ಬೆಂಗಳೂರು,ಫೆ.7- ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ಕೊಟ್ಟು, ನಾಟಕವಾಡಿ ಅಧಿಕಾರಕ್ಕೆ ಬಂದಿದೆ. ಈಗ ಈ ಗ್ಯಾರಂಟಿಯನ್ನು ಪೂರ್ಣ ಜಾರಿ ಮಾಡದೇ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.
ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಇಂದು ಬಿಜೆಪಿ ಶಾಸಕರು, ಪರಿಷತ್ ಸದಸ್ಯರು ನಡೆಸಿದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಯಾವ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲದ ಸ್ಥಿತಿ ಇದೆ. ಹೀಗಾಗಿ ದೆಹಲಿ ಚಲೋ ನಾಟಕ ಮಾಡುತ್ತಿದ್ದಾರೆ ಎಂದು ದೂರಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ರೈತರ ಸಂಕಷ್ಟಕ್ಕೆ ಸ್ಪಂದಿಸದ ದುಷ್ಟ ಸರ್ಕಾರ ಇದು. ಸರಿಯಾಗಿ ಅಧಿಕಾರ ನಡೆಸಲಾಗದೇ ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಕೃಷ್ಣ ಮೇಲ್ದಂಡೆಗೆ ಇವರು ಒಂದು ರೂಪಾಯಿ ಕೊಟ್ಟಿಲ್ಲ. ಮತದಾರರ ಕಣ್ಣಿಗೆ ಮಣ್ಣೆರಚಿ ಅಧಿಕಾರಕ್ಕೆ ಬಂದಿದ್ದಾರೆ. ಇವರ ಮೇಕೆದಾಟು ಹೋರಾಟ, ದೆಹಲಿ ಚಲೋ ಕೇವಲ ನಾಟಕ. ಮಹದಾಯಿಗೆ ಇವರ ಬಳಿ ದುಡ್ಡಿಲ್ಲ. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ 7,800 ಕೋಟಿ ರೂ. ಬಿಡುಗಡೆ ಮಾಡಿದ ಹಣವನ್ನು ತಡೆದಿದ್ದಾರೆ. ಮುಂದಿನ ಲೋಕಸಭೆಯಲ್ಲಿ ಸೋಲಿಸಿ ಮನೆಗೆ ನಿಮ್ಮನ್ನು ಚಲೋ ಮಾಡಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ವಿಧಾನಸಭೆಯ ಪ್ರತಿಪಕ್ಷದ ನಾಯಕ ಅಶೋಕ್ ಮಾತನಾಡಿ, ಬೋರ್ವೆಲ್, ಪಂಪ್ಸೆಟ್ ದರ ಏರಿಕೆ, ಹಾಲು ಉತ್ಪಾದÀಕರಿಗೆ 34 ರೂ, ಗ್ರಾಹಕರಿಗೆ 44 ರೂ ಉಳಿದ 10 ರೂ. ಯಾರ ಪಾಲಿಗೆ? ಹಾಲಿನ ಪೊ್ರೀತ್ಸಾಹಧನ 710 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ, ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ನ ಪ್ರತಿಭಟನೆಯಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ನಾವು 400 ಸೀಟು ಗೆದ್ದೆ ಗೆಲ್ಲುತ್ತೇವೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ, ಕಾಂಗ್ರೆಸ್ನವರು ಸುಖಾಸುಮ್ಮನೆ ಕೇಂದ್ರದ ವಿರುದ್ಧ ಆರೋಪ ಮಾಡುತ್ತಾರೆ, ಸಂಸದರಿಗೆ ಪತ್ರ ತಲುಪುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಮಾಡುತ್ತಾರೆ. ಕೇವಲ ಪ್ರಚಾರಕ್ಕಾಗಿ ದೆಹಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದ ಡಿಎನ್ಎಯಲ್ಲೇ ಜಿನ್ನಾ ಸಂಸ್ಕೃತಿ ಅಂಟಿಕೊಂಡಿದೆ. ಮಾನ ಮರ್ಯಾದೆ ಇರುವ ಪಕ್ಷ ದೇಶ ವಿಭಜನೆಯ ಮಾತು ಯಾವತ್ತೂ ಆಡಿರಲಿಲ್ಲ. ಕಾಂಗ್ರೆಸ್ನವರಿಗೆ ನಾಚಿಕೆ ಆಗಲ್ವಾ, ಮಾನ ಮರ್ಯಾದೆ ಇದ್ಯಾ ನಮ್ಮ ಹಣ ಎಲ್ಲಾ ಉತ್ತರ ಪ್ರದೇಶಕ್ಕೆ ಹೋಗುತ್ತದೆ ಅಂತಾ ಹೇಳುತ್ತೀರಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ನ ಗುರಿ ಪ್ರಧಾನಿ ನರೇಂದ್ರ ಮೋದಿ. ಅವರು ಹತ್ತು ವರ್ಷ ಏನು ಬಿಡುಗಡೆ ಮಾಡಿದ್ದಾರೆ, ನೀವೇನು ಬಿಡುಗಡೆ ಮಾಡಿದ್ದೀರಿ ದಾಖಲೆ ಮುಂದಿಡಿ, ಬರಕ್ಕೆ ಹಣ ಬಿಡುಗಡೆ ಮಾಡಲು 9 ತಿಂಗಳು ತೆಗೆದುಕೊಂಡಿದ್ದಾರೆ. ಅದಕ್ಕೆ ದಾಖಲೆ ನನ್ನ ಹತ್ತಿರ ಇದೆ ಎಂದು ಹೇಳಿದರು.
