Friday, November 22, 2024
Homeರಾಜ್ಯಪೋಕ್ಸೊ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಬಂಧನದ ಭೀತಿ

ಪೋಕ್ಸೊ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಬಂಧನದ ಭೀತಿ

ಬೆಂಗಳೂರು,ಜೂ.13– ಪೋಕ್ಸೊ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್‌‍.ಯಡಿಯೂರಪ್ಪ ಅವರಿಗೆ ಬಂಧನದ ಭೀತಿ ಎದುರಾಗಿದೆ. ಯಡಿಯೂರಪ್ಪ ಅವರನ್ನು ಬಂಧಿಸಲು ಸಿಐಡಿ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಜಾಮೀನುರಹಿತ ವಾರೆಂಟ್‌ ಹೊರಡಿಸಬೇಕೆಂದು ಪೊಲೀಸರು ನಿನ್ನೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಇಂದು 42 ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿ, ವಾರೆಂಟ್‌ ಜಾರಿ ಮಾಡಿದರೆ ಪೊಲೀಸರು ಬಿ.ಎಸ್‌‍.ಯಡಿಯೂರಪ್ಪ ಅವರನ್ನು ಬಂಧಿಸುವ ಸಾಧ್ಯತೆ ಇದೆ.

ಮತ್ತೊಂದೆಡೆ ತನಿಖೆಗೆ ಹಾಜರಾಗುವಂತೆ ಪೊಲೀಸರು ನೀಡಿದ್ದ ನೋಟೀಸ್‌‍ಗೆ ಯಡಿಯೂರಪ್ಪ ಈಗಾಗಲೇ ಉತ್ತರಿಸಿದ್ದಾರೆ. ಕಳೆದ ಮಾ.28 ರಂದು ನೀಡಿದ್ದ ನೋಟೀಸ್‌‍ನಂತೆ ಹಾಜರಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೆ. ಜೂ.12 ರಂದು ತಾವು ನೀಡಿರುವ ನೋಟೀಸ್‌‍ ನನಗೆ ನಿನ್ನೆಯಷ್ಟೇ ತಲುಪಿದೆ.

ನಾನು ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿರುವುದರಿಂದ ದೆಹಲಿಗೆ ತೆರಳುತ್ತಿದ್ದೇನೆ. ಹೀಗಾಗಿ ಈ ಬಾರಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಜೂ. 17 ರಂದು ನಾನು ಖುದ್ದಾಗಿ ವಿಚಾರಣೆಗೆ ಹಾಜರಾಗುತ್ತೇನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ನಾನು ತನಿಖೆಗೆ ಸಹಕರಿಸಿದ್ದೇನೆ. ಹೀಗಾಗಿ ವಿನಾಯಿತಿ ನೀಡಬೇಕೆಂದು ಮನವಿ ಮಾಡಿದ್ದರು.

ತಮ ಅಪ್ರಾಪ್ತ ಪುತ್ರಿಯೊಂದಿಗೆ ಬಿಎಸ್‌‍ವೈ ಅವರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕಳೆದ ಮಾರ್ಚ್‌ನಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದರು. ಆ ಮಹಿಳೆ ಅನಾರೋಗ್ಯದಿಂದ ಮೃತಪಟ್ಟರು. ಮಹಿಳೆಯ ದೂರಿಗೆ ಸಂಬಂಧಿಸಿದಂತೆ ಬಿ.ಎಸ್‌‍.ಯಡಿಯೂರಪ್ಪ ಅವರಿಗೆ ನೋಟೀಸ್‌‍ ಜಾರಿಗೊಳಿಸಿದ್ದ ಪೊಲೀಸರು ನಿನ್ನೆ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದರು.

ಮತ್ತೊಂದೆಡೆ ಯಡಿಯೂರಪ್ಪ ಅವರು ಈ ಪ್ರಕರಣದ ರದ್ದು ಕೋರಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅಲ್ಲದೆ, ವಿಚಾರಣೆಗೆ ಹಾಜರಾಗುವಂತೆ ನೀಡಿರುವ ನೋಟೀಸ್‌‍ಗೂ ಉತ್ತರ ನೀಡಿ ಜೂನ್‌ 17 ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.ಇಂದು ಮಧ್ಯಾಹ್ನ 42ನೇ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪೊಲೀಸರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯಲಿದೆ. ನ್ಯಾಯಾಧೀಶರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದರ ಮೇಲೆ ಯಡಿಯೂರಪ್ಪನವರ ಬಂಧನ ನಿರ್ಧಾರವಾಗಲಿದೆ.

RELATED ARTICLES

Latest News