Monday, September 16, 2024
Homeರಾಜ್ಯಕೇಂದ್ರ ಸಚಿವರ ವಿ.ಸೋಮಣ್ಣನವರ ಕಚೇರಿ ಹಿಂಪಡೆದ ರಾಜ್ಯ ಸರ್ಕಾರ, ಬಿಜೆಪಿ-ಜೆಡಿಎಸ್‌‍ ಶಾಸಕರ ಆಕ್ರೋಶ

ಕೇಂದ್ರ ಸಚಿವರ ವಿ.ಸೋಮಣ್ಣನವರ ಕಚೇರಿ ಹಿಂಪಡೆದ ರಾಜ್ಯ ಸರ್ಕಾರ, ಬಿಜೆಪಿ-ಜೆಡಿಎಸ್‌‍ ಶಾಸಕರ ಆಕ್ರೋಶ

ತುಮಕೂರು, ಆ.17- ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಕಚೇರಿ ಉಪಯೋಗಕ್ಕೆ ನಗರದ ರೈಲ್ವೆ ನಿಲ್ದಾಣ ಎದುರಿನ ಪರಿವೀಕ್ಷಣಾ ಕಟ್ಟಡ ನೀಡಿ, ಅನುಮೋದನೆ ಮಾಡಿದ್ದ ರಾಜ್ಯ ಕಾಂಗ್ರೆಸ್‌‍ ಸರ್ಕಾರ ಈಗ ಅನುಮೋದನೆ ಹಿಂಪಡೆದಿರುವ ಕ್ರಮವನ್ನು ಜಿಲ್ಲೆಯ ಎನ್‌ಡಿಎ ಮೈತ್ರಿ ಶಾಸಕರು ತೀವ್ರವಾಗಿ ಖಂಡಿಸಿದ್ದಾರೆ.

ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದ ಶಾಸಕರು, ಯಾವುದೇ ಕಾರಣಕ್ಕೂ ಸಚಿವ ವಿ.ಸೋಮಣ್ಣ ಅವರ ಕಚೇರಿಗೆ ನೀಡಿರುವ ಕಟ್ಟಡವನ್ನು ವಾಪಸ್‌‍ ನೀಡುವುದಿಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಜ್ಯೋತಿ ಗಣೇಶ್‌ ಮಾತನಾಡಿ, ನಗರದ ಪರಿವೀಕ್ಷಣಾ ಕಟ್ಟಡವನ್ನು ದುರಸ್ತಿಗೊಳಿಸಿ ತುಮಕೂರು ಲೋಕಸಭಾ ಸದಸ್ಯರೂ ಆದ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಕಚೇರಿ ಆರಂಭಿಸಲು ಅನುಮತಿ ನೀಡಿ ರಾಜ್ಯ ಸರ್ಕಾರ ಈ ತಿಂಗಳ 3ರಂದು ಅನುಮೋದನೆ ನೀಡಿತ್ತು. ಅಂದಿನಿಂದಲೇ ಸಚಿವರ ಕಚೇರಿ ಕೆಲಸ-ಕಾರ್ಯಗಳು ಇಲ್ಲಿ ಪ್ರಾರಂಭವಾಗಿವೆ. ಆದರೆ, ನಿನ್ನೆ ರಾಜ್ಯ ಸರ್ಕಾರ ಸಚಿವರ ಕಚೇರಿಗೆ ನೀಡಿದ್ದ ಕಟ್ಟಡದ ಅನುಮೋದನೆಯನ್ನು ಹಿಂಪಡೆದಿರುವುದು ಖಂಡನೀಯ ಎಂದರು.

