Thursday, September 19, 2024
Homeರಾಜಕೀಯ | Politics3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ : ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ದೋಸ್ತಿಗಳ ತಯಾರಿ

3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ : ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ದೋಸ್ತಿಗಳ ತಯಾರಿ

ಬೆಂಗಳೂರು,ಆ.16- ಜಿದ್ದಾಜಿದ್ದಿನ ಕುರುಕ್ಷೇತ್ರವಾಗಲಿರುವ ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕೆಲವು ಸಣ್ಣಪುಟ್ಟ ಗೊಂದಲದ ನಡುವೆಯೂ ಬಿಜೆಪಿ-ಜೆಡಿಎಸ್ ಎನ್ಡಿಎ ಮೈತ್ರಿಕೂಟ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿವೆ.
ಲೋಕಸಭಾ ಚುನಾವಣೆಯಲ್ಲೂ ಎರಡು ಪಕ್ಷಗಳ ಮುಖಂಡರ ನಡುವೆ ಸುಮಧುರ ಬಾಂಧವ್ಯವೇನೂ ಇರಲಿಲ್ಲ. ಹಲವು ಗೊಂದಲಗಳ ನಡುವೆಯೂ 28 ಲೋಕಸಭಾ ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳನ್ನು ಗೆದ್ದು ಬೀಗಿತ್ತು.

ಅಂದರೆ ರಾಜ್ಯದ ಜನತೆ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಒಪ್ಪಿಕೊಂಡಿರುವುದಕ್ಕೆ ಈ ಫಲಿತಾಂಶವೇ ಸಾಕ್ಷಿ ಎಂಬುದು ಉಭಯ ಪಕ್ಷಗಳ ಮುಖಂಡರ ವಾದವಾಗಿದೆ. ಈಗ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳಿಗೆ ಒಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಆಡಳಿತಾರೂಢ ಕಾಂಗ್ರೆಸ್ಗೆ ಹಿನ್ನಡೆ ಉಂಟು ಮಾಡುವ ಲೆಕ್ಕಾಚಾರದಲ್ಲಿ ಉಭಯಪಕ್ಷಗಳ ಮುಖಂಡರಿದ್ದಾರೆ.

ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮುರಿಯಲು ಅವಕಾಶ ಕೊಡುವುದಿಲ್ಲ ಎಂದು ಕೇಂದ್ರ ವರಿಷ್ಠರು ಸ್ಪಷ್ಟ ಸಂದೇಶವನ್ನು ರಾಜ್ಯಘಟಕಕ್ಕೆ ರವಾನಿಸಿದ್ದಾರೆ.ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ನಡುವೆಯೂ ಕಾಂಗ್ರೆಸ್ಗೆ ಹಿನ್ನಡೆ ಉಂಟುಮಾಡಬೇಕಾದರೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಇದಕ್ಕಾಗಿ ಕೆಲವರು ತ್ಯಾಗ ಮಾಡಬೇಕೆಂದು ಸೂಚನೆಯನ್ನು ನೀಡಲಾಗಿದೆ.

ಪ್ರತಿಷ್ಠೆಯ ಕಣವಾಗಿರುವ ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿಯಿಂದಲೇ ಜೆಡಿಎಸ್ಗೆ ಬಿಟ್ಟುಕೊಡುವುದರ ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಚರ್ಚಿಸಿ ಅಂತಿಮ ನಿರ್ಧಾರ ತಿಳಿಸುವುದಾಗಿ ವರಿಷ್ಠರು ಬಿಜೆಪಿ ಆಕಾಂಕ್ಷಿಯಾಗಿರುವ ಸಿ.ಪಿ.ಯೋಗೀಶ್ವರ್ ಅವರಿಗೆ ತಿಳಿಸಿದ್ದಾರೆ.

ಎರಡು ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಉಪಚುನಾವಣೆ ಎದುರಿಸೋಣ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಅಂದರೆ ಕಾಂಗ್ರೆಸ್ಗೆ ಲಾಭವಾಗದಂತೆ ನೋಡಿಕೊಳ್ಳಬೇಕೆಂಬ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಜಿದ್ದಾಜಿದ್ದಿನ ಕುರುಕ್ಷೇತ್ರವಾಗಲಿರುವ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಹಾಲಿ ಸಂಸಸ ಡಾ. ಸಿ.ಎನ್.ಮಂಜುನಾಥ್ ಅವರ ಪತ್ನಿ ಅನುಸೂಯ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿದರೆ ಹೇಗೆ ಎಂಬ ಚರ್ಚೆ ನಡೆಯುತ್ತಿದೆ.

ಕಾಂಗ್ರೆಸ್ನಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಣಕ್ಕಿಳಿಯಲಿರುವ ಬಗ್ಗೆ ಚರ್ಚೆಗಳು ನಡೆಯತ್ತಿರುವ ಹಿನ್ನೆಲೆಯಲ್ಲಿ ಮೈತ್ರಿಕೂಟದಲ್ಲಿ ರಾಜಕೀಯ ಲೆಕ್ಕಾಚಾರಗಳು ತೀವ್ರಗೊಂಡಿವೆ. ಹಾವೇರಿ ಜಿಲ್ಲೆ ಶಿಗ್ಗಾವಿಗೆ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮಾಯಿ ಅವರ ಪುತ್ರ ಭರತ್ ಬೊಮಾಯಿ ಹಾಗೂ ಬಳ್ಳಾರಿ ಜಿಲ್ಲೆ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಬಿ. ಶ್ರೀರಾಮುಲು ಟಿಕೆಟ್ಗಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ, ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭದ್ರಕೋಟೆಯಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ನಿರೀಕ್ಷೆಗೂ ಮೀರಿದ ದಾಖಲೆಯ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಚನ್ನಪಟ್ಟಣ ಉಪಚುನಾವಣೆ ಕಣ ಮದಗಜಗಳ ಹೋರಾಟದ ಜೊತೆಗೆ ಒಕ್ಕಲಿಗ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರ ಹೋರಾಟದ ನಡುವೆ, ಒಕ್ಕಲಿಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಯೋಜಿಸಲಾಗುತ್ತಿದೆ. ಹೀಗಾಗಿ ಚನ್ನಪಟ್ಟಣ ಉಪಚುನಾವಣೆ ಒಕ್ಕಲಿಗರ ಪ್ರಬಲ ನಾಯಕರಿಬ್ಬರ ನಡುವಿನ ಪ್ರತಿಷ್ಠೆಯ ಕಣವಾಗಲಿದೆ.

