ಬೆಂಗಳೂರು,ನ.3- ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮಗೆ ಸುತ್ತಿಕೊಂಡಿ ರುವ ಮುಡಾ ಹಗರಣದ ಉರುಳಿನಿಂದ ಹಿಡಿದು,ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದ ಕಳಂಕಗಳನ್ನು ಹೊತ್ತ ನೀವು ರಾಜಕೀಯ ಜೀವನದಲ್ಲಿ ಮುಂದೆಂದೂ ಕಳಂಕ ರಹಿತರಾಗಿ ಹೊರಬರಲು ಸಾಧ್ಯವೇ ಇಲ್ಲ ಎನ್ನುವುದನ್ನು ಸದ್ಯದ ತನಿಖೆಗಳು ಹಾಗೂ ಹೊರ ಬಂದಿರುವ ನ್ಯಾಯಾಲಯದ ತೀರ್ಪುಗಳಲ್ಲಿ ವ್ಯಕ್ತವಾಗುತ್ತಿದೆ ಎಂದು ರಾಜ್ಯ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಎಚ್ಚರಿಸಿದ್ದಾರೆ.
ಕೆಂಪಣ್ಣ ಆಯೋಗವನ್ನು ರಚಿಸಿ ಅರ್ಕಾವತಿ ರೀಡೂ ಪ್ರಕರಣವನ್ನು ಬದಿಗೆ ಸರಿಸಿ ಬಚಾವಾದಂತೆ ಮುಡಾ ಪ್ರಕರಣವನ್ನು ನೀವು ಬದಿಗೆ ಸರಿಸಿ ಪಾರಾಗಲು ಸಾಧ್ಯವೇ ಇಲ್ಲ ಎನ್ನುವುದನ್ನು ಕಾಲವೇ ಉತ್ತರ ಹೇಳಲಿದೆ ಎಂದು ಭವಿಷ್ಯ ನಡಿದಿದ್ದಾರೆ. ಈ ಕುರಿತು ತಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್‌್ಸ ನಲ್ಲಿ ಸಿಎಂ ವಿರುದ್ದ ಸರಣಿ ಪೋಸ್ಟ್ ಮಾಡಿರುವ ವಿಜಯೇಂದ್ರ,ನಿಮಗೆ ನೆನಪಿಸುತ್ತಿದ್ದೇನೆ, ನನ್ನ ಈ ಹಿಂದಿನ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ನಾನು ನಿಮ ವೈಯಕ್ತಿಕ ಬದುಕಿನ ಚರಿತ್ರೆಯನ್ನು ಪ್ರಶ್ನಿಸಿಲ್ಲ ಬದಲಾಗಿ ಈ ನಾಡು ಹಾಗೂ ಜನರ ಹಿತದೃಷ್ಟಿಯಿಂದ ಒಬ್ಬ ಮುಖ್ಯಮಂತ್ರಿಗೆ ಒಬ್ಬ ಪ್ರಜೆಯಾಗಿ ಕೇಳಬೇಕಾದ ಪ್ರಶ್ನೆಗಳನ್ನಷ್ಟೇ ಕೇಳಿದ್ದೇನೆ ಎಂದಿದ್ದಾರೆ.
ನೀವು ಅಸಂಬದ್ಧವಾಗಿ ಪ್ರತಿಕ್ರಿಯಿಸಿರುವುದನ್ನು ನೋಡಿದರೆ ಹಗರಣಗಳ ಸುಳಿಯಲ್ಲಿ ಸಿಲುಕಿಕೊಂಡು ಕಾನೂನಿನ ಕುಣಿಕೆಯ ಆತಂಕ ಎದುರಿಸುತ್ತಿರುವ ಪರಿಸ್ಥಿತಿಯಿಂದ ಹತಾಶೆಯ ಅಂಚಿಗೆ ತಲುಪಿರುವುದು ವೇದ್ಯವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾನು ಎತ್ತಿರುವ ಪ್ರಶ್ನೆಗಳಿಗೆ ನೀವು ಬಹಿರಂಗ ಚರ್ಚೆಗೆ ಬರಲು ಸಾಧ್ಯವಿಲ್ಲದಿದ್ದರೆ ಮಾಧ್ಯಮಗಳ ಮೂಲಕವೇ ಉತ್ತರಿಸಿ ನಿಮ ಸಾಧನೆಗಳನ್ನು ಬಣ್ಣಿಸಿಕೊಳ್ಳಿ ನೋಡೋಣ. ಎಂದು ಸವಾಲು ಹಾಕಿದ್ದಾರೆ.
ರಾಜ್ಯದ ಒಟ್ಟು ಅಭಿವೃದ್ಧಿಯ ದೃಷ್ಟಿಯಿಂದ ಆರೋಗ್ಯಕರ ಮನಸ್ಥಿತಿಯಿಂದ ನಾನು ನಿಮಗೆ ಪ್ರಶ್ನೆಗಳನ್ನು ಮುಂದಿಟ್ಟರೆ ಅದಕ್ಕೆ ಸೂಕ್ತ ರೀತಿಯಲ್ಲಿ ಉತ್ತರಿಸುವ ಬದಲು ಏತಿ ಎಂದರೆ ಪ್ರೇತಿ ಎಂದರು ಎಂಬಂತೆ ಪ್ರತಿಕ್ರಿಯಿಸಿದ್ದೀರಿ ಎಂದು ವ್ಯಂಗ್ಯವಾಡಿದ್ದಾರೆ.
ನನ್ನ ತಂದೆ ಯಡಿಯೂರಪ್ಪನವರು ಹೋರಾಟದ ಹಿನ್ನೆಲೆಯಿಂದ ಮೇಲೆದ್ದು ಬಂದವರು, ಜನರಿಗಾಗಿ ಮಿಡಿದವರು, ರೈತರಿಗಾಗಿ ದನಿ ಎತ್ತಿದವರು, ಶೋಷಣೆಯ ವಿರುದ್ಧ ಪ್ರತಿಭಟಿಸಿದವರು, ಇಂತಹ ಹೋರಾಟಗಳ ಯಾವ ಹಿನ್ನೆಲೆಯೂ ಇಲ್ಲದ ನೀವು ಅದೃಷ್ಟವಂತ ರಾಜಕಾರಣಿ ಎನ್ನುವುದು ಇಡೀ ರಾಜ್ಯಕ್ಕೇ ತಿಳಿದ ವಿಚಾರ ಎಂದು ಹೇಳಿದ್ದಾರೆ.
ಯಡಿಯೂರಪ್ಪನವರು ಅಧಿಕಾರದ ಕನಸನ್ನು ಎಂದೂ ಕಂಡವರಲ್ಲ, ಬಡವರಿಗಾಗಿ, ರೈತರಿಗಾಗಿ ತಮ ಇಡೀ ರಾಜಕೀಯ ಜೀವನವನ್ನು ಸಮರ್ಪಿಸಿಕೊಂಡವರು. ಕರ್ನಾಟಕದ ಇತಿಹಾಸದಲ್ಲಿ ಅವರ ಮೇಲೆ ನಡೆದ ರಾಜಕೀಯ ಪಿತೂರಿ, ಹುನ್ನಾರಗಳು ಇನ್ಯಾವ ರಾಜಕಾರಣಿಗಳ ಮೇಲೆ ನಡೆದಿಲ್ಲ ಎನ್ನುವುದನ್ನು ಇತಿಹಾಸ ಹೇಳುತ್ತಿದೆ ಎಂದು ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.