ಬೆಂಗಳೂರು, ನ.11- ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ, ಹಾಲಿ ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಸ್ವಪಕ್ಷದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಬಿಜೆಪಿ ಹೈಕಮಾಂಡ್ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರನ್ನು ನೇಮಕ ಮಾಡುವಂತೆ ಆದೇಶ ನೀಡಿದೆ. ಇದು ಸದ್ಯ ರಾಜ್ಯ ಕಮಲ ಪಾಳಯದಲ್ಲಿ ಅಸಮಾಧಾನಕ್ಕೆ ನಾಂದಿ ಹಾಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ ಅವರು ಬದಲಾಗದೆ ಇರೋದು ಕಾರ್ಯಕರ್ತ ಅನ್ನೋದು, ನಾನೊಬ್ಬ ಈಗ ಸಾಮಾನ್ಯ ಕಾರ್ಯಕರ್ತ ಅಷ್ಟೆ. 35 ವರ್ಷಗಳ ರಾಜಕೀಯದಲ್ಲಿ ಈಗಾಗಲೆ ಬಹಳ ವಿಷಯ ಮಾತನಾಡಿ ಬಿಟ್ಟಿದ್ದೇನೆ. ಈಗ ಏನಾದರೂ ಮಾತನಾಡಿದ್ರೆ ನಮ್ಮ ಮಾತೆ ನಮಗೆ ತಿರುಗುಬಾಣವಾಗುತ್ತದೆ ಎಂದು ಹೇಳಿದರು.
ಪಕ್ಷ ನೇಮಕ ಮಾಡಿದೆ, ವೈಚಾರಿಕ ಭದ್ರತೆ ಜೊತೆಗೆ ಪಕ್ಷ ಕಟ್ಟಿ ಬೆಳೆಸುವ ಕೆಲಸ ಮಾಡಬೇಕಿದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲಿಸುವ ಹೊಣೆಗಾರಿಕೆ ಇದೆ. ಅಸಮಾಧಾನದ ಬಗ್ಗೆ ಈಗ ನಾನು ಏನೂ ಮಾತನಾಡಲ್ಲ. ಈಗಾಗಲೆ ಬಹಳಷ್ಟು ಮಾತನಾಡಿದ್ದೇನೆ. 35 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದೀನಿ. ಬೂತ್ ಅಧ್ಯಕ್ಷನಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿವರೆಗೆ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂದು ಹೇಳುತ್ತಾ ತಲೆ ಮೇಲೆ ಕೈಯಿಟ್ಟುಕೊಂಡು ತೆರಳಿದರು.
ಜೈ ಶ್ರೀರಾಮ್ ಘೋಷಣೆ ಏಕತೆಯ ಸಂಕೇತ : ಜಾವೇದ್ ಅಖ್ತರ್
ಇದೇ ಸಮಯದಲ್ಲಿ ರಾಜ್ಯದಲ್ಲಿ ಬಿಎಸ್‍ವೈ ರೀತಿ ವಿಜಯೇಂದ್ರ ಪಕ್ಷ ಕಟ್ಟುವ ಕೆಲಸ ಮಾಡಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮಂತೆ ಸಾಕಷ್ಟು ಜನ ಸೋತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಕೆಲಸ ಮಾಡಬೇಕಿದೆ. ಸಾಕಷ್ಟು ನಾಯಕರು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಎಲ್ಲರಿಗೂ ಎಲ್ಲಾ ಸಮಯದಲ್ಲಿ ಸಮಾಧಾನ ಮಾಡಲು ಆಗಲ್ಲ. ವರಿಷ್ಠರ ತೀರ್ಮಾನದಂತೆ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸಿ.ಟಿ.ರವಿ ಹೇಳಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ , ಸಿ.ಟಿ. ರವಿ, ಬಸನಗೌಡ ಪಾಟೀಲ್ ಯತ್ನಾಳ್, ವಿ. ಸೋಮಣ್ಣ, ಆರ್. ಅಶೋಕ್, ಅಶ್ವಥ್ ನಾರಾಯಣ್ ಸೇರಿದಂತೆ ಹಲವರ ಹೆಸರು ಬಿಜೆಪಿ ರಾಜ್ಯಾಧ್ಯಕ್ಷರ ರೇಸ್‍ನಲ್ಲಿ ಪ್ರಮುಖವಾಗಿ ಕೇಳಿ ಬಂದಿತ್ತು. ಆದರೀಗ ಅವರನ್ನೆಲ್ಲ ಹಿಂದಿಕ್ಕಿ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್ ಗೆದ್ದಿದ್ದಾರೆ. ಇನ್ನೇನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೇ ಬಿಜೆಪಿ ರಾಜ್ಯಾಧ್ಯಕ್ಷೆ ಆಗೇ ಬಿಡ್ತಾರೆ ಎಂಬ ಸುದ್ದಿ ದಟ್ಟವಾಗಿಯೇ ಹರಿದಾಡುತ್ತಿತ್ತು.
ಮಾತ್ರವಲ್ಲದೆ, ಮಾಜಿ ಸಚಿವ ಸಿ.ಟಿ.ರವಿ ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಅಷ್ಟೇ ಈ ರೇಸ್‍ನಲ್ಲಿದ್ದ ಮಾಜಿ ಸಚಿವ ವಿ.ಸೋಮಣ್ಣಗೂ ಬಿಜೆಪಿ ಹೈಕಮಾಂಡ್ ಶಾಕ್ ಕೊಟ್ಟಿದೆ. ಇನ್ನು ಬಸನಗೌಡ ಪಾಟೀಲ್ ಯತ್ನಾಳ್‍ಗೂ ಬಿಜೆಪಿ ಹೈಕಮಾಂಡ್ ಮಣೆ ಹಾಕಲಿಲ್ಲ. ಹೀಗಾಗಿ ಆಕಾಂಕ್ಷಿಗಳಲ್ಲಿ ಹೈಕಮಾಂಡ್‍ನ ಈ ನಿರ್ಧಾರ ಬೇಸರ ತಂದಿದೆ.