ಚನ್ನಪಟ್ಟಣ ಕ್ಷೇತ್ರ; ಇನ್ನೊಂದೆಡೆ ಸಿ.ಪಿ.ಯೋಗೇಶ್ವರ್ ಸಹ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರ ಜೊತೆಗೆ ಈಗಾಗಲೇ ಒಂದೆರಡು ಸುತ್ತಿನ ಮಾತುಕತೆ ನಡೆಸಿದ್ದಾರೆ. ಚನ್ನಪಟ್ಟಣ ಕ್ಷೇತ್ರಕ್ಕೆ ಈಗಾಗಲೇ ಕಾಲಿಟ್ಟಿರುವ ಡಿ.ಕೆ.ಶಿವಕುಮಾರ್ ಅವರು, ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಎಂಬ ಕಾರ್ಯಕ್ರಮದ ಮೂಲಕ ಜನರ ನಾಡಿಮಿಡಿತ ತಿಳಿಯಲು ಮುಂದಾಗಿದ್ದಾರೆ. ಇದೇ ವೇಳೆ ಅನ್ಯ ಪಕ್ಷಗಳಲ್ಲಿರುವ ಮುಖಂಡರನ್ನು ತಮ ಪಕ್ಷಕ್ಕೆ ಸೆಳೆಯುವ ಕೆಲಸವನ್ನೂ ಡಿಕೆಶಿ ಅವರು ಮಾಡುತ್ತಿದ್ದಾರೆ.

ಶಿಗ್ಗಾವಿ ಕ್ಷೇತ್ರ; ಇನ್ನು, ಮಾಜಿ ಮುಖ್ಯಮಂತ್ರಿ ಬೊಮಾಯಿ ಅವರು ಹಾವೇರಿ ಲೋಕಸಭಾ ಕ್ಷೇತ್ರದಿಂದ ವಿಜೇತರಾಗಿರುವ ಹಿನ್ನಲೆ ತೆರವಾಗಿರುವ ಶಿಗ್ಗಾವಿ ಕ್ಷೇತ್ರಕ್ಕೆ ಪುತ್ರ ಭರತ್ ಬೊಮಾಯಿ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ. ಕುಟುಂಬದವರಿಗೆ ಟಿಕೆಟ್ ಕೊಟ್ಟರೆ ಬೊಮಾಯಿ ಅವರೇ ವಿಶೇಷ ಗಮನಹರಿಸಿ ಪುತ್ರನನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ. ಹೀಗಾಗಿ ಅವರನ್ನು ಅಭ್ಯರ್ಥಿ ಮಾಡಬೇಕೆಂಬ ಒತ್ತಡವೂ ಕೇಳಿಬಂದಿದೆ. ಇದೇ ರೀತಿ ಕಳೆದ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆ ಎರಡೂ ಚುನಾವಣೆಗಳಲ್ಲಿ ಸೋತು ರಾಜಕೀಯ ಅತಂತ್ರಕ್ಕೆ ಸಿಲುಕಿರುವ ಬಿ.ಶ್ರೀರಾಮುಲು ಮತ್ತೊಮೆ ಅದೃಷ್ಟ ಪರೀಕ್ಷೆಗಿಳಿಯಲು ಹವಣಿಸುತ್ತಿದ್ದಾರೆ.

ಸಂಡೂರು ಕ್ಷೇತ್ರ; ಬಳ್ಳಾರಿ ಸಂಸದ ತುಕಾರಾಂ ರಾಜೀನಾಮೆಯಿಂದ ತೆರವಾಗಿರುವ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ರಾಮುಲು ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಆದರೆ ಎರಡು ಚುನಾವಣೆಗಳಲ್ಲಿ ಸೋತಿರುವ ಶ್ರೀರಾಮುಲ್ ಬದಲಿಗೆ ತಮ ಆಪ್ತ ಕೆ.ಎಸ್. ದಿವಾಕರ್ ಬಾಬುಗೆ ಟಿಕೆಟ್ ಕೊಡಿಸಲು ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ಒಟ್ಟಾರೆ, ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇನ್ನೂ ಚುನಾವಣೆ ದಿನಾಂಕ ಘೋಷಣೆಯಾಗದಿದ್ದರೂ, ಮೂರು ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ. ಬಿಜೆಪಿ- ಜೆಡಿಎಸ್ ಮೈತ್ರಿಕೂಟ ಹಾಗೂ ಕಾಂಗ್ರೆಸ್ ನಾಯಕರ ಲೆಕ್ಕಾಚಾರ ಮಾತ್ರ ನಿಗೂಢವಾಗಿದೆ.

RELATED ARTICLES

Latest News