Tuesday, October 8, 2024
Homeರಾಜಕೀಯ | Politicsವಿಪಕ್ಷಗಳಿಗೆ ಬಿಸಿತುಪ್ಪವಾದ ಜಾತಿ ಜನಗಣತಿ ವರದಿ

ವಿಪಕ್ಷಗಳಿಗೆ ಬಿಸಿತುಪ್ಪವಾದ ಜಾತಿ ಜನಗಣತಿ ವರದಿ

Caste Census Report Trouble for the opposition

ಬೆಂಗಳೂರು, ಅ.8- ಜಾತಿ ಜನಗಣತಿ ವರದಿಯನ್ನು ಶೀತಲೀಕರಣದಲ್ಲಿಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಟೀಕೆ ಮಾಡಿದರು. ಈಗ ವರದಿಯ ಕುರಿತು ಚರ್ಚಿಸಲು ಮುಂದಾಗುತ್ತಿದ್ದಂತೆ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗುತ್ತಿದ್ದು, ಗದ್ದಲ ಎಬ್ಬಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹೆಚ್ಚಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಅದರ ಆದಾರದ ಮೇಲೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಅದಕ್ಕಾಗಿ ಸಂಪುಟದಲ್ಲಿ ವರದಿಯನ್ನು ಚರ್ಚಿಸಲು ನಿರ್ಧರಿಸಲಾಗಿದೆ. ಇದೇ ತಿಂಗಳ 18ರಂದು ನಡೆಯಲಿರುವ ಸಭೆಯಲ್ಲಿ ವರದಿ ಚರ್ಚೆಯಾಗಲಿದೆ ಎಂದು ಹೇಳಿದರು.

ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯ ಬೆಂಬಲ ನೀಡದಿರುವುದು ಪ್ರಶ್ನೆಯಲ್ಲ. ವಸ್ತುಸ್ಥಿತಿ ಏನು ಎಂಬುದು ಮುಖ್ಯ. ರಾಷ್ಟ್ರ ಮಟ್ಟದಲ್ಲಿ ಗಣತಿ ಮಾಡುವಾಗಲೂ ಈ ರೀತಿಯ ಚರ್ಚೆಗಳು ನಡೆಯಲಿವೆಯೇ ಎಂದು ಪ್ರಶ್ನಿಸಿದರು. 2028ರ ಲೋಕಸಭೆ ಚುನಾವಣೆಗೆ ರಾಷ್ಟ್ರ ಮಟ್ಟದಲ್ಲಿ ನಡೆಯುವ ಗಣತಿ ಪರಿಗಣಿಸಲ್ಪಡುತ್ತದೆ. ಆಗಲೂ ಇದೇ ರೀತಿಯ ವಿರೋಧ ವ್ಯಕ್ತವಾಗುತ್ತವೆಯೇ ಎಂದ ಅವರು, ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗಿರುವ ಸಮೀಕ್ಷೆಯೂ ಅಧಿಕೃತವಾಗಿದೆ.

ಅದು ಯಾರೋ ನಾಲ್ಕು ಜನ ಸೇರಿ ಮಾಡಿದ ವರದಿಯಲ್ಲ. ಸರ್ಕಾರವೇ ಕೈಗೊಂಡ ಕ್ರಮ. 10 ವರ್ಷಗಳ ಬಳಿಕ ಜನಸಂಖ್ಯೆಯಲ್ಲಿ ಒಂದಿಷ್ಟು ಏರುಪೇರುಗಳಾಗಿರುತ್ತವೆ. ಪ್ರಸ್ತುತ ಅದನ್ನು ಪರಿಗಣಿಸಲು ಯಾವ ಮಾನದಂಡ ಅನುಸರಿಸಬೇಕು ಎಂಬುದನ್ನು ವಿಶ್ಲೇಷಿಸಲಾಗುವುದು. ವರದಿಯ ಬಗ್ಗೆ ಅಧ್ಯಯನ ನಡೆಸಲು ಸಂಪುಟ ಉಪಸಮಿತಿ ರಚಿಸಬೇಕೆ ಅಥವಾ ವಿಧಾನಮಂಡಲದಲ್ಲಿ ಮಂಡನೆ ಮಾಡಬೇಕೇ ಎಂದು ಚರ್ಚಿಸಲಾಗುವುದು ಎಂದರು.

