ಬೆಂಗಳೂರು,ಮಾ.24- ಯಾವುದೇ ದೊಡ್ಡ ಪರೀಕ್ಷೆಗಳಿಲ್ಲದ ಸಿಸಿ ಕ್ಯಾಮೆರಾ ಮತ್ತು ವೆಬ್ ಕ್ಯಾಮೆರಾಗಳು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೊಠಡಿಗಳಲ್ಲಿ ಕಡ್ಡಾಯ ಮಾಡಿರುವುದು ಏಕೆ ಎಂದು ರೂಪ್ಸಾ ಸಂಘಟನೆ ಪ್ರಶ್ನಿಸಿದೆ. ಈ ಕುರಿತು ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪತ್ರಿಕಾ ಹೇಳಿಕೆ ನೀಡಿದ್ದು, ಶಿಕ್ಷಣ ಇಲಾಖೆ ಹಾಗೂ ಪ್ರೌಢಶಾಲಾ ಪರೀಕ್ಷಾ ಮಂಡಳಿ ಇತ್ತೀಚಿನ ದಿನಗಳಲ್ಲಿ ವಿಚಿತ್ರವಾಗಿ ನಡೆದುಕೊಳ್ಳುತ್ತಿದೆ.
ಐಎಎಸ್, ನೀಟ್, ಜೆಇಇ, ಪಿಯುಸಿ ಇತ್ಯಾದಿ ಯಾವುದೇ ಪರೀಕ್ಷೆಗೆ ಇಲ್ಲದ ಕಣ್ಗಾವಲು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಯಾಕೆ? ಇಂಥ ಕೆಟ್ಟ ಅಸಂಪ್ರದಾಯಿಕ ಪದ್ಧತಿಗಳನ್ನು ರೂಪಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ಮೇಲ್ವಿಚಾರಕರಾಗಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಿ ಅವರಿಗೆ ತರಬೇತಿ ಸಹ ನೀಡಲಾಯಿತು. ಅನಂತರ ಪ್ರೌಢಶಾಲಾ ಶಿಕ್ಷಕರನ್ನು ನೇಮಿಸಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅವಮಾನಿಸಲಾಯಿತು. ಈಗ ತರಾತುರಿಯಲ್ಲಿ ಹೊಸದಾಗಿ ಸರ್ಕಾರಿ ಅನುದಾನಿತ ಶಾಲಾ ಶಿಕ್ಷಕರನ್ನು ಮಾತ್ರ ನೇಮಿಸಿಕೊಂಡು ಅವರಿಗೆ ತರಬೇತಿ ನೀಡಿದ್ದಾರೆ. ಆದರೆ ಅನುದಾನ ರಹಿತ ಶಾಲಾ ಶಿಕ್ಷಕರನ್ನು ದೂರ ಇಟ್ಟು ತರಬೇತಿ ಹೆಸರಿನಲ್ಲಿ ಸಾರ್ವಜನಿಕರ ಹಣವನ್ನು ಪೋಲೂ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇವರನ್ನು ನಂಬದೇ ಪ್ರತಿ ಕೊಠಡಿಗೆ ಸಿಸಿ ಕ್ಯಾಮೆರಾ ಅಳವಡಿಸಿ ಅವುಗಳನ್ನು ವೆಬ್ ಲಿಂಕ್‍ಗೆ ಜೋಡಿಸಿ ಸ್ಥಳೀಯ ಪೊಲೀಸ್ ಸ್ಟೇಷನ್ ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕರಿಗೆ ನೇರ ಸಂಪರ್ಕಕ್ಕೆ ಸಿಗುವಂತೆ ಮಾಡುವ ನಿರ್ಧಾರ ಮಾಡಿ ಮೂರು ದಿನದಲ್ಲಿ ಪರೀಕ್ಷೆ ನಡೆಯುವ ಎಲ್ಲಾ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲೇಬೇಕು ಎಂಬ ಮಕ್ಕಳಿಗೆ ಭಯ ಹುಟ್ಟಿಸುವಂತಹ ದುಬಾರಿ ನಿರ್ಣಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮ, ಪರೀಕ್ಷಾ ಕೊಠಡಿಗಳಲ್ಲಿ ನಿರ್ಭೀತಿಯಿಂದ ಪರೀಕ್ಷೆ ಬರೆಯುವಂತಹ ವಾತಾವರಣ ಸೃಷ್ಟಿ ಮಾಡುವ ಬದಲು ದೊಡ್ಡ ಅಪರಾಧ ತಡೆಯುವರಂತೆ ಈ ರೀತಿ ಮಾಡುವ ಕ್ರಮ ಖಂಡನೀಯ ಎಂದು ಅವರು ಹೇಳಿದ್ದಾರೆ.