ತಮಿಳುನಾಡಿಗೆ ಸದ್ಯಕ್ಕೆ ನೀರು ಬಿಡಲು ಸಾಧ್ಯವಿಲ್ಲ, ಕರ್ನಾಟಕ ಸ್ಪಷ್ಟನೆ

ನವದೆಹಲಿ, ಜೂ.25-ಬರ ಪರಿಸ್ಥಿತಿಯೊಂದಿಗೆ ಮುಂಗಾರು ಮಳೆ ವಿಳಂಬದಿಂದ ತೀವ್ರ ಜಲಸಂಕಷ್ಟ ಎದುರಾಗಿರುವ ಸಂದರ್ಭದಲ್ಲೇ ದೆಹಲಿಯಲ್ಲಿಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಗೆ ರಾಜ್ಯಸರ್ಕಾರ ಕರ್ನಾಟಕದಲ್ಲಿನ ನೀರಿನ ತೀವ್ರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟು ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂಬ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದೆ.

ಸಿಡಬ್ಲ್ಯುಎಂಎ ಅಧ್ಯಕ್ಷ ಮಸೂದ್ ಹುಸೇನ್ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಪ್ರತಿನಿಧಿಗಳು ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

ಕರ್ನಾಟಕದಲ್ಲಿ ಉತ್ತಮ ಮುಂಗಾರು ಮಳೆಯಾದರೆ ಜೂನ್ ತಿಂಗಳಲ್ಲಿ ತಮಿಳುನಾಡಿಗೆ 9.19 ಟಿಎಂಸಿ ಅಡಿಗಳಷ್ಟು ನೀರು ಹರಿಸಬೇಕು ಎಂದು ಈ ಹಿಂದಿನ ಸಭೆಯಲ್ಲಿ ಪ್ರಾಧಿಕಾರವು ಕರ್ನಾಟಕಕ್ಕೆ ತಿಳಿಸಿತ್ತು.

ಆದರೆ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಕೆಆರ್‍ಎಸ್ ಸೇರಿದಂತೆ ರಾಜ್ಯದ ಬಹುತೇಕ ಡ್ಯಾಂಗಳು ಬರಿದಾಗಿವೆ. ಕುಡಿಯುವ ನೀರಿಗೆ ತತ್ವಾರ ಉಂಟಾಗಿರುವ ಈ ಸನ್ನಿವೇಶದಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ, ಉತ್ತಮ ಮಳೆಯಾದರೆ ಮಾತ್ರ ತಮಿಳುನಾಡಿಗೆ ನೀರು ಬಿಡಲು ಸಾಧ್ಯ ಎಂದು ಕರ್ನಾಟಕ ಸ್ಪಷ್ಟ ಮಾತುಗಳಲ್ಲಿ ಹೇಳಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಆದರೆ ಕರ್ನಾಟಕದ ಈ ವಾದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತು. ತಮಿಳುನಾಡಿನಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ಜಲಸಂಕಷ್ಟ ಎದುರಾಗಿದೆ. ನೀರಿಗೆ ಹಾಹಾಕಾರ ಉಂಟಾಗಿದೆ. ನೀರಿಲ್ಲದೆ ಬೆಳೆಗಳು ಒಣಗಿ ಭಾರೀ ಹಾನಿ ಸಂಭವಿಸಿದೆ.

ಈ ಎಲ್ಲಾ ಕಾರಣಗಳಿಂದ ಈಗಾಗಲೇ ಪ್ರಾಧಿಕಾರ ನೀಡಿರುವ ಸಲಹೆಯಂತೆ ಜೂನ್ ತಿಂಗಳ ಪಾಲಿನ ತನ್ನ ನೀರನ್ನು ಹರಿಸಬೇಕೆಂದು ಒತ್ತಾಯಿಸಿತು. ಈ ಸಂದರ್ಭದಲ್ಲಿ ಕರ್ನಾಟಕದಲ್ಲೂ ಇದೇ ಪರಿಸ್ಥಿತಿ ಉದ್ಭವಿಸಿದೆ ಎಂದು ರಾಜ್ಯದ ಪ್ರತಿನಿಧಿಗಳು ಪ್ರಾಧಿಕಾರಕ್ಕೆ ಮನವಿ ಮಾಡಿದಾಗ ತಮಿಳುನಾಡು ಮತ್ತು ರಾಜ್ಯದ ಪ್ರತಿನಿಧಿಗಳ ನಡುವೆ ವಾದ-ವಾಗ್ವಾದ ನಡೆಯಿತು ಎಂದು ಮೂಲಗಳು ಹೇಳಿವೆ.

ಕೇರಳ ಮತ್ತು ಪುದುಚೇರಿ ರಾಜ್ಯಗಳ ಪ್ರತಿನಿಧಿಗಳೂ ಸಹ ತಮ್ಮ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಉದ್ಭವಿಸಿರುವ ನೀರಿನ ಗಂಭೀರ ಸಮಸ್ಯೆ ಬಗ್ಗೆ ಪ್ರಾಧಿಕಾರದ ಅಧ್ಯಕ್ಷರಿಗೆ ಮನವಿ ಮಾಡಿಕೊಟ್ಟರು.

ಈ ಹಿಂದೆ ನಡೆದ ಪ್ರಾಧಿಕಾರ ಸಭೆಯಲ್ಲಿ ಅಧ್ಯಕ್ಷ ಮಸೂದ್ ಹುಸೇನ್ ಉತ್ತಮ ಮಳೆಯಾದರೆ ಕರ್ನಾಟಕದಿಂದ ತಮಿಳುನಾಡಿಗೆ ಜೂನ್ ತಿಂಗಳ 9.19 ಟಿಎಂಸಿ ಅಡಿಗಳಷ್ಟು ನೀರು ಹರಿಸಬೇಕು. ಇದು ಮುಂಗಾರು ಮಳೆ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದ್ದರು.

ಇದರಿಂದ ಕರ್ನಾಟಕ ರಾಜ್ಯಕ್ಕೆ ನಿರಾಳವಾಗಿತ್ತು. ಆದರೆ ಮುಂಗಾರು ಮಳೆ ವಿಳಂಬವಾಗಿ ಕೆಆರ್‍ಎಸ್ ಸೇರಿ ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಗಂಭೀರವಾಗಿ ಕುಸಿದಿರುವುದರಿಂದ ಸದ್ಯಕ್ಕೆ ತಮಿಳುನಾಡಿಗೆ ನೀರು ಬಿಡದಿರುವ ಪರಿಸ್ಥಿತಿ ಉದ್ಭವಿಸಿದ್ದು, ಈ ಎಲ್ಲಾ ಅಂಶಗಳನ್ನು ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ.

Sri Raghav

Admin