ಮುಂಬೈ, ಮೇ 16– ಅಪರಾಧ ವಿಭಾಗದ ಪೊಲೀಸರೆಂದು ಹೇಳಿಕೊಂಡು ಆರು ಮಂದಿ ದರೋಡೆಕೋರರು ಮುಂಬೈನ ಸಿಯಾನ್ ಪ್ರದೇಶದಲ್ಲಿ ಕೆಫೆ ಮಾಲೀಕರ ಮನೆಗೆ ನುಗ್ಗಿ 25 ಲಕ್ಷ ರೂಪಾಯಿ ದೋಚಿದ್ದಾರೆ.
ಈ ಪೈಕಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಗರದ ಮಾಟುಂಗಾ ಪ್ರದೇಶದಲ್ಲಿ ಜನಪ್ರಿಯ ಕೆಫೆ ನಡೆಸುತ್ತಿರುವ ವ್ಯಾಪಾರಿ ಮನೆಗೆ ಪೊಲೀಸರೆಂದು ಹೇಳಿ 6 ಮಂದಿ ಬಂದು,ತಾವು ಚುನಾವಣಾ ಕರ್ತವ್ಯದಲ್ಲಿದ್ದೇವೆ ಮತ್ತು ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಹಣ ಇಟ್ಟುಕೊಂಡಿರುವ ಬಗ್ಗೆ ಮಾಹಿತಿ ಇದೆ ತಪಾಸಣೆ ನಡೆಸಬೇಕಿದೆ ಎಂದು ನುಗ್ಗಿದ್ದಾರೆ.
ತನ್ನ ವ್ಯಾಪಾರದಿಂದ ಕೇವಲ 25 ಲಕ್ಷ ರೂಪಾಯಿ ನಗದು ಹೊಂದಿದ್ದು, ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.ಆದರೆ, ಆರೋಪಿಗಳು ಹಣ ಕಿತ್ತುಕೊಂಡು ತಮ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಬೆದರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ನಂತರ ಅನುಮಾನಗೊಂಡು ಕೂಡಲೆ ಕೆಫೆ ಮಾಲೀಕರು ಸಿಯೋನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ನೀಡಿದರು ತಕ್ಷಣ ತನಿಖೆ ಕೈಗೊಂಡು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಪರಾಧದಲ್ಲಿ ನಿವೃತ್ತ ಪೊಲೀಸ್ ಪೇದೆ ಮತ್ತು ಪೊಲೀಸ್ ಮೋಟಾರು ಸಾರಿಗೆ ಇಲಾಖೆಯ ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪರಾರಿಯಾಗಿರುವ ತಂಡದ ಇತರೆ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.ಮುಂಬೈನಲ್ಲಿ ಮೇ 20 ರಂದು ಐದನೇ ಹಂತದ ಸಾರ್ವತ್ರಿಕ ಚುನಾವಣೆ ನಡೆಯಲಿದೆ.