ಸಾರ್ವಜನಿಕರ ಪರವಾದ ಕೆಲಸ-ಕಾರ್ಯಗಳಿಗೆ ಬಳಕೆಯಾಗುತ್ತಿರುವ ಸಚಿವರ ಈ ಕಚೇರಿ ಕಟ್ಟಡವನ್ನು ಹಿಂಪಡೆಯುವ ಪ್ರಯತ್ನದ ಮೂಲಕ ರಾಜ್ಯ ಸರ್ಕಾರ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ. ಈಗಾಗಲೇ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಈ ಕಚೇರಿಯಲ್ಲಿ ಇಲಾಖೆ ಕೆಲಸ, ಸಾರ್ವಜನಿಕರ ಕೆಲಸ-ಕಾರ್ಯಗಳು ಆರಂಭವಾಗಿದ್ದು, ಯಾವುದೇ ಕಾರಣಕ್ಕೂ ಕಚೇರಿಯನ್ನು ವಾಪಸ್‌‍ ನೀಡುವುದಿಲ್ಲ. ಸರ್ಕಾರ ಯಾವ ರೀತಿ ವಾಪಸ್‌‍ ಪಡೆಯುವುದೋ ನಾವು ನೋಡುತ್ತೇವೆ ಎಂದು ಶಾಸಕ ಜ್ಯೋತಿಗಣೇಶ್‌ ಸವಾಲು ಹಾಕಿದರು.

ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕರೂ ಆದ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿ.ಬಿ.ಸುರೇಶ್‌ಬಾಬು ಮಾತನಾಡಿ, ಕೇಂದ್ರ ಸಚಿವರ ಕಚೇರಿಗೆಂದು ಕೊಟ್ಟ ಕಟ್ಟಡವನ್ನು ವಾಪಸ್‌‍ ಪಡೆಯಲು ರಾಜ್ಯ ಸರ್ಕಾರ ಹೊರಟಿದೆ. ಒಮೆ ಕೊಟ್ಟು ಮತ್ತೆ ವಾಪಸ್‌‍ ಪಡೆಯುವುದನ್ನು ಕಾಂಗ್ರೆಸ್‌‍ ಸರ್ಕಾರ ದಂಧೆ ಮಾಡಿಕೊಂಡಂತಿದೆ ಎಂದು ಟೀಕಿಸಿದರು.

ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡು ಮಾತನಾಡಿ, ಕೇಂದ್ರ ಸಚಿವ ವಿ.ಸೋಮಣ್ಣನವರ ಅಭಿವೃದ್ಧಿ ಕಾರ್ಯ, ಅವರ ಜನಪರ ಕೆಲಸಗಳ ವೇಗಕ್ಕೆ ಕಾಂಗ್ರೆಸ್‌‍ ನಾಯಕರಿಗೆ ನಡುಕು ಉಂಟಾಗಿದೆ. ಸಂಸದರ ವೇಗ ತಡೆಯಲು ಕಚೇರಿ ಹಿಂಪಡೆಯುವ ಕುತಂತ್ರ ಮಾಡುತ್ತಿದ್ದಾರೆ. ದಮ್‌ ಇದ್ದರೆ ಕಚೇರಿಯನ್ನು ಹಿಂಪಡೆಯಲಿ ನೋಡೋಣ. ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಚಿವ ವಿ.ಸೋಮಣ್ಣ ಅವರು ನಾಳೆ ನಗರದ ಪ್ರವಾಸಿ ಮಂದಿರದ ತಮ ಕಚೇರಿಯಲ್ಲಿ ಸಾರ್ವಜನಿಕರು ಭೇಟಿ ಮಾಡಿ ಕುಂದು-ಕೊರತೆ, ಅಹವಾಲುಗಳನ್ನು ಸಲ್ಲಿಸಬಹುದು. ನಾಳೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸಚಿವ ವಿ.ಸೋಮಣ್ಣ ಕಚೇರಿಯಲ್ಲಿ ಹಾಜರಿರುತ್ತಾರೆ ಎಂದು ಸಚಿವರ ಕಚೇರಿಯ ಪ್ರಕಟಣೆ ತಿಳಿಸಿದೆ.

RELATED ARTICLES

Latest News