ಬೆಂಗಳೂರು,ಜು.4- ಮುಂಬರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಪಕ್ಷದ ಗೆಲುವಿಗೆ ಕಾರ್ಯಕರ್ತರು ಲೋಕಸಭೆ ಚುನಾವಣೆಯಂತೆ ಮಹತ್ವ ನೀಡಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಯಾವ ರೀತಿ ಲೋಕಸಭಾ, ವಿಧಾನಸಭಾ ಚುನಾವಣೆಗೆ ಮಹತ್ವ ನೀಡಿದ್ದೇವೋ ಅದೇ ರೀತಿ ಸ್ಥಳೀಯ ಸಂಸ್ಥೆ ಚುನಾವಣೆಗೂ ಕೊಡಬೇಕು ಎಂದರು.
ಆಗಸ್ಟ್ ನಂತರ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಪ್ರತಿ ಜಿಲ್ಲೆಗೂ ಭೇಟಿ ನೀಡಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುವೆ. ಸಾಮಾನ್ಯ ಕಾರ್ಯಕರ್ತನಾಗಿ ನಿಮ ಜೊತೆ ಕೆಲಸ ಮಾಡುತ್ತೇನೆ. ಎಲ್ಲರು ಒಟ್ಟಾಗಿ ಪಕ್ಷ ಕಟ್ಟುವ ಕೆಲಸ ಮಾಡೋಣ ನಮ ಗುರಿ ಮುಟ್ಟುವವರೆಗೆ ವಿಶ್ರಾಂತಿ ಬೇಡ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ವಿಶ್ವ ನಾಯಕ ಮೊದಿಜೀ ಅವರು 3ನೇ ಭಾರಿಗೆ ಪ್ರಧಾನಿ ಆಗಿರುವ ಶುಭ ಸಂದರ್ಭದಲ್ಲಿ ನಾವು ಸೇರಿದ್ದೀವಿ. ಕೋಟ್ಯಂತರ ಕಾರ್ಯಕರ್ತರ ಬೆಂಬಲದಿಂದ ನಾವು ಗೆದ್ದಿದ್ದೇವೆ ಎಂದರು.
ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಆಡಳಿತದಲ್ಲಿ 1 ವರ್ಷದಲ್ಲೇ ಹಿಂದೆಂದೂ ಕೇಳಿರದ ಭ್ರಷ್ಟಾಚಾರ ಹೊರಬರುತ್ತಿದೆ. ಕಾಂಗ್ರೆಸ್‌ನ ಮುಖವಾಡ ಕಳಚಿ ಬಿದ್ದಿದೆ. ಹನಿನೀರಾವರಿ ಸಹಾಯದನ ಇಳಿಸಿದ್ದಾರೆ. ರೈತ ವಿರೋಧಿ ಸರ್ಕಾರ ಕಿಸಾನ್ ಸನಾನ್ ಬಂದ್ ಮಾಡಿದ್ದಾರೆ. ರೈತ ವಿದ್ಯಾನಿಧಿಗೆ ತಣ್ಣೀರು ಎರಚಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರ ಅನುದಾನ ಕೊಡದೇ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸೋರುತ್ತಿವೆ. ಬಂಡವಾಳ ಹೋಡಿಕೆಗೆ ಏನು ಕೊಡುಗೆ ಇಲ್ಲ, ಹಲವು ಕಂಪನಿಗಳು ರಾಜ್ಯ ಬಿಟ್ಟು ಹೋಗುತ್ತಿವೆ. ಕಾಂಗ್ರೆಸ್‌ನಿಂದ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂದರು.
ಈ ಸರ್ಕಾರ ಎಷ್ಟು ದಿನ ಇರುತ್ತದೆಯೋ ಗೊತ್ತಿಲ್ಲ 4-5 ಡಿಸಿಎಂಗಾಗಿ ಹಾದಿಬೀದಿ ಜಗಳ ನಡೆಯುತ್ತಿದೆ. ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಜಗಳ ಶುರುವಾಗಿದೆ. ಸರ್ಕಾರಕ್ಕೆ ಅಸ್ಥಿರತೆ ಕಾಡುತ್ತಿದೆ, ಯಾವಾಗ ಬೀಳುತ್ತೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಲೋಕಸಭಾ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಮಾತನಾಡಿ, ಕಾರ್ಯಕರ್ತರ ಸೈನ್ಯ, ಶೃದ್ಧೆಯಿಂದ ಎಲ್ಲ ಪ್ರಮುಖರ ಶ್ರಮದಿಂದ ಬಿಜೆಪಿಗೆ ವಿಜಯ ಪ್ರಾಪ್ತವಾಗಿದೆ. .ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ಮತ ನೀಡಿದ್ದಾರೆ.
ಮಹಿಳೆಯರಿಗೆ 2 ಸಾವಿರ, ಬಸ್ ಫ್ರೀ, ಯುವಕರಿಗೆ ಭತ್ಯೆ ಎಲ್ಲ ನೀಡುವ ಘೋಷಣೆ ಮಾಡಿತ್ತು. ಆದಾಗ್ಯೂ ಜನ ತಿರಸ್ಕರಿಸಿದ್ದಾರೆ. ಕಾಂಗ್ರೆಸ್‌ಗೆ ಸ್ವಲ್ಪವಾದರೂ ಮರ್ಯಾದೆ ಇದ್ದರೆ, ಲೋಕಸಭೆ ಚುನಾವಣೆ ಸೋಲನ್ನು ಒಪ್ಪಿಕೊಂಡು ರಾಜೀನಾಮೆ ನೀಡಿ, ಸರ್ಕಾರ ವಿಸರ್ಜಿಸಬೇಕಿತ್ತು ಎಂದು ಟೀಕಿಸಿದರು.
4 ವರ್ಷದ ಬಳಿಕ ಮತ್ತೆ ಚುನಾವಣೆ ಆದರೆ, ಕಾಂಗ್ರೆಸ್ ಹುಡುಕಿದರೂ ಸಿಗಲ್ಲ, ಆ ರೀತಿಯಲ್ಲಿ ಸೋಲುತ್ತದೆ.ರಾಜ್ಯ ಬಿಜೆಪಿ, ರಾಜ್ಯ ಸರ್ಕಾರದ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದೆ. ಹಗರಣದಲ್ಲಿ ಸಿಲುಕಿರುವ ಸಚಿವರ ರಾಜೀನಾಮೆ ಕೊಡಿಸಿದ್ದೀರಿ.ಇದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.