ಬೆಂಗಳೂರು, ಫೆ.18- ಕಲ್ಯಾಣಿ ಮತ್ತು ಶ್ರೀದೇವಿ ಎಂಬ ಹೆಸರಿನ ಮಟ್ಕಾ ಜೂಜಾಟ ಆಡುತ್ತಿದ್ದ ಎರಡು ಕಡೆ ಸಿಸಿಬಿ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿ 15,600ರೂ. ನಗದು, ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ನೀಲಸಂದ್ರದ ಸಾರ್ವಜನಿಕ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟುಕೊಂಡು 10ರೂ.ಗೆ 80ರೂ.ಗಳನ್ನು ಕೊಡುವುದಾಗಿ ಹೇಳಿ ಕಲ್ಯಾಣಿ ಮತ್ತು ಶ್ರೀದೇವಿ ಮಟ್ಕಾ ಜೂಜಾಟವನ್ನು ಆಡಿಸುತ್ತಿದ್ದ.
ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ಮಾಡಿ ಒಬ್ಬನನ್ನು ಬಂಸಿ 10,500ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮುನೇಗೌಡ ರಸ್ತೆ, ಕೆಎಚ್‍ಬಿ ಕ್ವಾಟ್ರರ್ಸ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟುಕೊಂಡು ಕಲ್ಯಾಣಿ ಮತ್ತು ಶ್ರೀದೇವಿ ಎಂಬ ಹೆಸರಿನ ಮಟ್ಕಾ ಜೂಜಾಟವನ್ನು ನಡೆಸುತ್ತಿದ್ದ.
ಈ ಬಗ್ಗೆ ಸುಳಿವು ಪಡೆದ ಬಾಣಸವಾಡಿ ಠಾಣೆ ಪೊಲೀಸರು ಅಲ್ಲಿಗೆ ತೆರಳಿ ದಾಳಿ ಮಾಡಿ ಒಬ್ಬನನ್ನು ಬಂಧಿಸಿ 5100ರೂ. ನಗದು ಮತ್ತು ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.