Friday, November 22, 2024
Homeರಾಜ್ಯಹೂವಿನ ಹಾಸಿಗೆಯಲ್ಲ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾದಿ

ಹೂವಿನ ಹಾಸಿಗೆಯಲ್ಲ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾದಿ

ಬೆಂಗಳೂರು, ನ.15- ಹಲವರ ಅಪಸ್ವರದ ನಡುವೆಯೂ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇದು ಅವರ ಪಾಲಿಗೆ ಹೂವಿನ ಹಾಸಿಗೆಯಲ್ಲ. ಬದಲಿಗೆ ಕೆಳ ಹೀನವಾಗಿರುವ ಪಕ್ಷಕ್ಕೆ ಹೊಸ ಹುರುಪು ನೀಡಿ, ಪಕ್ಷವನ್ನು ಮುನ್ನಡೆಸುವ ಹೊಣೆಗಾರಿಕೆ ಅವರ ಮೇಲಿದೆ.

ಇದೀಗ ರಾಜ್ಯಾಧ್ಯಕ್ಷ ಸ್ಥಾನ ಜವಾಬ್ದಾರಿ ವಹಿಸಿಕೊಂಡಿರುವ ವಿಜಯೇಂದ್ರ ಮುಂದೆ ಸಾಲು ಸಾಲು ಸವಾಲುಗಳು ಇವೆ. ಅದರಲ್ಲೂ, ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಪಕ್ಷ ಸಂಘಟನೆ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹಲವು ಅಸ್ತ್ರಗಳೂ ಮುಂದಿದೆ.

ಜಾತಿ ಗಣತಿ ಬಿಜೆಪಿಯ ಮುಂದೆ ಇರುವ ಪ್ರಮುಖ ಅಸ್ತ್ರ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ. ಶಾಶ್ವತ ಹಿಂದುಳಿದ ಆಯೋಗ ಶೀಘ್ರದಲ್ಲಿ ವರದಿ ಸಲ್ಲಿಸುವುದಾಗಿ ತಿಳಿಸಿದೆ. ಆದರೆ ಇದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ.

ಮಹಾರಾಷ್ಟ್ರ : ಮರಾಠ ಮೀಸಲಾತಿ ಹೋರಾಟಕ್ಕೆ ಮೊದಲ ಬಲಿ

ಅದರಲ್ಲೂ ಲಿಂಗಾಯತ ಸಮುದಾಯ ಜಾತಿಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪುಸುವಲ್ಲಿ ವಿಜಯೇಂದ್ರಗೆ ಅವಕಾಶ ಇದೆ. ಜಾತಿಗಣತಿ ವೈಜ್ಞಾನಿಕವಾಗಿಲ್ಲ ಎಂದು ಅಭಿಪ್ರಾಯ ರೂಪಿಸುವ ಮೂಲಕ ಹೋರಾಟ ರೂಪಿಸಲು ಅವಕಾಶ ಇದೆ.

ರಾಜ್ಯ ಸರ್ಕಾರದ ವಿರುದ್ಧ ಈಗಾಗಲೇ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿದೆ. ವರ್ಗಾವಣೆ ದಂಧೆಯಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಆರೋಪಗಳನ್ನು ಮಾಡುತ್ತಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಆರೋಪಗಳು ಕೇಳಿಬಂದಿದೆ. ಈ ವಿಚಾರವಾಗಿ ಬಿಜೆಪಿಗಿಂತ ಹೆಚ್ಚಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು. ಸರ್ಕಾರದ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ಆದರೆ ಬಿಜೆಪಿ ಸೈಲೆಂಟಾಗಿತ್ತು. ಇದೀಗ ವಿಜಯೇಂದ್ರ ಅವರಿಗೆ ಈ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟ ರೂಪಿಸಲು ಅವಕಾಶ ಇದೆ.

ಐದು ಗ್ಯಾರಂಟಿ ಘೋಷಣೆ ಮಾಡುವ ಮೂಲಕ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಲಾಭವನ್ನು ಪಡೆದುಕೊಂಡಿತ್ತು. ಇದೀಗ ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿ ಜಾರಿ ಮಾಡಿರುವುದನ್ನು ಮುಂದಿಟ್ಟುಕೊಂಡು ವರ್ಚಸ್ಸು ಹೆಚ್ಚಿಸುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಆದರೆ ಗ್ಯಾರಂಟಿ ಜಾರಿಯಲ್ಲಿ ಹಲವು ಎಡವಟ್ಟುಗಳು ಮಾಡಿದೆ. ಗೃಹಲಕ್ಷ್ಮೀ ಯೋಜನೆ ಜಾರಿಯಲ್ಲಿ ಸಮಸ್ಯೆಗಳು ಎದುರಾಗುತ್ತಿದೆ. ಇದನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಿಜಯೇಂದ್ರ ಹೋರಾಟದವನ್ನು ರೂಪಿಸಲು ಅವಕಾಶ ಇದೆ.

ರಾಜ್ಯದಲ್ಲಿ ಕೇವಲ ಗ್ಯಾರಂಟಿ ಯೋಜನೆಗಳ ಜಾರಿಗೆ ಆದ್ಯತೆ ನೀಡಲಾಗುತ್ತಿದೆ. ಆದರೆ ಅಭಿವೃದ್ದಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂಬ ಆರೋಪ ಇದೆ. ಸರ್ಕಾರ ಅಕಾರಕ್ಕೆ ಬಂದು ಆರು ತಿಂಗಳಾದರೂ ಅಭಿವೃದ್ದಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಇಲಾಖಾವಾರು ಕೆಲಸಗಳು ನಡೆದಿಲ್ಲ ಎಂಬ ಆರೋಪಗಳು ಇವೆ.

ಈ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ವಿಜಯೇಂದ್ರ ಮುಂದಾಗುತ್ತಾರಾ ಎಂಬುದು ಕೂಡ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಸಾಕಷ್ಟು ಅಸ್ತ್ರಗಳು ವಿಜಯೇಂದ್ರ ಮುಂದಿದೆ. ವಿರೋಧ ಪಕ್ಷವಾದ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಸರ್ಕಾರದ ವಿರುದ್ಧ ಹೇಗೆ ಹೋರಾಟ ರೂಪಿಸಿ ಜನಾಭಿಪ್ರಾಯ ರೂಪಿಸುತ್ತಾರೆ ಎಂಬುದನ್ನು ಕಾದುನೊಡಬೇಕಿದೆ.

RELATED ARTICLES

Latest News