ಚಿಕ್ಕಮಗಳೂರು, ಜೂ.29- ಕೊಟ್ಟಿಗೆಹಾರದಿಂದ ಬಣಕಲ್ ಹೋಗುವ ರಸ್ತೆಯ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೇಮಾವತಿ ನದಿಯ ಕಿರು ಕಾಲುವೆಗೆ ಬಿದ್ದಿದೆ. ಕಾರು ಮಂಗಳೂರು ಕಡೆಯಿಂದ ಮೂಡಿಗೆರೆ ಕಡೆಗೆ ಸಾಗುತ್ತಿದ್ದಾಗ ಮಳೆಗೆ ತಿರುವು ಕಾಣದೇ ಹಳ್ಳಕ್ಕೆ ಬಿದ್ದಿದೆ.
ವಿಲ್ಲುಪುರಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಣಕಲ್ ಸಮೀಪ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ನೀರು ನಿಂತು ಇಂತಹ ಘಟನೆ ಸಂಭವಿಸುತ್ತಿದೆ.ಕಾರಿನಲ್ಲಿ ಇಬ್ಬರೇ ಇದ್ದು ಕಾರು ನೀರಿಗೆ ಜಾರಿರುವುದ ರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ.ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಮಂಗಳೂರು ಮೂಲದ ಕಾರೆಂದು ತಿಳಿದು ಬಂದಿದೆ. ರಾಷ್ಟ್ರೀಯ ಹೆದ್ದಾರಿಯ ಬಣಕಲ್ ಸಮೀಪ ಹೆದ್ದಾರಿ ಸಮತಟ್ಟಿಲ್ಲದೆ ಇರುವುದರಿಂದ ನೀರು ನಿಂತು ಅವಘಡ ಸಂಭವಿಸಿದೆ. ಭಾರಿ ಮಳೆಯಿಂದಾಗಿ ರಸ್ತೆ ಪಕ್ಕದಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಮೂರು ಹಸುಗಳು ಮೃತಪಟ್ಟ ಘಟನೆ ಕೊಪ್ಪ ತಾಲೂಕಿನ ಕೆಸವೆ ಗ್ರಾಮ ಪಂಚಾಯಿತಿ ವ್ಯಾ ಪ್ತಿ ಸಿದ್ಧರಮಠ ಸಮೀಪ ನಡೆದಿದೆ.
ಹಸುಗಳು ರಸ್ತೆ ಪಕ್ಕದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದೆ. ರಾಮರಾಜ್ ಎಂಬುವರಿಗೆ ಸೇರಿದ ಎರಡು ಹಸುಗಳು ಮಹೇಶ್ ಎಂಬುವರಿಗೆ ಸೇರಿದ ಒಂದು ಹಸು ಮೃತಪಟ್ಟಿವೆ. ನೂರಾರು ಮರಗಳು ಹಾಗೂ ವಿದ್ಯುತ್ ಕಂಬ ಧರೆಗೆ ಉರುಳಿದ್ದು ವಿದ್ಯುತ್ ಪೂರೈಕೆಯಲ್ಲಿ ಅಡ್ಡಿಯಾಗಿದ್ದು ಮಳೆಯ ನಡುವೆ ಮೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.
ಮೂಡಿಗೆರೆ, ಶೃಂಗೇರಿ, ಎನ್‌ಆರ್ ಪುರ ತಾಲ್ಲೂಕುಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಸತತ ಮಳೆಯಿಂದ ಬಹುತೇಕ ನದಿ ಹಳ್ಳಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.