Friday, November 22, 2024
Homeರಾಜ್ಯಲೋಕಸಭೆ ಚುನಾವಣೆ : ರಾಜ್ಯದಲ್ಲಿ ಎಣ್ಣೆ ಹೊಳೆ, ಹಣದ ಮಳೆ, ಆಭರಣಗಳ ಕಳೆ

ಲೋಕಸಭೆ ಚುನಾವಣೆ : ರಾಜ್ಯದಲ್ಲಿ ಎಣ್ಣೆ ಹೊಳೆ, ಹಣದ ಮಳೆ, ಆಭರಣಗಳ ಕಳೆ

ಬೆಂಗಳೂರು, ಮಾ.30- ಪ್ರಸಕ್ತ ಲೋಕಸಭಾ ಸಾರ್ವತ್ರಿಕ ಚುನಾವಣಾ ಘೋಷಣೆಯಾಗಿ ಎರಡು ವಾರ ಕಳೆಯುವ ಮುನ್ನವೇ ರಾಜ್ಯದಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ, ವಜ್ರಾಭರಣಗಳು ಹಾಗೂ ಮದ್ಯವನ್ನು ಜಪ್ತಿ ಮಾಡಲಾಗಿದೆ.

ಮಾ.16 ರಂದು ಚುನಾವಣಾ ವೇಳಾಪಟ್ಟಿ ಘೋಷಣೆಯಾಗಿ ಅಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಚುನಾವಣೆ ಹಿನ್ನೆಲೆಯಲ್ಲಿ ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್, ಆದಾಯ ಹಾಗೂ ಅಬಕಾರಿ ಅಧಿಕಾರಿಗಳು ತಪಾಸಣೆ ವೇಳೆ ಕೋಟ್ಯಂತರ ರೂ. ಮೌಲ್ಯದ ಮದ್ಯ, ನಗದು, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಒಟ್ಟು 8,63,337.38 ಲೀಟರ್‍ನಷ್ಟು ಭಾರೀ ಪ್ರಮಾಣದಲ್ಲಿ ಮದ್ಯವನ್ನು ಜಪ್ತಿ ಮಾಡಲಾಗಿದೆ. ಇದರ ಮೌಲ್ಯವನ್ನು 27,27,59,762 ರೂ. ಎಂದು ಅಂದಾಜಿಸಲಾಗಿದೆ.

ಅದೇ ರೀತಿ 15.32 ಕೆ.ಜಿ. ಚಿನ್ನ 59.04 ಕೆ.ಜಿ. ಬೆಳ್ಳಿ, 21.17 ಕ್ಯಾರೆಟ್ ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 62,42,20,710 ರೂ. ಎಂದು ಅಂದಾಜಿಸಲಾಗಿದೆ. ಇದಲ್ಲದೆ, 20,85,73,387 ರೂ.ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಕಳೆದ ಲೋಕಸಭಾ ಚುನಾವಣೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನಗದು, ಚಿನ್ನಾಭರಣ ಹಾಗೂ ಮದ್ಯವನ್ನು ಜಪ್ತಿ ಮಾಡುತ್ತಿರುವುದು ಕಂಡುಬರುತ್ತಿದೆ. ಬೆಂಗಳೂರು ನಗರದ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆ ತಂಡದವರು 10.20 ಲಕ್ಷ ರೂ. ಮೌಲ್ಯದ 17.425 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಸ್ಥಿರ ಕಣ್ಗಾವಲು ತಂಡದವರು 6 ಲಕ್ಷ ಮೌಲ್ಯದ 128.74 ಗ್ರಾಂ ಚಿನ್ನದ ಆಭರಣಗಳು ಮತ್ತು ಹವಳವನ್ನು ವಶಪಡಿಸಿಕೊಂಡಿರುವುದಲ್ಲದೆ 14,63,530 ರೂ. ನಗದು ಸೇರಿದಂತೆ ಒಟ್ಟು 20,63,530 ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ತುಮಕೂರು ಜಿಲ್ಲೆಯ ಬಟ್ವಾಡಿ ಚೆಕ್‍ ಪೋಸ್ಟ್ ನಲ್ಲಿ ಜಪ್ತಿ ಮಾಡಿದ್ದಾರೆ.

ಅಬಕಾರಿ ಇಲಾಖೆಯವರು 7,344 ಲೀಟರ್ ಭಾರತೀಯ ನಿರ್ಮಿತ ವಿದೇಶಿ ಮದ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜಪ್ತಿ ಮಾಡಿದ್ದು, ಇದರ ಮೌಲ್ಯ 29,50,486 ರೂ. ಎಂದು ಅಂದಾಜಿಸಲಾಗಿದೆ.8,970 ಲೀಟರ್ ಬೀಯರ್ ಅನ್ನು ವೈಟ್‍ಫೀಲ್ಡ್ ಬಳಿ ವಶಪಡಿಸಿಕೊಂಡಿದ್ದು, ಇದರ ಮೌಲ್ಯ 29,92,910 ರೂ. ಎಂದು ಅಂದಾಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES

Latest News