96.88 ಕೋಟಿ ಅರ್ಹ ಮತದಾರರಿದ್ದಾರೆ. ಇದು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಸಂಖ್ಯೆಯಾಗಿದೆ. ಜತೆಗೆ 18- 19 ವರ್ಷ ವಯೋಮಾನದ 1.85 ಕೋಟಿ ಯುವ ಜನರು ಮತ ಚಲಾಯಿಸುವ ಹಕ್ಕಿಗಾಗಿ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 2014ಕ್ಕಿಂತ ದೊಡ್ಡ ಗೆಲುವನ್ನು ಸಾಸಿತ್ತು. 2014 ರಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆದ್ದಿದ್ದರೆ, 2019 ರಲ್ಲಿ 303 ಸ್ಥಾನಗಳನ್ನು ಗೆದ್ದಿತ್ತು. ಎನ್‍ಡಿಎ 353 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 37.7% ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದರೆ, ಓಆಂ 45% ಮತಗಳನ್ನು ಪಡೆದಿದೆ. ಕಾಂಗ್ರೆಸ್ 52 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಕಳೆದ ಬಾರಿ ಬಿಜೆಪಿ 25, ಜೆಡಿಎಸ್- 1, ಕಾಂಗ್ರೆಸ್ – 1 ಹಾಗೂ ಮಂಡ್ಯದಲ್ಲಿ ಪಕ್ಷೇತರರ ಅಭ್ಯರ್ಥಿ ಜಯಗಳಿಸಿದ್ದರು.

RELATED ARTICLES

Latest News