Thursday, September 19, 2024
Homeರಾಷ್ಟ್ರೀಯ | Nationalಸಂದೀಪ್‌ ಘೋಷ್‌ ನಿವಾಸ ಸೇರಿ 14 ಕಡೆ ಮೇಲೆ ಸಿಬಿಐ ದಾಳಿ

ಸಂದೀಪ್‌ ಘೋಷ್‌ ನಿವಾಸ ಸೇರಿ 14 ಕಡೆ ಮೇಲೆ ಸಿಬಿಐ ದಾಳಿ

CBI raid at RG Kar Medical College ex-principal Sandip Ghosh's residence

ಕೋಲ್ಕತ್ತಾ,ಆ.25- ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ನಿವಾಸದ ಮೇಲೆ ಕೇಂದ್ರ ತನಿಖಾ ದಳ ಇಂದು ದಾಳಿ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಇತರ 14 ಸ್ಥಳಗಳಲ್ಲಿಯೂ ಸಿಬಿಐ ಶೋಧ ನಡೆಸಿದೆ.

ಆರ್‌.ಜಿ. ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿಧಿವಿಜ್ಞಾನ ಔಷಧ ತಜ್ಞ ಡಾ.ದೇಬಶಿಶ್‌ ಸೋಮ್‌ ಅವರ ನಿವಾಸದಲ್ಲೂ ಸಿಬಿಐಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.

ಪಶ್ಚಿಮಬಂಗಾಳ ಸರಕಾರದ ಆದೇಶದಂತೆ ಆಸ್ಪತ್ರೆಯ ಅವ್ಯವಹಾರದ ತನಿಖೆ ಕೈಗೊಂಡಿದ್ದ ವಿಶೇಷ ತನಿಖಾ ದಳದ (ಎಸ್‌‍ಐಟಿ) ಪೊಲೀಸರು, ಕೋರ್ಟ್‌ ಸೂಚನೆಯಂತೆ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಿನ್ನೆ ಸಿಬಿಐಗೆ ಹಸ್ತಾಂತರಿಸಿದ್ದರು. ಸೆ. 17ರೊಳಗೆ ಮಧ್ಯಂತರ ತನಿಖಾ ವರದಿ ಸಲ್ಲಿಸುವಂತೆ ಸಿಬಿಐಗೆ ಕೋಲ್ಕತ್ತಾ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಆರ್‌ಜಿಕರ್‌ ಕಾಲೇಜಿನ ಮಾಜಿ ಉಪಅಧೀಕ್ಷಕ ಅಖ್ತರ್‌ ಅಲಿ ಅವರು ಡಾ. ಸಂದೀಪ್‌ ವಿರುದ್ಧ ಇತ್ತೀಚೆಗೆ ಗಂಭೀರ ಆರೋಪ ಮಾಡಿದ್ದರು. ಸಂದೀಪ್‌ ಆಸ್ಪತ್ರೆಯಲ್ಲಿ ಔಷಧಗಳು ಸೇರಿದಂತೆ ಶವಗಳ ಮಾರಾಟದಲ್ಲಿ ನಿರತರಾಗಿದ್ದರು. ಘೋಷ್‌ ನೇತೃತ್ವದಲ್ಲಿ ಅವ್ಯಾಹತ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದರು.

ಆರ್‌ಜಿಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಉಪಅಧೀಕ್ಷಕ ಅಖ್ತರ್‌ ಅಲಿ ಅವರು ಮೂರು ದಿನಗಳ ಹಿಂದೆ ಭ್ರಷ್ಟಾಚಾರ ಮತ್ತು ಅಕ್ರಮಗಳ ವಿರುದ್ಧ ದೂರು ದಾಖಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ಮಧ್ಯೆ ಕೋಲ್ಕತಾ ಪೊಲೀಸರು ಸರ್ಕಾರಿ ಸ್ವಾಮ್ಯದ ಆರ್‌.ಜಿ. ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಬಳಿ ನಿಷೇಧಾಜ್ಞೆಯನ್ನು ಆ.31ರವರೆಗೆ ವಿಸ್ತರಿಸಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಹೈಕೋರ್ಟ್‌ ಈಗಾಗಲೇ ಸಿಬಿಐಗೆ ಹಸ್ತಾಂತರಿಸಿದೆ. ಜತೆಗೆ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಅಧಿಕಾರಾವಧಿಯಲ್ಲಿ ನಡೆದ ಹಣಕಾಸು ಅಕ್ರಮಗಳ ತನಿಖೆಯನ್ನೂ ಸಿಬಿಐಗೆ ವರ್ಗಾಯಿಸಿದೆ. ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಮಂಪರು ಪರೀಕ್ಷೆ ಶುರು:
ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಕೇಸ್‌‍ನ ಮುಖ್ಯ ಆರೋಪಿ ಸಂಜಯ್‌ ರಾಯ್‌ ಹೊರತುಪಡಿಸಿ ಮಾಜಿ ಪ್ರಾಂಶುಪಾಲ ಡಾ.ಸಂದೀಪ್‌ ಘೋಷ್‌ ಸೇರಿದಂತೆ ಐವರಿಗೆ ಶನಿವಾರ ಮಂಪರು (ಪಾಲಿಗ್ರಾಫ್‌) ಪರೀಕ್ಷೆ ನಡೆಸಲಾಯಿತು.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳ ಸಮುಖದಲ್ಲಿ ದಿಲ್ಲಿಯ (ಸಿಎಫ್‌ಎಸ್‌‍ಎಲ್‌) ವಿಧಿ ವಿಜ್ಞಾನ ಪ್ರಯೋಗಾಲಯದ ಪರಿಣತರು ಐದು ಮಂದಿ ಆರೋಪಿಗಳನ್ನು ಸುಳ್ಳು ಪತ್ತೆ ಪರೀಕ್ಷೆಗೊಳಪಡಿಸಿದರು.

