Saturday, April 27, 2024
Homeರಾಜ್ಯನಾಳೆ ರಾಜ್ಯಕ್ಕೆ ಮೋದಿ ಆಗಮನ, ಮೊಳಗಲಿದೆ ರಣಕಹಳೆ

ನಾಳೆ ರಾಜ್ಯಕ್ಕೆ ಮೋದಿ ಆಗಮನ, ಮೊಳಗಲಿದೆ ರಣಕಹಳೆ

ಬೆಂಗಳೂರು,ಮಾ.15-ಲೋಕ ಸಭೆ ಚುನಾವಣೆ ಮಹಾಸಮರಕ್ಕೆ ದಿನಗಣನೆ ಪ್ರಾರಂಭವಾಗಿರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಕರುನಾಡಿನಲ್ಲಿ ಬಹಿರಂಗ ಪ್ರಚಾರಕ್ಕೆ ಚಾಲನೆ ನೀಡುವ ಮೂಲಕ ರಣ ಕಹಳೆ ಮೊಳಗಿಸಲಿದ್ದಾರೆ. ಕಲಬುರಗಿಯ ಎನ್ಎಂಆರ್ವಿ ಕಾಲೇಜಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಅಂದಾಜು ಒಂದು ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿಯವರು ಭಾಷಣ ಮಾಡಲಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ಭಾಗಿಯಾಗಲಿದ್ದಾರೆ. ಕಲಬುರಗಿ, ರಾಯಚೂರು, ಬಿಜಾಪುರ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕದ ಲೋಕಸಭಾ ಕ್ಷೇತ್ರಗಳನ್ನು ಗುರಿಯಾಗಿಟ್ಟು ಕೊಂಡು ಮೋದಿ ಬಿಜೆಪಿ ಪರವಾಗಿ ಪ್ರಚಾರವನ್ನು ನಡೆಸಲಿದ್ದಾರೆ.

2019ರ ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿ ಕಲ್ಯಾಣ ಕರ್ನಾಟಕದ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಆದರೆ 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು.

ಇದೀಗ ಪುನಃ ಬಿಜೆಪಿ ತನ್ನ ಪಾರುಪತ್ಯ ಮೆರೆಯಲು ಮುಂದಾಗಿದ್ದು, ಲೋಕಸಭೆ ದಿನಾಂಕ ಘೋಷಣೆಯಾಗುವ ಮೊದಲೇ ಬಿಜೆಪಿಯ ತಾರಾ ಪ್ರಚಾರಕರು ಆಗಿರುವ ಮೋದಿ ಅವರಿಂದ ಭರ್ಜರಿ ಸಾರ್ವಜನಿಕ ಸಮಾರಂಭ ನಡೆಸಿ ಮತ ಬುಟ್ಟಿಗೆ ಕೈಹಾಕಲಿದೆ.
ಬಿಜೆಪಿ ಬಿಡುಗಡೆ ಮಾಡಿರುವ 20 ಕ್ಷೇತ್ರಗಳ ಪಟ್ಟಿಯಲ್ಲಿ ಕಲಬುರಗಿಯಿಂದ ಡಾ.ಉಮೇಶ್ ಜಾಧವ್, ಬಳ್ಳಾರಿಯಿಂದ ಶ್ರೀರಾಮುಲು, ಕೊಪ್ಪಳದಿಂದ ಬಸವರಾಜ್ ಕ್ಯಾವಟಗಿ, ಬಾಗಲಕೋಟೆಯಿಂದ ಗದ್ದಿಗೌಡರ್, ಬೀದರ್ನಿಂದ ಭಗವಂತ ಕೂಬ, ಬಿಜಾಪುರದಿಂದ ರಮೇಶ್ ಜಿಗಜಿಣಗಿಗೆ ಟಿಕೆಟ್ ಘೋಷಣೆ ಮಾಡಿದೆ.

ಆದರೆ ಬೇರೆ ಬೇರೆ ಕಾರಣಗಳಿಂದ ರಾಯಚೂರಿಗೆ ಟಿಕೆಟ್ ಘೋಷಣೆ ಮಾಡಿಲ್ಲ. ಕಲಬುರಗಿಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಬಿಜೆಪಿ ನಾಯಕರು ಟೊಂಕ ಕಟ್ಟಿ ನಿಂತಿದ್ದಾರೆ. ಏಳು ಲೋಕಸಭಾ ಕ್ಷೇತ್ರಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಕರೆತರುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಕಲಬುರಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭದ್ರಕೋಟೆಯಾಗಿದೆ. ಸೋಲಿಲ್ಲದ ಸರದಾರ ಎಂದೇ ಖ್ಯಾತಿಯಾಗಿದ್ದ ಖರ್ಗೆ ಅವರನ್ನು ಕಳೆದ ಬಾರಿ ಬಿಜೆಪಿ ವಿಶೇಷ ರಣತಂತ್ರ ಹೆಣೆದು ಸೋಲಿನ ರುಚಿ ತೋರಿಸಿತ್ತು. ಇದೀಗ ಕಾಂಗ್ರೆಸ್ ಈ ಕ್ಷೇತ್ರಕ್ಕೆ ತನ್ನ ಹುರಿಯಾಳನ್ನು ಈವರೆಗೂ ಘೋಷಣೆ ಮಾಡಿಲ್ಲ. ಆದರೂ ಬಿಜೆಪಿ ತನ್ನ ಕಮಲವನ್ನು ಅರಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ.

RELATED ARTICLES

Latest News