ನಾಗಮಂಗಲ, ಸೆ.27- ರಸ್ತೆ ಬದಿ ನಿಂತಿದ್ದ ಕೆಎಸ್ಆರ್ಟಿಸಿ ಬಸ್‍ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.ಬೆಂಗಳೂರು ಮೂಲದ ಮಹಿಳೆ ಹಾಗೂ ಮೂವರು ಪುರುಷರು ಮೃತಪಟ್ಟಿದ್ದು, ಇವರ ಹೆಸರು, ವಿಳಾಸ ಸದ್ಯಕ್ಕೆ ತಿಳಿದು ಬಂದಿಲ್ಲ.
ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಬಳಿಯ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆ ಎದುರಿನ ರಸ್ತೆ ಬದಿ ಇಂದು ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ಲಿಸಲಾಗಿತ್ತು. ಇದೇ ಮಾರ್ಗವಾಗಿ ಹಾಸನ ಕಡೆಯಿಂದ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ಬಸ್‍ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮಹಿಳೆ ಹಾಗೂ ಮೂವರು ಪುರುಷರು ಮೃತಪಟ್ಟಿದ್ದಾರೆ.
ಸಂಘಟಿತ ಅಪರಾಧಗಳಿಗೆ ಕೆನಡಾದಲ್ಲಿ ಬೆಂಬಲ ಕಳವಳಕಾರಿ : ಜೈಶಂಕರ್
ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಅರ್ಧ ಭಾಗ ಬಸ್‍ನೊಳಗೆ ಹೊಕ್ಕಿದೆ. ಸುದ್ದಿ ತಿಳಿಯುತ್ತಿದ್ದಂತೆ ಬೆಳ್ಳೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರಿನೊಳಗೆ ಸಿಕ್ಕಿಕೊಂಡಿದ್ದ ನಾಲ್ವರ ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತಪಟ್ಟವರು ಬೆಂಗಳೂರು ಮೂಲದವರು ಎಂದು ಹೇಳಲಾಗಿದ್ದು, ಸದ್ಯಕ್ಕೆ ಹೆಸರು, ವಾಸ ಸ್ಥಳದ ವಿಳಾಸ ತಿಳಿದು ಬಂದಿಲ್ಲ.ಬೆಳ್ಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.