Friday, May 3, 2024
Homeರಾಜ್ಯಕೇಂದ್ರದಿಂದ 40 ಸಾವಿರ ಕೋಟಿ ಕಡಿಮೆಯಾದ ಜಿಎಸ್‍ಟಿ ಪರಿಹಾರ : ಸಚಿವ ಕೃಷ್ಣಭೈರೇಗೌಡ

ಕೇಂದ್ರದಿಂದ 40 ಸಾವಿರ ಕೋಟಿ ಕಡಿಮೆಯಾದ ಜಿಎಸ್‍ಟಿ ಪರಿಹಾರ : ಸಚಿವ ಕೃಷ್ಣಭೈರೇಗೌಡ

ಬೆಳಗಾವಿ, ಡಿ.7- ಕಳೆದ ಐದು ವರ್ಷಗಳಿಂದ ಕೇಂದ್ರ ಸರ್ಕಾರದ ಪುರಷ್ಕøತ ಯೋಜನೆ ಹಾಗೂ ಜಿಎಸ್‍ಟಿ ಪರಿಹಾರವಾಗಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾಗಿದ್ದ 40 ಸಾವಿರ ಕೋಟಿ ರೂ. ಅನುದಾನ ಕಡಿಮೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ವಿಧಾನ ಪರಿಷತ್ತಿನಲ್ಲಿ ಹೇಳಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಉತ್ತರಿಸಿದ ಕಂದಾಯ ಸಚಿವರು, ನಮ್ಮ ರಾಜ್ಯದ ಬಜೆಟ್ ಗಾತ್ರ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ನಾವು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ತೆರಿಗೆ ಪಾಲು ಹೆಚ್ಚಳವಾಗಿದೆ. ಆದರೆ, ಬಜೆಟ್ ಗಾತ್ರಕ್ಕೆ ಹೋಲಿಕೆ ಮಾಡಿದರೆ, ಕೇಂದ್ರದಿಂದ 5 ವರ್ಷಗಳಲ್ಲಿ ಸು.40 ಸಾವಿರ ಕೋಟಿ ರೂ. ಅನುದಾನ ಕಡಿತವಾಗಿದೆ.

ಇದರಿಂದ ನಮ್ಮ ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚಿನ ಹೊಡೆತ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಪುರಸ್ಕøತ ಯೋಜನೆಯಿಂದ 20 ಸಾವಿರ ಕೋಟಿ ರೂ. ಹಾಗೂ ಜಿಎಸ್‍ಟಿ ಪರಿಹಾರವಾಗಿ 20 ಸಾವಿರ ಕೋಟಿ ರೂ. ರಾಜ್ಯಕ್ಕೆ ಬರಬೇಕು. ವರ್ಷದಿಂದ ವರ್ಷಕ್ಕೆ ಕೇಂದ್ರದ ತೆರಿಗೆ ಪಾಲು ಕಡಿಮೆಯಾಗುತ್ತಿದೆಯೇ ಹೊರತು ಹೆಚ್ಚಳವಾಗುತ್ತಿಲ್ಲ. ನಮ್ಮ ಪಾಲು ಮಾತ್ರ ಹೆಚ್ಚಾಗುತ್ತಲೇ ಇದೆ.

ರಜಪೂತ ಕರ್ಣಿ ಸೇನೆ ಅಧ್ಯಕ್ಷರ ಹತ್ಯೆ : ಇಬ್ಬರು ಪೊಲೀಸರ ಅಮಾನತು

ಕೇಂದ್ರ ಸರ್ಕಾರ ನಮಗೆ ಆರ್ಥಿಕ ವರ್ಷದ ಅವಧಿಯೊಳಗೆ ನಮ್ಮ ಪಾಲಿನ ಹಣವನ್ನು ಕೊಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಹಾರಾಷ್ಟ್ರ ಹೊರತುಪಡಿಸಿ 2ಲಕ್ಷ 37 ಸಾವಿರ ಕೋಟಿ ರೂ. ಬಜೆಟ್ ಮಂಡಿಸಿದಾಗ ಕೇಂದ್ರ ಸರ್ಕಾರ 43,369 ಕೋಟಿ ರೂ. (ಶೇ.23.3) ಅನುದಾನ ನೀಡಿತ್ತು. ಪ್ರಸ್ತುತ 3 ಲಕ್ಷದ 25 ಸಾವಿರ ಕೋಟಿ ರೂ. ಬಜೆಟ್ ಮಂಡಿಸಲಾಗಿದ್ದು, ಕೇಂದ್ರದಿಂದ ನಮಗೆ ಸಿಗುವುದು 76 ಸಾವಿರ ಕೋಟಿ ರೂ.(ಶೇ.17) ಮಾತ್ರ. ನಮ್ಮ ಬಜೆಟ್ ಗಾತ್ರ ಹೆಚ್ಚುತ್ತಿದೆಯೇ ಹೊರತು, ಕೇಂದ್ರದ ಪಾಲು ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಬಜೆಟ್ ಗಾತ್ರಕ್ಕೆ ತಕ್ಕಂತೆ ಅನುದಾನ ನೀಡಬೇಕಲ್ಲವೇ? ಎಂದು ಅವರು ಪ್ರಶ್ನಿಸಿದರು.

