ಬೆಂಗಳೂರು,ಜು.6- ಚುನಾವಣೆಯ ಕಾರಣಕ್ಕಾಗಿ ಭಾರತ್ ಅಕ್ಕಿ ಯೋಜನೆಯನ್ನು ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿತ್ತು. ಮತದಾನದ ಬಳಿಕ ಆ ಯೋಜನೆಯನ್ನು ಸ್ಥಗಿತಗೊಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.
ಬಾಬು ಜಗಜೀವನ್‌ರಾಂ ಅವರ ಪುಣ್ಯಸರಣೆಯ ಅಂಗವಾಗಿ ವಿಧಾನಸೌಧದ ಮುಂಭಾಗ ಇರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ್ ಅಕ್ಕಿ ರಾಜಕೀಯ ಕಾರಣಕ್ಕಾಗಿ ಜಾರಿಗೊಳಿಸಿದ್ದ ಯೋಜನೆ. ಚುನಾವಣೆ ಬಳಿಕ ಅದು ಸ್ಥಗಿತಗೊಂಡಿದೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.
ನಮ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ. ಇದು ರಾಜಕೀಯ ಹೊರತಾದ ಕಾರ್ಯಕ್ರಮ. ಕೇಂದ್ರಸರ್ಕಾರ ಬಡವರಿಗೆ ಅಕ್ಕಿ ಸಿಗಬಾರದು ಎಂಬ ಕಾರಣಕ್ಕೆ ಅನ್ನಭಾಗ್ಯಕ್ಕೆ ಅಕ್ಕಿ ನೀಡುತ್ತಿಲ್ಲ. ಆಹಾರ ದಾಸ್ತಾನು ಮಳಿಗೆಯಲ್ಲಿ ಸಾಕಷ್ಟು ಅಕ್ಕಿ ಇದ್ದರೂ ರಾಜ್ಯಕ್ಕೆ ಪೂರೈಸದೆ ನಮ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿ ಎಂಬ ಸಂಚು ನಡೆಸಿದೆ ಎಂದು ಆರೋಪಿಸಿದರು.
ಇದರ ಅರ್ಥ ಕೇಂದ್ರ ಸರ್ಕಾರ ದಲಿತರು, ಹಿಂದುಳಿದ ವರ್ಗದವರು ಎಲ್ಲಾ ಜಾತಿಯ ಬಡವರ ವಿರುದ್ಧವಾಗಿದೆ. ನಾವು ಹಣ ಕೊಡುತ್ತೇವೆ ಎಂದರೂ ಕೇಂದ್ರ ಸರ್ಕಾರ ಅಕ್ಕಿ ನೀಡಲಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ಅಕ್ಕಿಯ ಬದಲು ಹಣವನ್ನು ಫಲಾನುಭವಿಗಳಿಗೆ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ದೂರಿದರು.
ಬಾಬು ಜಗಜೀವನ್ ರಾಂ 1952 ರಿಂದ ಸುದೀರ್ಘವಾಗಿ 40 ವರ್ಷಕ್ಕೂ ಹೆಚ್ಚು ಕಾಲ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿದ್ದರು. ಇಂದಿರಾಗಾಂಧಿಯವರ ಸಂಪುಟದಲ್ಲಿ ಆಹಾರ ಮಂತ್ರಿಯಾಗಿದ್ದ ಬಾಬು ಜಗಜೀವನ ರಾಂ ಹೊಸ ತಳಿ, ರಸಗೊಬ್ಬರವನ್ನು ಪರಿಚಯಿಸಿ ಆಹಾರ ಉತ್ಪಾದನೆಯನ್ನು ಹೆಚ್ಚಿಸಿದರು ಎಂದರು.
ಅದಕ್ಕೂ ಮೊದಲು ನಾವು ವಿದೇಶಗಳ ಮುಂದೆ ಆಹಾರಕ್ಕಾಗಿ ಕೈ ಚಾಚಿ ಬೇಡಬೇಕಾದ ಪರಿಸ್ಥಿತಿ ಇತ್ತು. ಭಾರತ ಆಹಾರ ಸ್ವಾವಲಂಬನೆ ಸಾಧಿಸಲು ಬಾಬು ಜಗಜೀವನ ರಾಂ ಪ್ರಮುಖ ಕಾರಣಕರ್ತರಲ್ಲೊಬ್ಬರು.
ರಕ್ಷಣಾ ಮಂತ್ರಿಯಾಗಿಯೂ ಕೆಲಸ ಮಾಡಿದ್ದರು. ದಕ್ಷ ಆಡಳಿತಗಾರ, ಕಾರ್ಮಿಕ ಕಾನೂನುಗಳ ರಚನೆಗೆ ಕಾರಣಕರ್ತರಾಗಿದ್ದರು. ದಲಿತರು, ಬಡವರು, ಕಾರ್ಮಿಕರ ಪರವಾಗಿ ಹೋರಾಟ ಮಾಡುತ್ತಿದ್ದ ಅವರನ್ನು ಸರಿಸಿ, ಅವರು ತೋರಿದ ದಾರಿಯಲ್ಲಿ ನಡೆಯುವುದು ನಮ ಕರ್ತವ್ಯ ಎಂದರು.
ಈ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದಾಗ 100 ಕೋಟಿ ರೂ. ವೆಚ್ಚದಲ್ಲಿ ಬಾಬು ಜಗಜೀವನ ರಾಂ ಹೆಸರಿನ ಭವನ ನಿರ್ಮಿಸಿ ಅಲ್ಲಿ ವಿಜ್ಞಾನ, ಕೌಶಲ್ಯ ತರಬೇತಿ ನೀಡಲು ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ಇದೇ 13 ರಂದು ತಾವು ಅದನ್ನು ಉದ್ಘಾಟಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಕೆ.ಎಚ್.ಮಹದೇವಪ್ಪ, ಆರ್.ಬಿ.ತಿಮಾಪುರ್ ಮತ್ತಿತರರು ಉಪಸ್ಥಿತರಿದ್ದರು.