ಬೆಂಗಳೂರು,ನ.10- ರಾಜ್ಯದ ಮಿನಿ ಮಹಾಸಮರ ಎಂದೇ ಪರಿಗಣಿಸಲಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಬಹಿರಂಗ ಪ್ರಚಾರಕ್ಕೆ ನಾಳೆ ಸಂಜೆ ತೆರೆ ಬೀಳಲಿದೆ. ಹೀಗಾಗಿ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರೇ ಅಖಾಡಕ್ಕಿಳಿದು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ಸಂಡೂರು, ಚನ್ನಪಟ್ಟಣ, ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳಲ್ಲಿ ನಾಳೆ ಸಂಜೆ 5.30ಕ್ಕೆ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಮತದಾರರಲ್ಲದವರು ಆಯಾ ಕ್ಷೇತ್ರ ಬಿಟ್ಟು ತೆರಳಬೇಕಾಗುತ್ತದೆ. ಹೀಗಾಗಿ ಇಂದು ಮತ್ತು ನಾಳೆ ರಾಜಕೀಯ ಪಕ್ಷಗಳ ನಾಯಕರು, ಮುಖಂಡರು, ಕಾರ್ಯಕರ್ತರು ಬಿರುಸಿನ ಚುನಾವಣಾ ಪ್ರಚಾರವನ್ನು ಕೈಗೊಂಡಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ಎನ್ಡಿಎ ಅಭ್ಯರ್ಥಿ ನಿಖಿಲ್ಕುಮಾರಸ್ವಾಮಿ ಸೇರಿದಂತೆ ಒಟ್ಟು 31 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರ ಹನುಮಂತ, ಕಾಂಗ್ರೆಸ್ನ ಇ.ಅನ್ನಪೂರ್ಣ ಸೇರಿದಂತೆ 6 ಮಂದಿ ಅಭ್ಯರ್ಥಿ ಚುನಾವಣಾ ಕಣದಲ್ಲಿದ್ದರೆ, ಶಿಗ್ಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮಾಯಿ, ಕಾಂಗ್ರೆಸ್ ಅಭ್ಯರ್ಥಿ ಪಠಾಣ ಯಾಸೀರ್ ಅಹಮದ್ ಖಾನ್ ಸೇರಿದಂತೆ ಒಟ್ಟು 8 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮಾಯಿ, ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಸಚಿವರು, ಶಾಸಕರು, ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ ಸಂಸದರ ದಂಡೇ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿದ್ದು, ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ.
ಹೈವೋಲ್ಟೇಜ್ ಕ್ಷೇತ್ರವೆಂದೇ ಪರಿಗಣಿಸಲಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರವಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ನಿರಂತರ ಪ್ರಚಾರದಲ್ಲಿ ತೊಡಗಿದ್ದಾರೆ. ಈಗಾಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಸಚಿವರು, ಶಾಸಕರು ಸೇರಿದಂತೆ ನಾಯಕರ ದಂಡೇ ಕ್ಷೇತ್ರದಲ್ಲಿದ್ದು, ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಅದೇ ರೀತಿ ಎನ್ಡಿಎ ಅಭ್ಯರ್ಥಿ ನಿಖಿಲ್ಕುಮಾರಸ್ವಾಮಿ ಪರವಾಗಿ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ನಿರಂತರ ಪ್ರಚಾರ ನಡೆಸುತ್ತಿದ್ದು, ಇದಕ್ಕೆ ಬಿಜೆಪಿ ಮತ್ತು ಜೆಡಿಎಸ್ನ ಇತರ ನಾಯಕರು ಸಾಥ್ ನೀಡಿದ್ದಾರೆ. ಇಂದು ಜೆಡಿಎಸ್ ನಾಯಕರೊಂದಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಚನ್ನಪಟ್ಟಣದಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಸಂಜೆ ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ ಯಾಸೀರ್ ಅಹಮದ್ ಖಾನ್ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ.ಆಡಳಿತ ಮತ್ತು ವಿರೋಧ ಪಕ್ಷಗಳ ಪ್ರತಿಷ್ಟೆಯಾಗಿರುವ ಈ ಉಪಚುನಾವಣೆಯಲ್ಲಿ ಅಭಿವೃದ್ಧಿ ವಿಚಾರ ಮುನ್ನಲೆಗೆ ಬಂದಿದ್ದು, ಪರಸ್ಪರ ಆರೋಪ, ಪ್ರತ್ಯಾರೋಪಗಳಿಗೆ ಎಡೆ ಮಾಡಿಕೊಟ್ಟಿದೆ.