ಇವರ (ಕಾಂಗ್ರೆಸ್ನವರ) ಸ್ನೇಹಿತ ಸ್ಟಾಲಿನ್ಗೆ (ತಮಿಳುನಾಡಿಗೆ) ನೀರು ಬಿಡುವಾಗ ಬಾಯಿ ಮುಚ್ಚಿಕೊಂಡಿದ್ದರು. ದೇಶದ್ರೋಹ, ಬರ ಹಣ ಬಿಡುಗಡೆ ವಿಳಂಬ ಮುಚ್ಚಿಟ್ಟುಕೊಳ್ಳಲು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಡಿಕೆ ಸುರೇಶ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಎಲ್ಲರೂ ದೆಹಲಿಗೆ ಹೋಗಿದ್ದಾರೆ ಎಂದು ಆರೋಪಿಸಿದರು.
ಕ್ಯಾಬಿನೆಟ್ ದರ್ಜೆ ಕೊಡಲು ನಿಮಗೆ ದುಡ್ಡು ಇದೆ. ಅದಕ್ಕೆ ನಿಮಗೆ ಮೋದಿ ದುಡ್ಡು ಕೊಡುತ್ತಾರಾ? ಕೇಂದ್ರ ಸರ್ಕಾರ ವಿರುದ್ಧ ಆರೋಪ ಮಾಡುವ ಸಿದ್ದರಾಮಯ್ಯ 15ನೇ ಹಣಕಾಸು ಆಯೋಗದಲ್ಲಿ ಹೋಗಿ ಕೂತಿದ್ರಲ್ಲಾ ಆಗ ಯಾಕೆ ಬಾಯಿ ಬಿಡಲಿಲ್ಲ? ಎಂದು ಪ್ರಶ್ನಿಸಿದರು.
ವಿಧಾನಪರಿಷತ್ನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಜನಸ್ವಂದನ ರಾಜ್ಯ ಸರ್ಕಾರದ ನಾಟಕವಾಗಿದೆ. ಗ್ರಾಮ, ತಾಲ್ಲೂಕು ಮಟ್ಟದಲ್ಲಿ ಆಡಳಿತ ವಿಫಲವಾದ ಕಾರಣ ರಾಜ್ಯಮಟ್ಟದಲ್ಲಿ ಜನಸ್ಪಂದನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ನಿವಾರಿಸಲು ಹಣವಿಲ್ಲ. ಆದರೆ ಅಲ್ಪಸಂಖ್ಯಾತರಿಗೆ ಹತ್ತು ಸಾವಿರ ಕೋಟಿ ಬಿಡುಗಡೆ ಮಾಡಲು ಸರ್ಕಾರದ ಬಳಿ ಹಣ ಇದೆ ಎಂದು ದೂರಿದರು.
ಜನರಿಗೆ ಮುಖ ತೋರಿಸಲು ಆಗದಂತಹ ಪರಿಸ್ಥಿತಿಯಲ್ಲಿ ಸರ್ಕಾರ ಇದೆ. ಜನರ ದಾರಿ ತಪ್ಪಿಸಲು, ವಿಷಯಾಂತರ ಮಾಡಲು ದೆಹಲಿಯಲ್ಲಿ ಧರಣಿ ಮಾಡಲಾಗುತ್ತಿದೆ. ದೆಹಲಿಗೆ ಹೋಗಿ ಪ್ರತಿಭಟನೆ ಮಾಡುವ ಮೂಲಕ ಹೊಸ ನಾಟಕ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.