Thursday, May 2, 2024
Homeಬೆಂಗಳೂರುಆಸ್ತಿ ತೆರಿಗೆ ಹೆಚ್ಚಿಸಬೇಡಿ ಎಂದು ಸಿಎಂ,ಡಿಸಿಎಂಗೆ ಎನ್.ಆರ್.ರಮೇಶ್ ಪತ್ರ

ಆಸ್ತಿ ತೆರಿಗೆ ಹೆಚ್ಚಿಸಬೇಡಿ ಎಂದು ಸಿಎಂ,ಡಿಸಿಎಂಗೆ ಎನ್.ಆರ್.ರಮೇಶ್ ಪತ್ರ

ಬೆಂಗಳೂರು,ಮಾ.15- ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚಳ ಮಾಡಲು ಉದ್ದೇಶಿಸಿರುವ ಶೇ.6.5ರಷ್ಟು ಆಸ್ತಿ ತೆರಿಗೆ ಹೆಚ್ಚಳವನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಪಾಲಿಕೆ ಅಧಿಕಾರಿಗಳೇ ಗುರುತಿಸಿರುವಂತೆ 16 ಲಕ್ಷ ವಸತಿ ಕಟ್ಟಡಗಳನ್ನು ಹೊರತುಪಡಿಸಿದರೆ 1,10,000 ಕ್ಕೂ ಹೆಚ್ಚು ಕೈಗಾರಿಕಾ ಕಟ್ಟಡಗಳು, 3,856 ಐಟಿ ಕಂಪನಿಗಳು, 102ಬಯೋಟೆಕ್ ಕಂಪನಿಗಳು, 850 ಕ್ಕೂ ಹೆಚ್ಚು ತಾರಾ ಹೋಟೆಲ್ ಗಳು, 2,800 ಕ್ಕೂ ಹೆಚ್ಚು ಲಾಡ್ಜ್‍ಗಳು ಹಾಗೂ 23,000 ಕ್ಕೂ ಹೆಚ್ಚು ವಸತಿ ಸಮುಚ್ಛಯಗಳು ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾವಿರಾರು ವಾಣಿಜ್ಯ ಕಟ್ಟಡಗಳಿವೆ. ದೆಹಲಿ ಮತ್ತು ಮುಂಬೈ ನಗರವನ್ನು ಹೊರತುಪಡಿಸಿದರೆ ದೇಶದ ಇನ್ಯಾವುದೇ ಪ್ರಮುಖ ನಗರಗಳಲ್ಲಿ ಇಷ್ಟು ದೊಡ್ಡ ಪ್ರಮಾಣದ ವಾಣಿಜ್ಯ ಕಟ್ಟಡಗಳು ಇರುವುದಿಲ್ಲ.

ಬಿಬಿಎಂಪಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಪ್ರಭಾವಿಗಳು ಅಥವಾ ರಾಜಕಾರಣಿಗಳು ತಮ್ಮ ಪ್ರಭಾವವನ್ನು ಬೀರದಂತೆ ಅಧಿಕಾರವನ್ನು ನೀಡಿದ್ದೇ ಆದಲ್ಲಿ, ಇಷ್ಟೊಂದು ಬೃಹತ್ ಪ್ರಮಾಣದಲ್ಲಿರುವ ವಸತಿ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು, ವಸತಿ ಸಮುಚ್ಛಯಗಳು, ವಾಣಿಜ್ಯ ಸಮುಚ್ಛಯಗಳು, ಕೈಗಾರಿಕಾ ಕಟ್ಟಡಗಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಷಿಕವಾಗಿ ಕನಿಷ್ಠ 8,000 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ಆಸ್ತಿ ತೆರಿಗೆ ರೂಪದಲ್ಲಿ ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ಅವರು ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಪತ್ರ ಬರೆದಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕೈದು ವರ್ಷಗಳಿಂದ ಮೇಲೆ ತಿಳಿಸಿರುವ ಎಲ್ಲ ಆಸ್ತಿಗಳ ಸಂಪೂರ್ಣ ವಿವರಗಳನ್ನು ಚಿತ್ರ ಸಹಿತವಾಗಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ನೀಡಿರುತ್ತೇನೆ. ಈ ಸಂಬಂಧ ಪಾಲಿಕೆಯ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಂಡಿದ್ದಿದ್ದರೆ ಹಾಗೂ ಸರ್ಕಾರದ ಆಯಕಟ್ಟಿನ ಸ್ಥಾನದಲ್ಲಿರುವ ಮಾನ್ಯ ಮುಖ್ಯಮಂತ್ರಿಗಳಾಗಲೀ, ಬೆಂಗಳೂರು ನಗರದ ಉಸ್ತುವಾರಿ ಸಚಿವರಾಗಲೀ, ಪಾಲಿಕೆಯ ಮುಖ್ಯ ಆಯುಕ್ತರಾಗಲೀ, ಆಡಳಿತಾಧಿಕಾರಿಗಳಾಗಲೀ ಪಾಲಿಕೆಯ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಪ್ರಭಾವಕ್ಕೆ ಒಳಗಾಗದ ರೀತಿಯಲ್ಲಿ ಅಧಿಕಾರವನ್ನು ನೀಡಿದ್ದರೆ ಈಗಾಗಲೇ ತಿಳಿಸಿರುವಂತೆ ವಾರ್ಷಿಕವಾಗಿ 8,000 ಕೋಟಿ ರೂಪಾಯಿಗಳಿಗೂ ಹೆಚ್ಚು ಆಸ್ತಿ ತೆರಿಗೆಯನ್ನು ಸಂಗ್ರಹ ಮಾಡಲು ಸಾಧ್ಯವಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಇದೂ ಸಾಲದೆಂಬಂತೆ ಪ್ರಸ್ತುತ ತಾವು ಈ ಎಲ್ಲಾ ಅಂಶಗಳನ್ನು ಬಿಟ್ಟು ಪಾಲಿಕೆಗೆ ಪ್ರತೀ ವರ್ಷ ಪಾವತಿಸಬೇಕಿರುವ ಒಟ್ಟು ಆಸ್ತಿ ತೆರಿಗೆಯ ಶೇ. 6.5% ರಷ್ಟು ಮೊತ್ತವನ್ನು ಹೆಚ್ಚಳ ಮಾಡಿ ಬೆಂಗಳೂರು ನಗರದ ನಾಗರಿಕರಿಗೆ ದೊಡ್ಡ ಬರೆಯನ್ನು ಎಳೆಯುತ್ತಿರುವುದಲ್ಲದೇ, ದೊಡ್ಡ ಹೊರೆಯನ್ನು ಹೊರಿಸಲು ಹೊರಟಿರುತ್ತೀರಿ ಇದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.

ವಿಶೇಷವೆಂದರೆ ಬಿಬಿಎಂಪಿಯಲ್ಲಿ ಈಗಿರುವ 08 ವಲಯಗಳ ಪೈಕಿ 240 ಚ. ಕಿ. ಮೀ. ವ್ಯಾಪ್ತಿಯನ್ನು ವ್ಯಾಪಿಸಿಕೊಂಡಿರುವ ಕೋರ್ ಬೆಂಗಳೂರಿನ 03 ವಲಯಗಳಾದ ಪಶ್ಚಿಮ ವಲಯ, ಪೂರ್ವ ವಲಯ ಮತ್ತು ದಕ್ಷಿಣ ವಲಯಗಳ ವ್ಯಾಪ್ತಿಯಲ್ಲಿ ಇರುವಂತಹ ವಸತಿ ಕಟ್ಟಡಗಳ ಶೇ. 75% ರಷ್ಟು ಸ್ವತ್ತುಗಳ ಮಾಲೀಕರು ಬಹಳಷ್ಟು ಪ್ರಮಾಣದಲ್ಲಿ ಹಿರಿಯ ನಾಗರಿಕರಾಗಿದ್ದು, ಅವರ ಮಕ್ಕಳು ಬೇರೆ ಬೇರೆ ರಾಜ್ಯಗಳಲ್ಲಿ / ದೇಶಗಳಲ್ಲಿ ನೆಲಿಸಿರುವಂತಹ ಸಂದರ್ಭದಲ್ಲಿ ಈ ಕಟ್ಟಡಗಳಿಂದ ಬಾಡಿಗೆ ರೂಪದಲ್ಲಿ ಬರುವಂತಹ ಆದಾಯವನ್ನೇ ಅವಲಂಬಿಸಿ ಅವರ ಜೀವನವನ್ನು ಸಾಗಿಸುತ್ತಿದ್ದಾರೆ.

