ಬೆಳಗಾವಿ, ಆ.17– ಸಿಎಂ ಸಿದ್ದರಾಮಯ್ಯ ವಿರುದ್ಧ ಪಿತೂರಿ ಪ್ರೇರಿತ ಅಜೆಂಡಾ ರೂಪಿಸಿ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಕೊಡಿಸುವಲ್ಲಿ ಕೇಂದ್ರ ಸರ್ಕಾರ ರಾಜಭವನವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿಕಾರಿದರು.
ನಗರದ ತಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪಿತೂರಿ ಭಾಗವಾಗಿ ಮಾಡಲಾದ ಕ್ರಮಗಳಿಗೆ ರಾಜೀನಾಮೆ ಕೊಡುವ ಪ್ರಮೇಯ ಸರಕಾರಕ್ಕೆ ಬರುವುದಿಲ್ಲ. ಅಂತಹ ಪಿತೂರಿ ರಾಜಕೀಯದ ವಿರುದ್ಧ ಹಾಗೂ ಕಾನೂನಾತಕವಾಗಿ ಮೆಟ್ಟಿ ನಿಲ್ಲುವ ಕ್ಷಮತೆ ಕಾಂಗ್ರೆಸ್ ಸರಕಾರ ಮತ್ತು ಪಕ್ಷಕ್ಕಿದೆ ಎಂದರು.
ಈಗಾಗಲೇ ನಿವೃತ್ತ ನ್ಯಾಯಾಧೀಶ ದೇಸಾಯಿ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ವರದಿ ಬರುವ ಮುಂಚೆ ರಾಜಭವನ ದುರುಪಯೋಗ ಮಾಡುತ್ತಿದ್ದಾರೆ. ಸಾಂವಿಧಾನಿಕ ಸ್ಥಾನದಲ್ಲಿರುವ ರಾಜ್ಯಪಾಲ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಇತರ ರಾಜ್ಯಗಳಲ್ಲಿ ಆಗಿರುವುದನ್ನು ಈಗಾಗಲೇ ಗಮನಿಸಬಹುದು.
ಬಿಜೆಪಿ ರಹಿತ ರಾಜ್ಯ ಸರಕಾರಗಳ ಮೇಲೆ ಇಡಿ, ಐಟಿ ಹಾಗೂ ರಾಜಭವನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ರಾಜೀನಾಮೆ ಕೊಡುವ ಪ್ರಮೇಯ, ಅವಶ್ಯಕತೆ ಬರುವುದಿಲ್ಲ ಎಂದರು.