Thursday, December 26, 2024
Homeರಾಜ್ಯಭಿನ್ನಮತ ಶಮನಕ್ಕೆ ವಿಜಯೇಂದ್ರ ಬಣ ಮನವಿ

ಭಿನ್ನಮತ ಶಮನಕ್ಕೆ ವಿಜಯೇಂದ್ರ ಬಣ ಮನವಿ

ಬೆಂಗಳೂರು,ಡಿ.7- ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ಬಡಿದಾಟಕ್ಕೆ ತಕ್ಷಣವೇ ಮಧ್ಯಪ್ರವೇಶಿಸಿ ವರಿಷ್ಠರು ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಬೇಕೆಂದು ಉಸ್ತುವಾರಿ ರಾಧಾಮೋಹನ್‌ ದಾಸ್‌‍ ಅಗರ್‌ವಾಲ್‌ ಅವರಿಗೆ ವಿಜಯೇಂದ್ರ ಬಣ ಮನವಿ ಮಾಡಿದೆ. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಮಾಜಿ ಸಚಿವರಾದ ಎಂ.ಪಿ.ರೇಣಕಾಚಾರ್ಯ, ಕಟ್ಟಾ ಸುಬ್ರಹಣ್ಯನಾಯ್ಡು , ಮಾಜಿ ಶಾಸಕರಾದ ವೈ.ಸಂಪಂಗಿ, ಎಂ.ಬಿ.ಲಕ್ಷ್ಮಿನಾರಾಯಣ ಮತ್ತಿತರರು ಅಗರ್‌ವಾಲ್‌ ಅವರನ್ನು ಭೇಟಿಯಾಗಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು.

ಕೆಲವರು ಗುಂಪು ಕಟ್ಟಿಕೊಂಡು ನಡೆಸುತ್ತಿರುವ ಭಿನ್ನಮತೀಯ ಚಟುವಟಿಕೆಯಿಂದ ಪಕ್ಷದ ಸಂಘಟನೆಗೆ ಹಿನ್ನಡೆಯಾಗಿದೆ. ಶೋಕಾಸ್‌‍ ನೋಟಿಸ್‌‍ ಕೊಟ್ಟ ಮೇಲೆ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಹೀಗಾಗಿ ಕೂಡಲೇ ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿದ್ದಾರೆ. ನಾವು ಪಕ್ಷ ವಿರೋಧಿ ಚಟುವಟಿಕೆ ಯನ್ನು ನಡೆಸುತ್ತಿಲ್ಲ. ಉಪಚುನಾವಣೆ ಫಲಿತಾಂಶ ಹಿನ್ನಡೆಯಾದ ನಂತರ ಎಲ್ಲರೂ ವಿಜಯೇಂದ್ರ ತಲೆಗೆ ಕಟ್ಟಲು ಮುಂದಾಗಿದ್ದಾರೆ.

ಸಾಮೂಹಿಕ ನಾಯಕತ್ವದಲ್ಲಿ ನಡೆದ ಚುನಾವಣೆಗೆ ಎಲ್ಲರೂ ಹೊಣೆಗಾರರು. ಕೇವಲ ಒಬ್ಬರನ್ನೇ ಗುರಿಯಾಗಿಟ್ಟುಕೊಂಡು ಹರಕೆ ಕುರಿಯಾಗಿ ಮಾಡುವುದು ಬೇಡ. ಮುಂದಿನ 2028ರ ವಿಧಾನಸಭಾ ಚುನಾವಣೆವರೆಗೂ ವಿಜಯೇಂದ್ರ ನಾಯಕತ್ವದಲ್ಲೇ ಪಕ್ಷ ಮುನ್ನಡೆಯಲಿ ಎಂದು ಮನವಿ ಮಾಡಿದರು. ಕರ್ನಾಟಕದ ಬೆಳವಣಿಗೆಗಳ ಕುರಿತಂತೆ ಕೆಲವು ಮಾಹಿತಿಗಳನ್ನು ವರಿಷ್ಠರ ಬಳಿ ಹಂಚಿಕೊಳ್ಳಬೇಕು. ನಮಗೆ ದೆಹಲಿಯಲ್ಲಿಯೇ ಸಮಯ ಅವಕಾಶ ನೀಡಬೇಕೆಂಬ ಪ್ರಸ್ತಾವನೆಯನ್ನು ಅಗರ್‌ವಾಲ್‌ ಮುಂದೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬೇಡಿಕೆಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಎಲ್ಲರ ಮಾತನ್ನು ಸಹನೆಯಿಂದ ಆಲಿಸಿದ ಅಗರವಾಲ್‌, ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ನೀವು ದೆಹಲಿಗೆ ಬರುತ್ತೀರಿ ಎನ್ನುವುದಾದರೆ ಅದಕ್ಕೆ ಅಭ್ಯಂತರವಿಲ್ಲ. ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಜೊತೆ ನಾನು ಮಾತನಾಡಿ ಸಮಯಾವಕಾಶವನ್ನು ನಿಗದಿಪಡಿಸುತ್ತೇನೆ. ನಿಮಗೆ ಏನು ಹೇಳಬೇಕೋ ಎಲ್ಲವನ್ನೂ ಮುಕ್ತವಾಗಿ ಹೇಳಿ. ಪಕ್ಷಕ್ಕೆ ಅನುಕೂಲವಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಸಂಘಟನೆಗೆ ಒತ್ತು ಕೊಡಿ ಎಂದು ಕಿವಿಮಾತು ಹೇಳಿದ್ದಾರೆ.

