ಬೆಂಗಳೂರು, ಜ.24- ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾದ ಸಾಮಾಜಿಕ, ಶೈಕ್ಷಣಿ ಹಾಗೂ ಆರ್ಥಿಕ ಸಮೀಕ್ಷಾ ವರದಿಯನ್ನು ಜನವರಿ 31ರೊಳಗಾಗಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕಕಾಲಕ್ಕೆ ಪೂರ್ಣ ಪ್ರಮಾಣದ ವರದಿಯನ್ನು ಸಲ್ಲಿಸಲಾಗುತ್ತದೆ. ಇಲ್ಲಿ ಮಧ್ಯಂತರ ವರದಿ ಎಂಬ ಗೊಂದಲಗಳಿಗೆ ಅವಕಾಶ ಇಲ್ಲ. ಜನವರಿ 31ಕ್ಕೆ ತಮ್ಮ ಅಧ್ಯಕ್ಷೀಯ ಅವ ಮುಗಿಯಲಿದೆ. ಅದರೊಳಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ವರದಿಯಲ್ಲಿ ಅಂಶಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಸದ್ಯಕ್ಕೆ ವರದಿಯ ಪುಸ್ತಕ ಮುದ್ರಣಗೊಳ್ಳುತ್ತಿದೆ. ಅದು ಸಿದ್ಧವಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಯ ಕೇಳಲಾಗುವುದು. ಸಮಯ ಸಿಕ್ಕರೆ ಬಹುತೇಕ ಜನವರಿ 30ರ ಒಳಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಇದನ್ನು ಜಾತಿ ಜನಗಣತಿ ಎಂದಾಗಲಿ, ಕಾಂತರಾಜು ಅಥವಾ ಜಯಪ್ರಕಾಶ್ ಹೆಗ್ಡೆ ವರದಿ ಎಂದಾಗಲಿ ಭಾವಿಸಬೇಕಿಲ್ಲ. ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯಾಗಿರಲಿದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ಬಳಿಕ ಅದನ್ನು ಸಂಪುಟದಲ್ಲಿ ಚರ್ಚಿಸಿ, ನಂತರ ವಿಧಾನ ಮಂಡಲ ಅವೇಶದಲ್ಲಿ ಮಂಡಿಸಬೇಕಾಗುತ್ತದೆ ಎಂದು ವಿವರಿಸಿದರು.
ಇದೇ ಅಧಿವೇಶನದಲ್ಲಿ ಮಂಡನೆ:
ಹಿಂದೆ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರ ನೇತೃತ್ವದಲ್ಲಿ ಸಮೀಕ್ಷೆ ನಡೆದಿದ್ದು, ಸರ್ಕಾರ ಇದಕ್ಕಾಗಿ ಸುಮಾರು 180 ಕೋಟಿ ರೂಪಾಯಿಗಳನ್ನು ಬಳಕೆ ಮಾಡಿದೆ. ಸಿದ್ದರಾಮಯ್ಯ ಅವರ ಮೊದಲ ಅವಧಿಯ ಅಧಿಕಾರವಯ ಕೊನೆಯ ದಿನಗಳಲ್ಲಿ ವರದಿಯಲ್ಲಿನ ಮಾಹಿತಿಗಳ ಸೋರಿಕೆಯಾಗಿದ್ದವು ಎಂಬ ಆರೋಪಗಳಿವೆ. ಆದರೆ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂಬ ಸಮರ್ಥನೆಗಳಿವೆ.
ಸೋರಿಕೆಯಾಗಿದೆ ಎಂಬ ಮಾಹಿತಿಯ ಪ್ರಕಾರ ಕೆಲ ಜಾತಿಗಳ ಜನಸಂಖ್ಯೆಯ ಬಗ್ಗೆ ಗೊಂದಲಗಳಿವೆ. ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿಲ್ಲ. ಬಹಳಷ್ಟು ಮನೆಗಳಿಗೆ ಸಮೀಕ್ಷಾದಾರರು ಭೇಟಿ ನೀಡಿಲ್ಲ, ಎಲ್ಲಿಯೋ ಕುಳಿತು ದತ್ತಾಂಶಗಳನ್ನು ಸಂಗ್ರಹಿಸಿದ್ದಾರೆ ಎಂಬ ದೂರುಗಳಿವೆ.