ಜಮ್ಮು-ಕಾಶ್ಮೀರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿಸಿದಂತೆ ಫಲಿತಾಂಶ ಬಂದಿದೆ. ಮುಂದೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಬಿಜೆಪಿ ದೇಶದಲ್ಲಿ ಹಂತಹಂತವಾಗಿ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಜನರ ಬಡತನ ನಿರ್ಮೂಲನೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಕಾಂಗ್ರೆಸ್ ಪಕ್ಷ ಈ ವಿಷಯದಲ್ಲಿ ರಾಜಕೀಯ ಲಾಭ-ನಷ್ಟಗಳನ್ನು ಯೋಚಿಸುವುದಿಲ್ಲ. ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಆದರೆ, ಜನರ ಒಲವು ಕಾಂಗ್ರೆಸ್​ನಲ್ಲಿ ಗ್ಯಾರಂಟಿ ಹಾಗೂ ಇತರ ಯೋಜನೆಗಳ ಮೇಲಿದೆ ಎಂದು ಚುನಾವಣೆಯ ಫಲಿತಾಂಶ ದೃಢಪಡಿಸುತ್ತಿದೆ ಎಂದರು.

ಕರ್ನಾಟಕದಲ್ಲಿ ಪಂಚಖಾತ್ರಿ ಯೋಜನೆಗಳನ್ನು ಜಾರಿಗೆ ತಂದು ಬಡವರ ಏಳಿಗೆಗೆ ಕ್ರಮ ಕೈಗೊಳ್ಳುವಾಗ, ಪ್ರಧಾನಿ ಸೇರಿ ಎಲ್ಲರೂ ಟೀಕೆ ಮಾಡಿದ್ದರು. ಈಗ ಅವರಿಗೆ ವಾಸ್ತವ ಅರ್ಥವಾದಂತಿದೆ ಎಂದರು. ನಾನು ಮತ್ತು ಸತೀಶ್ ಜಾರಕಿಹೊಳಿ ಕುಳಿತು ಎರಡು ಲೋಟ ಕಾಫಿ ಕುಡಿದು, ಚರ್ಚೆ ಮಾಡಿ ಮುಖ್ಯಮಂತ್ರಿ ಬದಲಾಯಿಸಬಹುದು ಎಂದಾದರೆ ಇದೇ ರೀತಿ ಬಹಳಷ್ಟು ಚರ್ಚೆಗಳು ನಡೆಯುತ್ತವೆ ಎಂದು ತಿರುಗೇಟು ನೀಡಿದರು.

ಮುಖ್ಯಮಂತ್ರಿ ಬದಲಾವಣೆ ಸಾಧ್ಯವೇ ಇಲ್ಲ. ವಿರೋಧ ಪಕ್ಷಗಳ ಕನಸು ನನಸಾಗುವುದಿಲ್ಲ. ಸತೀಶ್ ಜಾರಕಿಹೊಳಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಭೇಟಿಯ ಬಗ್ಗೆ ಚರ್ಚೆಗಳಾಗಬೇಕು ಎಂದು ಎಂದು ಹಾಸ್ಯ ಚಟಾಕಿ ಹಾರಿಸಿದರು.

ಬಿಟ್‍ಕಾಯಿನ್ ಹಗರಣದಲ್ಲಿ ಪೂಜಾರ್ ಎಂಬ ವ್ಯಕ್ತಿ ತಲೆಮರೆಸಿಕೊಂಡಿದ್ದರು. ಸುಪ್ರೀಂಕೋರ್ಟ್‍ವರೆಗೂ ಹೋಗಿದ್ದರೂ ಅಲ್ಲಿ ಅವರ ಪರ ವಾದ ತೀರ್ಪು ಬಾರದ ಹಿನ್ನೆಲೆಯಲ್ಲಿ ನಿನ್ನೆ ಬಂದು ಪೋಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿಸಿದರು.ಕೋವಿಡ್ ಸೇರಿದಂತೆ ಎಲ್ಲಾ ಹಗರಣಗಳ ತನಿಖೆ ಮುಂದುವರೆದಿದೆ ಎಂದು ಹೇಳಿದರು.

RELATED ARTICLES

Latest News