ರಾಧಾ ಮೋಹನ್‌ ದಾಸ್‌‍ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ ಅವರು, ನಾನು, ಸಂಪಂಗಿ, ಕಟ್ಟಾ ಸುಬ್ರಹಣ್ಯ ನಾಯ್ಡು, ಎಂಡಿ ಲಕ್ಷಿ ನಾರಾಯಣ ನಾವು ನಾಲ್ವರೂ ರಾಧಾಮೋಹನ್‌ ದಾಸ್‌‍ ಅಗರವಾಲ್‌ ಅವರ ಭೇಟಿ ಮಾಡಿದೆವು ಎಂದು ಹೇಳಿದರು. ವಿಜಯೇಂದ್ರ ನೇತೃತ್ವದಲ್ಲಿ ವಕ್‌್ಫ ಹೋರಾಟ ಮಾಡಿದ್ದೇವೆ. ಮೂರು ತಂಡಗಳಲ್ಲಿ ಪ್ರವಾಸ ಮಾಡಲಾಗಿದೆ. ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಕ್ಷ ಕಟ್ಟಲು ನಾವು ಜೊತೆಯಾಗಿರುವುದಾಗಿ ಹೇಳಿದ್ದೇವೆ. ಪ್ರಸ್ತುತ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಿದ್ದೇವೆ. ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷದ ಜತೆಗೆ ಇರುವುದಾಗಿ ಹೇಳಿದ್ದೇವೆ ಎಂದರು.
ಪಕ್ಷದ ಗೊಂದಲಗಳ ಬಗ್ಗೆಯೂ ನಾವು ಚರ್ಚೆ ಮಾಡಿದ್ದೇವೆ. ಯಾರು ಏನು ಬೇಕಾದರೂ ಹೇಳಲಿ, ರಾಜ್ಯದಲ್ಲಿ ಪಕ್ಷ ಕಟ್ಟಿದವರು ಯಡಿಯೂರಪ್ಪ, ಅನಂತ್‌ಕುಮಾರ್‌ ಅವರಂತಹ ಹಿರಿಯರ ಬೆಂಬಲವೂ ಇತ್ತು. ಹಾಗೆಯೇ ವಿಜಯೇಂದ್ರ ಸಹ ಪಕ್ಷ ಕಟ್ಟುತ್ತಾರೆ. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂದು ಹೇಳಿದರು.

ಐದಾರು ಜನ ಪಕ್ಷದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಈ ಐವರ ಬಗ್ಗೆಯೂ ಮಾತಾಡಿದ್ದೇವೆ. ನಾನು ಅವರ ಹೆಸರು ಹೇಳಲು ಇಷ್ಟಪಡುವುದಿಲ್ಲ ಎಂದರು. ನಾನು ಸೈಲೆಂಟ್‌, ಜಾರಕಿಹೊಳಿ ವೈಲೆಂಟ್‌ ಎಂಬ ಯತ್ನಾಳ್‌ ಹೇಳಿಕೆಗೆ ಟಕ್ಕರ್‌ ಕೊಟ್ಟ ರೇಣುಕಾಚಾರ್ಯ, ಸೈಲೆಂಟ್‌ ಯಾರು, ವೈಲೆಂಟ್‌ ಯಾರು ಅಂತ ಪಕ್ಷದ ಹಿರಿಯರು ನೋಡಿಕೊಳ್ಳುತ್ತಾರೆ. ನಾವು ಈಗ ಮಾತಾಡಲು ಇಷ್ಟಪಡುವುದಿಲ್ಲ. ದೆಹಲಿಗೆ ಹೋಗುತ್ತೇವೆ. ನಮ ನಾಯಕರಿಗೆ ಕಾರ್ಯಕರ್ತರ ಅಭಿಲಾಷೆ ಹೇಳುತ್ತೇವೆ ಎಂದರು.

ದೆಹಲಿಗೆ ಹೋಗುವ ದಿನಾಂಕ ಇನ್ನೂ ನಿಗದಿಯಾಗಿಲ್ಲ. ವರಿಷ್ಠರಿಂದ ನಮಗೆ ಸಕಾರಾತಕವಾದ ಸಂದೇಶ ಸಿಗುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಸಚಿವ ಕಟ್ಟಾ ಸುಬ್ರಹಣ್ಯ ನಾಯ್ಡು ಮಾತನಾಡಿ, ಮುಂದಿನ ದಿನಗಳಲ್ಲಿ ವಾಲೀಕಿ ಹಗರಣ, ಬಾಣಂತಿಯರ ಸಾವು ಪ್ರಕರಣದಲ್ಲಿ ಹೋರಾಟ ಮಾಡುತ್ತೇವೆ. ವಿಜಯೇಂದ್ರ ಅವರೇ ಮುಂದಿನ ಚುನಾವಣೆವರೆಗೆ ರಾಜ್ಯಾಧ್ಯಕ್ಷರಾಗಿ ಮುಂದುವರೆಯಬೇಕು. ಅವರ ನೇತೃತ್ವದಲ್ಲೇ ಚುನಾವಣೆ ನಡೆಯಬೇಕು ಎಂದು ಹೇಳಿದರು.

RELATED ARTICLES

Latest News