Friday, June 14, 2024
Homeಜಿಲ್ಲಾ ಸುದ್ದಿಗಳುಚಾಲಕನ ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ ಪಲ್ಟಿಯಾಗಿ 3 ಮಂದಿ ಸ್ಥಳದಲ್ಲೇ ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ ಪಲ್ಟಿಯಾಗಿ 3 ಮಂದಿ ಸ್ಥಳದಲ್ಲೇ ಸಾವು

ಗೌರಿಬಿದನೂರು, ಜೂ.7- ಚಾಲಕನ ನಿಯಂತ್ರಣ ತಪ್ಪಿದ ಕಾರು ಅಪಘಾತಕ್ಕೀಡಾಗಿ ಅದರಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ನಗರಗೆರೆ ಹೋಬಳಿಯ ವಾಟದ ಹೊಸಹಳ್ಳಿ ಗ್ರಾಮದ ಬಳಿಯ ತಿರುವಿನಲ್ಲಿ ತಡರಾತ್ರಿ ನಡೆದಿದೆ.

ತಾಲೂಕಿನ ಬಿ.ತಾಂಡ ವಾಸಿ ಶ್ರೀಧರ್‌ ನಾಯಕ್‌ (28), ಚಿಕ್ಕಬಳ್ಳಾಪುರದ ಪೆರೆಸಂದ್ರದ ವೇಣುಗೋಪಾಲ್‌(38), ಬೆಲ್ಲಾಳಹಳ್ಳಿಯ ಮಂಜುನಾಥ್‌ (37) ಮೃತಪಟ್ಟವರು. ದಾವಣಗೆರೆ ನಿವಾಸಿ ಶಿವಕುಮಾರ್‌ (38) ಗಾಯಗೊಂಡಿದ್ದಾರೆ. ಇವರೆಲ್ಲರೂ ಬೆಸ್ಕಾಂ ನೌಕರರು ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ತವ್ಯ ನಿಮಿತ್ತ ವೇಣುಗೋಪಾಲ್‌ ಅವರ ಬ್ರಿಜಾ ಕಾರಿನಲ್ಲಿ ನಗರಗೆರೆಗೆ ತೆರಳಿದ್ದು, ಗೌರಿಬಿದನೂರಿಗೆ ವಾಪಸ್‌ ಬರುವಾಗ ಈ ದುರಂತ ಸಂಭವಿಸಿದೆ.ಅಪಘಾತದ ರಭಸಕ್ಕೆ ಕಾರು ಹಳ್ಳಕ್ಕೆ ಉರುಳಿ ಬಿದ್ದು ಮರವೊಂದಕ್ಕೆ ಕಚ್ಚಿಕೊಂಡಿದೆ. ಅದರಲ್ಲಿದ್ದ ಮೂವರು ಚೆಲ್ಲಾಪಿಲ್ಲಿಯಾಗಿ ಹೊರಗೆ ಬಿದ್ದು ರೆಂಬೆಕೊಂಬೆಗಳಿಗೆ ಕಚ್ಚಿಕೊಂಡು ಮೃತಪಟ್ಟಿದ್ದರೆ, ಒಬ್ಬರು ಕಾರಿನಲ್ಲೇ ಸಿಲುಕಿದ್ದರು.

ಮೃತರು ವಾಟದಹೊಸಹಳ್ಳಿ ಬೆಸ್ಕಾಂ ವಿಭಾಗದಲ್ಲಿ ಲೈನ್‌ಮೆನ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿರುವುದೇ ಈ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

ಈ ಘೋರ ಅಪಘಾತ ರಾತ್ರಿ ನಡೆದಿದ್ದು , ಇಂದು ಬೆಳಗಿನವರೆಗೂ ಯಾರಿಗೂ ಗೊತ್ತಾಗಿಲ್ಲ. ಗ್ರಾಮಸ್ಥರು ಇದನ್ನು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶಿವಕುಮಾರ್‌ ಪ್ರಜ್ಞೆ ತಪ್ಪಿ ರಾತ್ರಿ ಇಡೀ ಅಲ್ಲೇ ಕಳೆದಿದ್ದಾರೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಎಸ್‌ಪಿ ಡಿ.ಎಲ್‌.ನಾಗೇಶ್‌, ಅಡಿಷನಲ್‌ ಎಸ್‌ಪಿ ಕಾಸೀಮ್‌, ಡಿವೈಎಸ್‌ಪಿ ಶಿವಕುಮಾರ್‌, ಸಿಪಿಐ ಕೆ.ಪಿ.ಸತ್ಯನಾರಾಯಣ್‌, ಗ್ರಾಮಾಂತರ ಠಾಣೆಯ ಎಸ್‌ಐ ರಮೇಶ್‌ ಗುಗ್ಗರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರೇನ್‌ ಮೂಲಕ ಮೃತ ದೇಹಗಳನ್ನು ಹೊರತೆಗೆಸಿದ್ದಾರೆ.ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

RELATED ARTICLES

Latest News