ಬೆಂಗಳೂರು,ಅ.29-ಸಚಿವ ಜಮೀರ್ ಅಹಮದ್ ಖಾನ್ ನೇತೃತ್ವದಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ರೈತರ ಪರ ನಿಂತರೆ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟುವ, ಜಾತಿ, ಧರ್ಮ ಆಧಾರದಲ್ಲಿ ದೇಶವನ್ನು ಒಡೆಯುವ ಕೆಲಸ ಹಿಂದಿನಿಂದಲೂ ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.
ಈಗ ಜಮೀರ್ ಅಹಮದ್ ನೇತೃತ್ವದಲ್ಲಿ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ರೈತರ ಅನ್ಯಾಯ ಮಾಡುವ ಕೆಲಸ ಸಚಿವ ಜಮೀರ್ ಅಹಮದ್ ನೇತೃತ್ವದಲ್ಲಿ ಆಗುತ್ತಿದೆ. ರಾಜ್ಯ ಸರ್ಕಾರ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ರೈತರಿಗೆ ನೋಟೀಸ್ ಕೊಟ್ಟಿರುವುದಕ್ಕೆ ಬಿಜೆಪಿ ಕಾರಣವೇ..? ರೈತರ ಪರ ಬಿಜೆಪಿ ಗಟ್ಟಿಯಾಗಿ ನಿಂತುಕೊಳ್ಳಲಿಲ್ಲ ಅಂದರೆ ರೈತರನ್ನು ಬೀದಿಗೆ ತರುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿತ್ತು. ನಾವು ಕಾನೂನು ಸಹಾಯ ಪಡೆದು ರೈತರ ಪರ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.
ವಕ್ಫ್ ಆಸ್ತಿ ನೋಂದಣಿ ವಿವಾದ ವಿಚಾಕ್ಕೆ ಪ್ರತಿಕ್ರಿಯಿಸಿದ ಅವುರ, ಈಗ ನೋಡಿದರೆ ಟಾಸ್ಕ್ ಫೋರ್ಸ್ ಮಾಡಿದ್ದೇವೆ ಎಂದು ಆಟ ಆಡುತ್ತಿದ್ದಾರೆ. ಉಪಚುನಾವಣೆ ಇರುವಾಗ ಅವರು ಇದನ್ನು ರಾಜಕೀಯಕರಣಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.
ಒಳ ಮೀಸಲಾತಿ ಬಗ್ಗೆ ಏಕ ಸದಸ್ಯ ಆಯೋಗ ರಚನೆಗೆ ಸಚಿವ ಸಂಪುಟ ತೀರ್ಮಾನದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಳ ಮೀಸಲಾತಿ ಬಗ್ಗೆ, ಕಾಂತರಾಜ್ ವರದಿ ಬಗ್ಗೆ ಸಿದ್ಧರಾಮಯ್ಯ ಗಂಭೀರವಾಗಿ ತೆಗೆದುಕೊಂಡಿದ್ದರೆ ಅವರು ಈ ಹಿಂದೆಯೇ ಕ್ರಮ ತೆಗೆದುಕೊಳ್ಳುತ್ತಿದ್ದರು. ಆದರೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ರಾಜಕೀಯ ಲಾಭ ತೆಗೆದುಕೊಳ್ಳುವುದನ್ನೇ ನೋಡುತ್ತಿದೆ. ಅವರು ಈ ವಿಷಯದಲ್ಲಿ ಹೆಚ್ಚು ಗೊಂದಲ ಸೃಷ್ಟಿಸುವುದನ್ನೇ ನೋಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಮತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಮೀಸಲಾತಿ ವಿಚಾರದಲ್ಲಿ ಗಂಭೀರವಾಗಿದ್ದಾರೆ ಅನ್ನಿಸುವುದಿಲ್ಲ. ಬಿಜೆಪಿ ಈ ವಿಚಾರದಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿದೆ ಎಂದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ದೇವೇಗೌಡರು ಅಂಬ್ಯುಲೆನ್ಸ್ ನಲ್ಲಿ ಬಂದು ಮೊಮಗನ ಪರ ಪ್ರಚಾರ ಮಾಡುತ್ತಾರೆ ಎಂಬ ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ವಯಸ್ಸಿನಲ್ಲೂ ಮಾಜಿ ಪ್ರಧಾನಿ ದೇವೇಗೌಡರು ಸಕ್ರಿಯರಾಗಿದ್ದಾರೆ. ಅವರನ್ನು ನೋಡಿ ಕಲಿಯಬೇಕು. ಕಾಂಗ್ರೆಸ್‌ಗೆ ಸೋಲಿನ ಭಯ ಕಾಡುತ್ತಿದ್ದು, ಹತಾಶರಾಗಿ ಈ ರೀತಿ ಮಾತಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನಿಖಿಲ್ ಕುಮಾರಸ್ವಾಮಿ ಮಾಜಿ ಪ್ರಧಾನಿ ದೇವೇಗೌಡರ ಮೊಮಗ ಇರಬಹುದು, ಆದರೆ ಇಂದು ಅವರು ಎನ್ ಡಿಎ ಅಭ್ಯರ್ಥಿ. ಅವರನ್ನು ಗೆಲ್ಲಿಸುವ ಕರ್ತವ್ಯ ನಮೆಲ್ಲರದ್ದೂ ಆಗಿದೆ ಎಂದು ಅವರು ಹೇಳಿದರು.