14 ಮತ್ತು 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕೇಂದ್ರಕ್ಕೆ 5495 ಕೋಟಿ ರೂ. ವಿಶೇಷ ಅನುದಾನ ಹಾಗೂ 6 ಸಾವಿರ ಕೋಟಿ ಜಿಎಸ್‍ಟಿ ಪರಿಹಾರ ಸೇರಿದಂತೆ ರಾಜ್ಯಕ್ಕೆ 11,495 ಕೋಟಿ ಅನುದಾನ ಬರಬೇಕು. ಕಳೆದ ಆ.10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ಪತ್ರ ಬರೆದು ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದರು. ಆದರೂ ಹಣ ಬಿಡುಗಡೆ ಮಾಡಿಲ್ಲ. ಖಂಡಿತವಾಗಿಯೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜಿಎಸ್‍ಟಿ ಪರಿಹಾರವಾಗಿ 2339 ಕೋಟಿ ರೂ. ಹಾಗೂ ಕೇಂದ್ರ ಪುರಸ್ಕøತ ಯೋಜನೆಗೆ 1191 ಕೋಟಿ ರೂ. ಬಾಕಿ ಇದ್ದು, ಇದನ್ನು ಬಿಡುಗಡೆ ಮಾಡುವಂತೆ ಕೋರಿ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ. ನಮ್ಮ ಪ್ರಯತ್ನವನ್ನು ನಾವು ಮುಂದುವರೆಸಿದ್ದೇವೆ. ಕೇಂದ್ರ ಸರ್ಕಾರ ನಮಗೆ ಅನುದಾನವನ್ನು ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದರು.

ಒಂದು ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದಾಗ, ಶೇ.23 ರಷ್ಟು ಕೇಂದ್ರದ ಅನುದಾನ ದೊರೆಯುತ್ತಿತ್ತು. ಈಗ ಮೂರು ಲಕ್ಷ ಕೋಟಿ ರೂ. ಗೂ ಹೆಚ್ಚು ಬಜೆಟ್ ಮಂಡಿಸಿರುವಾಗ 76 ಸಾವಿರ ಕೋಟಿ ರೂ. ಅನುದಾನ ದೊರೆಯಬೇಕು. ದುರ್ದೈವವೆಂದರೆ, ಬಜೆಟ್ ಗಾತ್ರವನ್ನೇ ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ನಮ್ಮ ಸಂಪತ್ತಿನ ಮೇಲೆ ನಾವು ಅವಲಂಭಿತವಾಗಿರುವುದರಿಂದ ನಮಗೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತದೆ. ಕೇಂದ್ರ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಅವರು ಮನವಿ ಮಾಡಿದರು.

ಇದಕ್ಕೂ ಮುನ್ನ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ವಿಷಯ ಪ್ರಸ್ತಾಪಿಸಿ, ಮಹಾರಾಷ್ಟ್ರ ಹೊರತುಪಡಿಸಿದರೆ, ಅತಿ ಹೆಚ್ಚು ತೆರಿಗೆ ಕಟ್ಟುವವರು ನಾವು. ಆದರೆ, ನಮ್ಮ ಪಾಲಿನ ತೆರಿಗೆ ಹಣವನ್ನು ಕಟ್ಟಿಸಿಕೊಂಡು ನಮಗೆ ಸೂಕ್ತ ಅನುದಾನ ನೀಡುತ್ತಿಲ್ಲ ಎಂದರೆ ಹೇಗೆ? ನಿನ್ನನ್ನು ಮುದ್ದಾಗಿ ಸಾಕುತ್ತೇನೆ. ನಾನು ಹೇಳಿದ ಹಾಗೆ ಕೇಳು ಎಂದು ಗಿಳಿಗೆ ಹೇಳಿದಂತಾಗಿದೆ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು ಛೇಡಿಸಿದರು.

ರಜಪೂತ ಕರ್ಣಿ ಸೇನೆ ಅಧ್ಯಕ್ಷರ ಹತ್ಯೆ : ಇಬ್ಬರು ಪೊಲೀಸರ ಅಮಾನತು

ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಸದಸ್ಯರಾದ ಕೋಟಶ್ರೀನಿವಾಸ ಪೂಜಾರಿ, ವೈ.ಎ.ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಕೇಂದ್ರದಿಂದ ಎಷ್ಟು ಅನುದಾನ ಬಂದಿದೆ ಎಂಬುದರ ಬಗ್ಗೆ ಚರ್ಚಿಸಲು ನಾವು ಕೂಡ ಸಿದ್ಧರಿದ್ದೇವೆ. ಕೇಂದ್ರ ಅನುದಾನ ನೀಡಿದರೂ ಅದನ್ನು ರಾಜ್ಯ ಸರಿಯಾಗಿ ಸದ್ಬಳಕೆ ಮಾಡಿಕೊಂಡಿಲ್ಲ. ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನಚಕಮಕಿ ನಡೆಯಿತು. ಸಭಾಪತಿ ಬಸವರಾಜ ಹೊರಟ್ಟಿ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದಾಗ ಮಾತಿನಚಕಮಕಿಗೆ ತೆರೆಬಿದ್ದಿತು.

RELATED ARTICLES

Latest News