Monday, November 4, 2024
Homeರಾಜಕೀಯ | Politicsಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲ್ಲಲಿದೆ : ಸಚಿವ ಚೆಲುವರಾಯಸ್ವಾಮಿ

ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲ್ಲಲಿದೆ : ಸಚಿವ ಚೆಲುವರಾಯಸ್ವಾಮಿ

Congress will win in all three constituencies: Minister Cheluvarayaswamy

ಹಾಸನ, ಅ.29- ಚನ್ನಪಟ್ಟಣ ಉಪ ಚುನಾವಣೆ ದೀಪಾವಳಿ ನಂತರ ಚುರುಕುಗೊಳ್ಳಲಿದ್ದು, ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌‍ ಗೆಲುವು ಸಾಧಿಸಲಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಹಾಸನಾಂಬೆ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ,ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಚುನಾವಣೆಗಳನ್ನು ಎದುರಿಸುತ್ತಿದ್ದು, ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಮೂರೂ ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದೇವೆ. ಸರ್ಕಾರದ ಜನಪರ ಯೋಜನೆಗಳು ಗೆಲುವಿಗೆ ಸಹಕಾರವಾಗಲಿದೆ ಎಂದರು.

ಹಾಸನಾಂಬೆ ದೇವಿ ಶಕ್ತಿದೇವತೆಯಾಗಿದ್ದು, ಪ್ರತಿದಿನ ಲಕ್ಷಾಂತರ ಮಂದಿ ಬಂದು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಹಾಸನಾಂಬ ದೇವಾಲಯ ಪ್ರಸಿದ್ಧ ಕ್ಷೇತ್ರವಾಗಿ ಹೊರಹೊಮಿದೆ ಎಂದು ಹೇಳಿದರು.

ಈ ಬಾರಿ 9 ದಿನಗಳು ಮಾತ್ರ ದರ್ಶನ ಇರುವುದರಿಂದ ದರ್ಶನಕ್ಕೆ ಕಡಿಮೆ ಅವಕಾಶ ಇದೆ.ಹೆಚ್ಚಿನ ಜನರು ದರ್ಶನಕ್ಕೆ ಆಗಮಿಸುತ್ತಿರುವುದರಿಂದ ಒತ್ತಡ ಹೆಚ್ಚಿದ್ದು, ಸಾರ್ವಜನಿಕರು ಸಹ ಸಹಕಾರ ನೀಡಬೇಕು. ಜಿಲ್ಲಾಡಳಿತ ಸುಗಮ ದರ್ಶನಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದು, ಎಲ್ಲರಿಗೂ ದೇವಿಯ ಆಶೀರ್ವಾದ ದೊರೆಯಲಿ. ತಾಯಿ ನಾಡಿಗೆ ಒಳಿತನ್ನು ಮಾಡಲಿ. ಮಳೆ-ಬೆಳೆಯಾಗಿ ರೈತರಿಗೆ ನೆಮದಿ ತರಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

RELATED ARTICLES

Latest News