ಅಯೋಧ್ಯೆಯಲ್ಲಿ 2 ತಿಂಗಳವರೆಗೂ ಭಕ್ತರಿಗೆ ನಿರಂತರ ಊಟದ ವ್ಯವಸ್ಥೆ
ಪ್ರಮುಖವಾಗಿ ಒಕ್ಕಲಿಗ, ಲಿಂಗಾಯಿತ-ವೀರಶೈವ ಸೇರಿದಂತೆ ಅನೇಕ ಸಮುದಾಯಗಳ ಉಪಜಾತಿಗಳನ್ನು ಏಕೀಕೃತಗೊಳಿಸಲಾಗಿಲ್ಲ. ಉಪಜಾತಿಗಳನ್ನು ಬೇರೆ ಬೇರೆಯಾಗಿ ಪರಿಗಣಿಸುವುದರಿಂದ ಪ್ರಮುಖ ಜಾತಿಗಳ ಜನಸಂಖ್ಯೆಯಲ್ಲಿ ಕಡಿಮೆ ಲೆಕ್ಕಾಚಾರಗಳಾಗಿವೆ ಎಂಬ ಆರೋಪವಿದೆ. ಇತ್ತೀಚೆಗೆ ಒಕ್ಕಲಿಗ ಸಮುದಾಯದಿಂದ ನೀಡಲಾದ ಭಿನ್ನವತ್ತಳೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಚಲುವರಾಯಸ್ವಾಮಿ ಸೇರಿದಂತೆ ಅನೇಕ ಪ್ರಮುಖರು ಸಹಿ ಹಾಕಿದ್ದರು.
ಲಿಂಗಾಯಿತ ಸಮುದಾಯದಿಂದ ನೀಡಲಾದ ಮನವಿ ಸಚಿವರಾದ ಎಂ.ಬಿ.ಪಾಟೀಲ್ ಸೇರಿದಂತೆ ಅನೇಕರು ಸಹಿ ಹಾಕಿದ್ದರು. ಉಪಜಾತಿಗಳನ್ನು ಏಕೀಕೃತವಾಗಿ ಪರಿಗಣಿಸಿ ವರದಿ ನೀಡಬೇಕು ಎಂದು ಮನವಿಗಳಲ್ಲಿ ಒತ್ತಾಯಿಸಲಾಗಿತ್ತು.ಕೆಲ ಸಮುದಾಯಗಳ ವಿರೋಧದ ನಡುವೆಯೂ ವರದಿಯ ಸಲ್ಲಿಕೆಗೆ ತಯಾರಿ ನಡೆದಿದೆ. ಆಯೋಗದ ಅಧ್ಯಕ್ಷರು ವರದಿ ಸಲ್ಲಿಸಿದರೆ ಅದನ್ನು ಸ್ವೀಕರಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲ ಸಚಿವರು ಹೇಳಿದ್ದಾರೆ.
ಹೀಗಾಗಿ ಬಹುದಿನಗಳಿಂದ ನೆನಗುದಿಗೆ ಬಿದ್ದಿರುವ ಸಮೀಕ್ಷಾ ವರದಿಗೆ ಇದೇ ತಿಂಗಳಲ್ಲಿ ತಾಕೀಕ ಅಂತ್ಯ ದೊರೆಯುವ ಸಾಧ್ಯತೆ ಇದೆ. ಒಂದು ವೇಳೆ ವರದಿ ಸ್ವೀಕಾರವಾದರೆ ಅದನ್ನು ಫೆಬ್ರವರಿ 12ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.