ಕಾಂಗ್ರೆಸ್ ನಾಯಕರು, ಮುಖಂಡರು ತಮ ಪಕ್ಷದ ಅಭ್ಯರ್ಥಿಗಳ ಪರ ಮೂರು ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸೇರಿದಂತೆ ಕಾಂಗ್ರೆಸ್ ಆಡಳಿತದ ಸಾಧನೆಗಳನ್ನು ಮುಂದಿಟ್ಟು ಮತ ಯಾಚಿಸುತ್ತಿದ್ದಾರೆ.
ಬಿಜೆಪಿ, ಜೆಡಿಎಸ್ ನಾಯಕರು, ಮುಖಂಡರು ತಮ ತಮ ಪಕ್ಷಗಳ ಆಡಳಿತಾವಧಿಯಲ್ಲಿ ಮಾಡಿರುವ ಅಭಿವೃದ್ದಿ ಕಾರ್ಯಗಳು, ಕೇಂದ್ರ ಸರ್ಕಾರದ ಸಾಧನೆ ಮುಂದಿಟ್ಟುಕೊಂಡು ಎನ್ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ವಿಚಾರ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ರಾಜಕೀಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಎನ್ಡಿಎ ನಾಯಕರು ಇದನ್ನೇ ಪ್ರಮುಖ ಅಸ್ತ್ರವಾಗಿ ಬಳಸುತ್ತಿದ್ದಾರೆ.
ಬಹಿರಂಗ ಪ್ರಚಾರಕ್ಕೆ ನಾಳೆ ಕಡೆ ದಿನವಾಗಿರುವುದರಿಂದ ಆಯಾ ಕ್ಷೇತ್ರಗಳಲ್ಲಿ ರ್ಯಾಲಿ, ಸಭೆ, ಬಹಿರಂಗ ಸಭೆ, ಸಮಾರಂಭಗಳ ಮೂಲಕ ಪ್ರಚಾರ ಕೈಗೊಂಡು ಮತ ಯಾಚಿಸುತ್ತಿದ್ದಾರೆ. ಅಲ್ಲದೆ ಮನೆ ಮನೆಗಳಿಗೆ ತೆರಳಿ ಕರಪತ್ರ ವಿತರಿಸಿ ಮತಯಾಚನೆ ಮಾಡುತ್ತಿದ್ದಾರೆ. ಮತದಾರರ ಓಲೈಕೆಗೆ ತಮ ತಮ ಪಕ್ಷಗಳ ಸಾಧನೆ ಮುಂದಿಟ್ಟಿರುವುದಲ್ಲದೆ ನಾನಾ ಭರವಸೆಗಳನ್ನು ನೀಡುತ್ತಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ರಾಜಕೀಯ ನಾಯಕರ ದಂಡೇ ಬೀಡುಬಿಟ್ಟಿದ್ದು, ಚುನಾವಣಾ ಕಣ ರಂಗೇರಿದೆ.
ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದ್ದು, ಪ್ರಚಾರದ ಕಾವು ತಾರಕಕ್ಕೇರಿದೆ. ಈ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಆಡಳಿತಾರೂಢ ಕಾಂಗ್ರೆಸ್ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ತಮ ತಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಹರಸಾಹಸ ಪಡುತ್ತಿವೆ. ಇದಕ್ಕಾಗಿ ನಾನಾ ತಂತ್ರ, ಪ್ರತಿತಂತ್ರಗಳ ಮೂಲಕ ಚುನಾವಣಾ ಅಖಾಡಕ್ಕೆ ಇಳಿದಿವೆ.
ಅಭ್ಯರ್ಥಿಗಳ ಪರ ಮತದಾರರ ಮನವೊಲಿಸಲು ನಿರಂತರ ಪ್ರಯತ್ನ ಪಡೆಯುತ್ತಿದ್ದು, ಶತಾಯಗತಾಯ ಗೆಲುವು ಸಾಧ್ಯವಿರುವ ಎಲ್ಲಾ ತಂತ್ರಗಾರಿಕೆಗಳನ್ನು ಹಾಗೂ ಪ್ರಯತ್ನಗಳನ್ನು ಹಗಲಿರುಳು ಎನ್ನದೆ ಮಾಡುತ್ತಿವೆ. ಹೀಗಾಗಿ ಮೂರು ಕ್ಷೇತ್ರಗಳಲ್ಲೂ ಚುನಾವಣೆ ಪ್ರಚಾರ ಕೊರೆಯುವ ಚಳಿಯಲ್ಲೂ ಕಾವೇರಿದಂತಾಗಿದೆ.