Thursday, September 19, 2024
Homeರಾಜ್ಯ2 ಮಕ್ಕಳ ತಾಯಿಗೆ ಬಾಳು ಕೊಡುವುದಾಗಿ ನಂಬಿಸಿ ಕೈ ಕೊಟ್ಟ ಕ್ಯಾಬ್‌ ಡ್ರೈವರ್

2 ಮಕ್ಕಳ ತಾಯಿಗೆ ಬಾಳು ಕೊಡುವುದಾಗಿ ನಂಬಿಸಿ ಕೈ ಕೊಟ್ಟ ಕ್ಯಾಬ್‌ ಡ್ರೈವರ್

ಬೆಂಗಳೂರು,ಆ.10- ಎರಡು ಮಕ್ಕಳ ತಾಯಿಯ ರೀಲ್ಸ್ ನೋಡಿ ಮೆಚ್ಚಿಕೊಂಡು ಆಕೆಗೆ ಬಾಳು ಕೊಡುವುದಾಗಿ ಮರುಳು ಮಾಡಿದ ಕ್ಯಾಬ್‌ ಚಾಲಕ ಇದೀಗ ಕೈಕೊಟ್ಟು ಹೋಗಿದ್ದು, ಆ ಮಹಿಳೆ ನ್ಯಾಯಕ್ಕಾಗಿ ಪೊಲೀಸ್‌‍ ಠಾಣೆ ಮೆಟ್ಟಿಲೇರಿದ್ದಾಳೆ.ಹದಿಮೂರು ವರ್ಷದ ಹಿಂದೆ ಈ ಮಹಿಳೆ ಮದುವೆಯಾಗಿದ್ದು, 12 ಹಾಗೂ 10 ವರ್ಷದ ಇಬ್ಬರು ಮಕ್ಕಳಿದ್ದಾರೆ. ಗಂಡ ಕುಡಿದು ಬಂದು ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ಆಕೆ ಗಂಡನನ್ನು ತೊರೆದು ಇಬ್ಬರು ಮಕ್ಕಳನ್ನು ಕರೆದುಕೊಂಡು ತವರು ಮನೆ ಸೇರಿದ್ದಾಳೆ.

ನಂತರದ ದಿನಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಮಗನನ್ನು ಹಾಸ್ಟೆಲ್‌ಗೆ ಸೇರಿಸಿ ಮಗಳನ್ನು ತವರುಮನೆಯಲ್ಲಿಯೇ ಬಿಟ್ಟು ಒಂದು ವರ್ಷದ ಹಿಂದೆ ನಗರಕ್ಕೆ ಬಂದ ಮಹಿಳೆ ಜೀವನೋಪಾಯಕ್ಕಾಗಿ ಪೆಟ್ರೋಲ್‌ಬಂಕ್‌ನಲ್ಲಿ ಕೆಲಸ ಮಾಡಿಕೊಂಡು ಕೆಂಗೇರಿಯಲ್ಲಿ ಸ್ನೇಹಿತೆಯರ ಜೊತೆ ರೂಂ ಮಾಡಿಕೊಂಡು ವಾಸಿಸುತ್ತಿದ್ದರು.

ಈ ನಡುವೆ ಆ ಮಹಿಳೆ ರೀಲ್‌್ಸ ಮಾಡುತ್ತಿದ್ದರು. ಈಕೆಯ ರೀಲ್ಸ್ ನೋಡುತ್ತಿದ್ದ ಕ್ಯಾಬ್‌ ಚಾಲಕನೊಬ್ಬ ಅದನ್ನು ಲೈಕ್‌ ಮಾಡಿ, ಬ್ಯೂಟಿಫುಲ್‌ ಎಂದು ಕಮೆಂಟ್‌ ಮಾಡಿದ್ದಾನೆ. ತದನಂತರದಲ್ಲಿ ಇವರಿಬ್ಬರೂ ಪರಿಚಯವಾಗಿ ಮೊಬೈಲ್‌ ನಂಬರ್‌ ಪಡೆದು ಆಗಾಗ್ಗೆ ಚಾಟಿಂಗ್‌ ಮಾಡುತ್ತಾ ಭೇಟಿ ಮಾಡಿ ಪರಸ್ಪರ ಮಾತುಕತೆ ನಡೆಸಿದ್ದಾರೆ.

ಆ ಸಂದರ್ಭದಲ್ಲಿ ಆ ಮಹಿಳೆ ತನಗೆ ಇಬ್ಬರು ಮಕ್ಕಳಿದ್ದಾರೆ ಎಂದು ತನ್ನ ಕುಟುಂಬದ ಬಗ್ಗೆ ಹೇಳಿಕೊಂಡಿದ್ದಾಳೆ. ಕ್ಯಾಬ್‌ ಚಾಲಕ ನಿನಗೆ ಬಾಳು ಕೊಡುವುದಾಗಿ ಹೇಳಿದ್ದಾನೆ. ರೂಂನ ಸ್ನೇಹಿತೆಯರು ಬೇರೆ ಮನೆ ಮಾಡಿಕೊಂಡು ಹೋಗಿದ್ದಾರೆ. ಕ್ಯಾಬ್‌ ಚಾಲಕ ನಂತರದ ದಿನಗಳಲ್ಲಿ ಆಕೆಯ ಜೊತೆ ಈ ಮನೆಯಲ್ಲಿ ನೆಲೆಸಿದ್ದು, ಇದೀಗ ಆತ ಆಕೆಯನ್ನು ಬಿಟ್ಟು ಹೋಗಿದ್ದಾನೆ.

ಇದೀಗ ಕ್ಯಾಬ್ ಚಾಲಕನ ವಿರುದ್ಧ ಆ ಮಹಿಳೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಆಕೆಯ ದೂರನ್ನು ಆಲಿಸಿ ಕ್ಯಾಬ್ ಚಾಲಕನನ್ನು ಕರೆಸಿ ವಿಚಾರಿಸಿದಾಗ ಆಕೆ ಗಂಡನಿಂದ ವಿಚ್ಛೇದನ ಪಡೆದರೆ ನಾನು ಆಕೆಗೆ ಬಾಳು ಕೊಡುವುದಾಗಿ ಹೇಳಿದ್ದಾನೆ.
ಈಗ ಆ ಮಹಿಳೆ ಗಂಡನಿಂದ ವಿಚ್ಛೇದನಕ್ಕಾಗಿ ದಾಖಲೆ ತರಲು ಹೋಗಿದ್ದಾರೆ.

RELATED ARTICLES

Latest News