ಹಾಗೆಯೇ, ಹೊಸ ವಲಯಗಳಾದ ಬೊಮ್ಮನಹಳ್ಳಿ ವಲಯ, ಮಹದೇವಪುರ ವಲಯ, ರಾಜರಾಜೇಶ್ವರಿನಗರ ವಲಯ, ಯಲಹಂಕ ವಲಯ ಮತ್ತು ದಾಸರಹಳ್ಳಿ ವಲಯಗಳಲ್ಲಿನ 09 ವಿಧಾನಸಭಾ ಕ್ಷೇತ್ರಗಳ 66 ವಾರ್ಡ್ ಗಳ ವ್ಯಾಪ್ತಿಯಲ್ಲಿರುವ ಪ್ರದೇಶಗಳ ಶೇ. 50% ರಷ್ಟು ವಸತಿ ಕಟ್ಟಡಗಳ ಮಾಲೀಕರೂ ಸಹ ತಮಗೆ ಬಾಡಿಗೆ ರೂಪದಲ್ಲಿ ಬರುವಂತಹ ಆದಾಯವನ್ನೇ ಅವಲಂಬಿಸಿ ಜೀವನ ನಡೆಸುತ್ತಿರುತ್ತಾರೆ.

ಜೀವನ ನಡೆಸುವುದೇ ದೊಡ್ಡ ಸಾಹಸ ಎನ್ನುವ ರೀತಿಯಲ್ಲಿರುವ ಇಂತಹ ದಿನಗಳಲ್ಲಿ ಕೋವಿಡ್ – 19 ನ ಮೊದಲನೇ ಮತ್ತು ಎರಡನೇ ಅವ„ಯ ಸಂದರ್ಭದಲ್ಲಿ ಹಾಗೂ ಅದಾದ ನಂತರ ಬಾಡಿಗೆದಾರರು ಯತೇಚ್ಚವಾಗಿ ಕಡಿಮೆಯಾಗಿರುತ್ತದೆ. ಈ ರೀತಿ ಬೆಂಗಳೂರು ನಗರದ ವಸತಿ ಕಟ್ಟಡಗಳ ಮಾಲೀಕರು ಬಹಳಷ್ಟು ಸಂಕಷ್ಟದಲ್ಲಿರುವ ಇಂತಹ ಸಂದರ್ಭದಲ್ಲಿ ತಾವು ಮತ್ತೆ ಆಸ್ತಿ ತೆರಿಗೆಯಲ್ಲಿ ಶೇ. 6.5% ರಷ್ಟು ಹೆಚ್ಚಳ ಮಾಡಲು ಹೊರಟಿರುವುದು ನಿಜಕ್ಕೂ ಶ್ರೇಯಸ್ಕರವಾಗಿರುವುದಿಲ್ಲ ಎಂದು ಅವರು ಕೇಳಿಕೊಂಡಿದ್ದಾರೆ.

ಹೀಗಾಗಿ ದೊಡ್ಡ ದೊಡ್ಡ ಸಂಸ್ಥೆಗಳಿಂದ ತೆರಿಗೆ ವಸೂಲಿ ಮಾಡಿ ಬಡ ಜನರು ಅವರ ಜೀವನೋಪಾಯಕ್ಕೆ ಈ ಹಿಂದಿನಿಂದಲೂ ಬಾಡಿಗೆ ಹಣವನ್ನೇ ಅವಲಂಬಿಸಿರುವ ನಾಗರಿಕರ ಮೇಲೆ ಶೇ. 6.5% ರಷ್ಟು ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡುವುದು ಬೇಡ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Latest News