ಜೈಲಿನಲ್ಲಿರುವ ಆರೋಪಿ ಸಂಜಯ್‌ರಾಯ್‌ಗೆ ಕಾರಾಗೃಹದಲ್ಲೇ ಪರೀಕ್ಷೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ಮಾಜಿ ಪ್ರಾಂಶುಪಾಲ ಡಾ.ಘೋಷ್‌, ಮೃತ ವಿದ್ಯಾರ್ಥಿನಿ ಜತೆ ಆ.9ರ ರಾತ್ರಿ ಕೆಲಸ ಮಾಡುತ್ತಿದ್ದ ಇಬ್ಬರು ಪಿಜಿ ವಿದ್ಯಾರ್ಥಿಗಳು, ಇಬ್ಬರು ಟ್ರೈನಿ ವೈದ್ಯರಿಗೆ ಕೋಲ್ಕತಾದ ಸಿಬಿಐ ಕಚೇರಿಯಲ್ಲಿ ಮಂಪರು ಪರೀಕ್ಷೆ ನಡೆಸಲಾಗಿದೆ. ಸುಮಾರು 25 ಪ್ರಶ್ನೆಗಳನ್ನು ಮುಂದಿಟ್ಟು ಘೋಷ್‌ ಅವರನ್ನು ಪರೀಕ್ಷೆಗೊಳಪಡಿಸಲಾಗಿದೆ.

ಆರೋಪಿ ದೃಶ್ಯ ವೈರಲ್:
ವೈದ್ಯ ವಿದ್ಯಾರ್ಥಿನಿಯನ್ನು ಅಮಾನುಷವಾಗಿ ಕೊಂದ ಆರೋಪಿ ಸಂಜಯ್‌ ರಾಯ್‌ ಆ.9 ರಾತ್ರಿ ಬ್ಲ್ಯೂಟೂಥ್‌ ಧರಿಸಿಕೊಂಡು ಆಸ್ಪತ್ರೆ ಒಳಗೆ ಹೋಗುತ್ತಿರುವ, ಹೊರ ಬರುತ್ತಿರುವ ವಿಡಿಯೋಗಳು ಬಹಿರಂಗವಾಗಿವೆ. ಬೆಳಗಿನಜಾವ 4 ಗಂಟೆಗೆ ಒಳಗೆ ಹೋದ ಆರೋಪಿ, 4.32ರ ಸಮಯದಲ್ಲಿ ಹೊರ ಬಂದಿರುವುದು ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಅಖ್ತರ್‌ ಅಲಿ ಹೇಳಿದ್ದೇನು?:
ಅಖ್ತರ್‌ ಅಲಿ ಅವರು ಸಂದೀಪ್‌ ಘೋಷ್‌ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಂದೀಪ್‌ ಘೋಷ್‌ ವಾರಸುದಾರರಿಲ್ಲದ ಶವಗಳನ್ನು ಅಕ್ರಮವಾಗಿ ಬಳಸಿದ್ದಾರೆ, ಬಯೋಮೆಡಿಕಲ್‌ ತ್ಯಾಜ್ಯವನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ದೂರಿದ್ದಾರೆ. ಅಷ್ಟೇ ಅಲ್ಲದೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು 5ರಿಂದ 8 ಲಕ್ಷ ರೂ.ಗಳವರೆಗೆ ಪಾವತಿಸುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿದ್ದಾರೆ. 2023ರಲ್ಲೇ ನಾನು ಈ ಬಗ್ಗೆ ದೂರು ನೀಡಿದ್ದೆ. ಆದರೆ ಕ್ರಮ ಕೈಗೊಂಡಿರಲಿಲ್ಲ ಎಂದು ಅಖ್ತರ್‌ ಅಲಿ ಹೇಳಿದ್ದಾರೆ.

ಆಗಸ್ಟ್ 9ರಂದು 31 ವರ್ಷದ ವಿದ್ಯಾರ್ಥಿನಿಯ ಶವ ಆಸ್ಪತ್ರೆಯ ಸೆಮಿನಾರ್‌ ಹಾಲ್‌ನಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ಆ.10ರಂದು ಡಾ.ಸಂದೀಪ್‌ ಘೋಷ್‌ನನ್ನು ಬಂಧಿಸಲಾಗಿದೆ.

RELATED ARTICLES

Latest News