Friday, May 24, 2024
Homeರಾಜ್ಯನಾಶಿಪುಡಿ ಬಂಧನಕ್ಕೂ ಬ್ಯಾಡಗಿ ಗಲಭೆ ಪ್ರಕರಣಕ್ಕೂ ಸಂಬಂಧವಿಲ್ಲ : ಗೃಹಸ ಚಿವ ಪರಮೇಶ್ವರ್

ನಾಶಿಪುಡಿ ಬಂಧನಕ್ಕೂ ಬ್ಯಾಡಗಿ ಗಲಭೆ ಪ್ರಕರಣಕ್ಕೂ ಸಂಬಂಧವಿಲ್ಲ : ಗೃಹಸ ಚಿವ ಪರಮೇಶ್ವರ್

ಬೆಂಗಳೂರು,ಮಾ.12- ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿನ ಹಿಂಸಾಚಾರ ಹಾಗೂ ದರ ಕುಸಿತ ಕುರಿತಂತೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ವಿಂಟಾಲ್‍ಗೆ 20 ಸಾವಿರ ರೂ.ಗಳಿದ್ದ ಮೆಣಸಿನಕಾಯಿಯ ದರ ಏಕಾಏಕಿ 8 ಸಾವಿರಕ್ಕೆ ಕುಸಿದಿದೆ. ಇದರಿಂದ ನಷ್ಟಕ್ಕೊಳಗಾಗುವ ಆತಂಕದಲ್ಲಿ ರೈತರು ಸಹಜವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಏಕಾಏಕಿ ಆ ಪ್ರಮಾಣದಲ್ಲಿ ಧಾರಣೆ ಕುಸಿಯಲು ಯಾರು ಕಾರಣ ಎಂಬುದನ್ನು ತನಿಖೆ ನಡೆಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದರು.

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಏಷ್ಯಾದಲ್ಲೇ ದೊಡ್ಡದಾಗಿದೆ. ಅಲ್ಲಿಗೆ ರಾಜ್ಯ ಹಾಗೂ ಆಂಧ್ರ ಪ್ರದೇಶದ ರೈತರು, ವರ್ತಕರು ಬರುತ್ತಾರೆ. ಗಲಾಟೆ ಯಾರು ಮಾಡಿದರು, ಬೆಂಕಿ ಯಾರು ಹಚ್ಚಿದ್ದು ಎಂಬ ವಿಚಾರಣೆ ನಡೆಯುತ್ತಿದೆ, ಪೊಲೀಸರು ಈವರೆಗೂ 45 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದರು.

ಆರೇಳು ವಾಹನಗಳನ್ನು ಸುಟ್ಟುಹಾಕಲಾಗಿದೆ. ಬೆಂಕಿ ನಂದಿಸಲು ಬಂದಿದ್ದ ಅಗ್ನಿಶಾಮಕ ದಳದ ವಾಹನಕ್ಕೂ ಬೆಂಕಿ ಹಚ್ಚಲಾಗಿದೆ. ಘಟನೆಯಿಂದ ತಮಗೂ ತುಂಬಾ ಬೇಸರವಾಗಿದೆ ಎಂದು ಹೇಳಿದರು.ಗಲಾಟೆಗೆ ಯಾರು ಕಾರಣ ಅಥವಾ ದರ ಕುಸಿತದ ಹಿಂದೆ ಸಂಚಿದೆಯೇ ಎಂಬುದನ್ನು ಪತ್ತೆ ಹಚ್ಚಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ತಿಳಿಸಿದರು.

ಮೆಣಸಿನಕಾಯಿ ಧಾರಣೆಯನ್ನು ಎಪಿಎಂಸಿಯವರೇ ನಿಯಂತ್ರಿಸುತ್ತಿದ್ದರು. ಇದ್ದಕ್ಕಿದ್ದಂತೆ ದರ ಕುಸಿಯಲು ಏನು ಕಾರಣ ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದರು.ಇತ್ತೀಚೆಗೆ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬ್ಯಾಡಗಿ ಮೂಲದ ಆರೋಪಿ ನಾಶಿಪುಡಿ ಎಂಬುವರನ್ನು ಬಂಧಿಸಿರುವುದಕ್ಕೂ, ಈ ಗಲಭೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಗೃಹಸಚಿವರು ಸ್ಪಷ್ಟಪಡಿಸಿದರು.ಮೆಣಸಿನಕಾಯಿ ದರ ನಿಗದಿಗೆ ಮತ್ತೆ ಇಂದು ಮರು ಟೆಂಡರ್ ನಡೆಸಲಾಗುವುದು. ಎಪಿಎಂಸಿ ಯಥಾಸ್ಥಿತಿಯಲ್ಲಿಯೇ ಕಾರ್ಯಾಚರಣೆ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟದ ಆರೋಪಿ ಬಗ್ಗೆ ನಾನಾ ರೀತಿಯ ವದಂತಿಗಳು ಹರಡುತ್ತಿವೆ. ಆರೋಪಿಯನ್ನು ಬಂಧಿಸುವವರೆಗೂ ಯಾವುದೂ ಖಚಿತವಲ್ಲ. ತನಿಖಾಧಿಕಾರಿಗಳು ಶೀಘ್ರವೇ ಬಾಂಬರ್‍ನನ್ನು ಬಂಧಿಸಲಿದ್ದಾರೆ ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರ ಸಿಎಎ ಜಾರಿಗೆ ತಂದಿರುವುದರ ಹಿಂದೆ ರಾಜಕೀಯದ ಉದ್ದೇಶವಿದೆ ಎಂಬುದು ಒಂದು ವಾದ. ಆದರೆ, ಅದರಲ್ಲಿ ಯಾವ ನಿಯಮಗಳಿವೆ ಎಂದು ನೋಡದ ಹೊರತು ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದರು. ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕಾಂತರಾಜು ವರದಿ ಪ್ರಸ್ತಾಪವಾಗಲಿದೆಯೋ, ಇಲ್ಲವೋ ಎಂಬುದು ಗೊತ್ತಿಲ್ಲ ಎಂದು ಹೇಳಿದರು.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಾಕಿ ಇರುವ ಕಾಂಗ್ರೆಸ್‍ನ 21 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ನಿನ್ನೆ ರಾಜ್ಯ ಸ್ಕ್ರೀನಿಂಗ್ ಸಮಿತಿ ಸಭೆ ನಡೆದಿದೆ. ಇಂದೂ ಕೂಡ ಚರ್ಚೆಗಳು ಮುಂದುವರೆದಿವೆ. ನಮ್ಮಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ. ಹೆಚ್ಚು ಮಂದಿ ಆಕಾಂಕ್ಷಿಗಳಿದ್ದಾರೆ. ಸಹಜವಾಗಿ ಎಲ್ಲಾ ಪಕ್ಷಗಳಲ್ಲಿರುವಂತೆ ನಮ್ಮಲ್ಲೂ ಗೊಂದಲಗಳಿವೆ. ಶೀಘ್ರವೇ ಅದನ್ನು ನಾಯಕರು ಬಗೆಹರಿಸುತ್ತಾರೆ ಎಂದು ಹೇಳಿದರು.

RELATED ARTICLES

Latest News