ಬೆಂಗಳೂರು,ಮಾ.15-ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೊಕ್ಸೋ ಕಾಯ್ದೆ ದಾಖಲಾಗಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ರಾಜ್ಯದ ಪ್ರಭಾವಿ ಜನನಾಯಕರಾಗಿರುವ ಬಿಎಸ್ ವೈ ವಿರುದ್ಧ ಮಹಿಳೆಯೊಬ್ಬಳು ತನ್ನ ಪುತ್ರಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ಕೊಟ್ಟಿರುವುದು ಹಲವು ಸಂಶಯಗಳನ್ನು ಹುಟ್ಟು ಹಾಕಿದೆ.
ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವರ್ಗಾಯಿಸಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುವುದು ಎಂದು ಹೇಳಿದೆ. ಇದರ ಬೆನ್ನಲ್ಲೇ ಸದಾಶಿವನಗರ ಪೊಲೀಸರು ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಬಂದು ಯಡಿಯೂರಪ್ಪ ನವರಿಂದ ಹೇಳಿಕೆ ದಾಖಲಿಸಿಕೊಂಡು ಹೋಗಿದ್ದಾರೆ.
ತಮ್ಮ ಪುತ್ರಿಗೆ ಲೈಂಗಿಕ ಕಿರುಕುಳವಾಗಿದೆ ಎಂದು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಮಹಿಳೆ, ಈ ಹಿಂದೆ ಇದೇ ರೀತಿ 50ಕ್ಕೂ ಹೆಚ್ಚು ದೂರುಗಳನ್ನು ಪ್ರಭಾವಿಗಳ ಮೇಲೆ ನೀಡಿರುವುದು ಗಮನಾರ್ಹವಾಗಿದೆ. ಈ ನಡುವೆ ದೂರು ನೀಡಿರುವ ಮಹಿಳೆ ಯಡಿಯೂರಪ್ಪನವರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿದ್ದು, ಇದು ಹಲವು ಸಂಶಯಗಳನ್ನು ಹುಟ್ಟುಹಾಕಿದೆ.
ವಿಡಿಯೋದಲ್ಲಿ ಯಡಿಯೂರಪ್ಪ ಅವರನ್ನು ಉದ್ದೇಶಪೂರ್ವಕವಾಗಿ ಹನಿಟ್ರಾಪ್ನಲ್ಲಿ ಕೆಡವಲು ದೂರು ನೀಡಿರುವ ಮಹಿಳೆ ಸತತ ಪ್ರಯತ್ನ ನಡೆಸಿದ್ದಾರೆ.ಈ ಹಿಂದೆಯೂ ಇದೇ ಮಹಿಳೆ ಯಡಿಯೂರಪ್ಪ ಅವರನ್ನು ನಾನು ಮೂಲತಃ ಶಿವಮೊಗ್ಗದವರೆಂದು ಪರಿಚಯ ಮಾಡಿಕೊಂಡು ಡಾಲರ್ಸ್ ಕಾಲೋನಿಯಲ್ಲಿರುವ ಅವರ ನಿವಾಸಕ್ಕೆ ಭೇಟಿ ಕೊಟ್ಟು ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು.
ಅಲ್ಲದೆ ಹಾಲಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಜೊತೆ ಫೋಟೊ ಮತ್ತು ಸೆಲ್ಫಿ ತೆಗೆದುಕೊಂಡಿರುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಕುಟುಂಬದವರಿಂದ ವರದಕ್ಷಿಣೆ ಕಿರುಕುಳ ನೀಡಲಾಗಿದೆ ಎಂದು ಬಿಎಸ್ವೈ ಬಳಿ ಅವಲತ್ತು ತೋಡಿಕೊಂಡಿದ್ದ ಮಹಿಳೆಗೆ ಖುದ್ದು ಸಹಾಯ ಮಾಡಿ ನ್ಯಾಯ ಒದಗಿಸಿಕೊಡುವ ಭರವಸೆಯನ್ನು ನೀಡಿದ್ದರು ಎನ್ನಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಯಡಿಯೂರಪ್ಪನವರೇ ಕರೆ ಮಾಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮಾಡುವಂತೆ ಸೂಚನೆ ನೀಡಿದ್ದರು. ಏಕಾಏಕಿ ಯಡಿಯೂರಪ್ಪ ವಿರುದ್ಧವೇ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿರುವುದು ಹುಬ್ಬೇರುವಂತೆ ಮಾಡಿದೆ. ಅದರಲ್ಲೂ ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಅವರ ರಾಜಕೀಯ ಎದುರಾಳಿಗಳ ಕೈವಾಡ ಇದೆಯೇ ಎಂಬ ಸಂಶಯ ಎದುರಾಗಿದೆ.
ಇನ್ನು ಪ್ರಕರಣ ಕುರಿತಂತೆ ಕಾನೂನು ಮೂಲಕವೇ ಹೋರಾಟ ನಡೆಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಉಪಕಾರ ಮಾಡಿದವರಿಗೆ ಇಂತಹ ದೂರುಗಳು ಬರುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಪ್ರಕರಣದಲ್ಲಿ ರಾಜಕೀಯ ಬೆರೆಸಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು, ಯಡಿಯೂರಪ್ಪನವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಜೊತೆಗೆ ಪ್ರಭಾವಿ ನಾಯಕರು. ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ದೂರು ದಾಖಲಾದ ತಕ್ಷಣ ಅವರನ್ನು ಬಂಸಬೇಕೆಂಬ ನಿಯಮವಿಲ್ಲ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಯಾರು ಏನು ಹೇಳಬೇಕೋ ಅದನ್ನು ಮಾತನಾಡುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಾಣ್ಮೆಯಿಂದ ಪ್ರತಿಕ್ರಿಯೆ ಕೊಟ್ಟಿದ್ದಾರೆ.