ನವದೆಹಲಿ,ಸೆ.3- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ಚೀಟಿ ನೀಡುತ್ತವೆ. ಲಾನುಭವಿಗಳ ಆಹಾರ ಭದ್ರತೆಗಾಗಿ ಉಚಿತ ಪಡಿತರವನ್ನು ಒದಗಿಸುತ್ತದೆ. ಆದರೆ ಈಗ ಭಾರತ ಸರ್ಕಾರ ಈ ಯೋಜನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಹೊರಟಿದೆ. ಈ ಹಿಂದೆ ಕೇಂದ್ರವು ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ನೀಡುತ್ತಿತ್ತು. ಆದರೆ ಇದೀಗ ಉಚಿತ ಅಕ್ಕಿ ಬದಲಿಗೆ 9 ಅಗತ್ಯ ವಸ್ತುಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಭಾರತ ಸರ್ಕಾರದ ಉಚಿತ ಪಡಿತರ ಯೋಜನೆಯಡಿ ದೇಶದ 90 ಕೋಟಿ ಜನರಿಗೆ ಉಚಿತ ಪಡಿತರವನ್ನು ನೀಡಲಾಗುತ್ತಿದೆ. ಆಯಾ ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಪಡಿತರ ನೀಡುತ್ತಿದೆ. ಈ ಹಿಂದೆ ಲಾನುಭವಿಗಳಿಗೆ ಉಚಿತವಾಗಿ ಅಕ್ಕಿ ನೀಡಲಾಗುತ್ತಿತ್ತು. ಆದರೆ ಇದೀಗ ಕೆಲವು ಸುದ್ದಿಗಳ ಪ್ರಕಾರ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ಬದಲು 9 ಅಗತ್ಯ ವಸ್ತುಗಳನ್ನು ನೀಡಲು ಸರ್ಕಾರ ಮುಂದಾಗಿದೆ.
ಇವುಗಳಲ್ಲಿ ಗೋಧಿ, ಕಾಳುಗಳು, ಧಾನ್ಯಗಳು, ಸಕ್ಕರೆ, ಉಪ್ಪು, ಸಾಸಿವೆ ಎಣ್ಣೆ, ಹಿಟ್ಟು, ಸೋಯಾಬೀನ್ ಮತ್ತು ಮಸಾಲೆಗಳು ಸೇರಿವೆ ಎಂದು ತಿಳಿದು ಬಂದಿದೆ.ಕೆಲವು ವರದಿಗಳ ಪ್ರಕಾರ, ಉಚಿತ ಅಕ್ಕಿ ಬದಲಿಗೆ ಈ ಸರಕುಗಳನ್ನು ನೀಡಲಾಗುವುದು ಎಂದು ಹೇಳಿದರೆ, ಇನ್ನೂ ಕೆಲವು ವರದಿಗಳು ಅಕ್ಕಿಯೊಂದಿಗೆ ಇತರ ಒಂಬತ್ತು ರೀತಿಯ ಅಗತ್ಯ ವಸ್ತುಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಜನರ ಆರೋಗ್ಯವನ್ನು ಸುಧಾರಿಸಲು ಮತ್ತು ಅವರ ಆಹಾರದಲ್ಲಿ ಪೌಷ್ಟಿಕಾಂಶದ ಮಟ್ಟವನ್ನು ಹೆಚ್ಚಿಸಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದರಿಂದ ಜನರ ಜೀವನ ಮಟ್ಟವೂ ಸುಧಾರಿಸುತ್ತದೆ ಎಂದು ಹೇಳಲಾಗುತ್ತಿದೆ.
ನೀವು ಪಡಿತರ ಚೀಟಿಗೆ ಅರ್ಹರಾಗಿದ್ದರೆ ಮತ್ತು ಇನ್ನೂ ಕಾರ್ಡ್ ಪಡೆಯದಿದ್ದರೆ, ನೀವು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಸಮೀಪದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿಗೆ ಹೋಗಬೇಕು. ಅಥವಾ ನೀವು ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಬಹುದು.
ನಮೂನೆಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಸರಿಯಾಗಿ ನಮೂದಿಸಬೇಕು. ಇದರೊಂದಿಗೆ ಸಂಬಂಧಿಸಿದ ದಾಖಲೆಗಳನ್ನು ಸೇರಿಸಿ ಪಡಿತರ ಕಚೇರಿಯಲ್ಲಿ ಸಲ್ಲಿಸಬೇಕು. ಅದರ ನಂತರ ಸಂಬಂಧಪಟ್ಟ ಅಧಿಕಾರಿ ನಿಮ ವಿವರಗಳನ್ನು ಪರಿಶೀಲಿಸುತ್ತಾರೆ.
ಪರಿಶೀಲನೆ ಪ್ರಕ್ರಿಯೆ ಮುಗಿದ ನಂತರ ಪಡಿತರ ಚೀಟಿ ನೀಡಲಾಗುತ್ತದೆ. ಆದರೆ, ಕರ್ನಾಟಕದಲ್ಲಿ ಕೂಡ ಸಾವಿರಾರು ಮಂದಿ ಹೊಸ ಪಡಿತರ ಚೀಟಿ ಪಡೆಯಲು ಕಾರ್ಡ್‌ಗಳಿಗಾಗಿ ಕಾಯುತ್ತಿದ್ದಾರೆ.
ಭಾರತ ಸರ್ಕಾರ ದೇಶದ ಜನರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇವುಗಳಲ್ಲಿ ಹೆಚ್ಚಿನವು ಬಡ ಮತ್ತು ನಿರ್ಗತಿಕರಿಗೆ ವಿನ್ಯಾಸಗೊಳಿಸಲಾಗಿದೆ. ವಿಶೇಷವಾಗಿ ಬಡತನ ರೇಖೆಗಿಂತ ಕೆಳಗಿರುವ ಬಡವರಿಗೆ ಕೇಂದ್ರ ಸರ್ಕಾರ ಉಚಿತ ಪಡಿತರವನ್ನು ನೀಡುತ್ತಿದೆ. ಸರ್ಕಾರವು ಎಲ್ಲಾ ಪಡಿತರ ಚೀಟಿದಾರರಿಗೆ ಉಚಿತ ಪಡಿತರ ಯೋಜನೆಯಡಿ ಉಚಿತ ಪಡಿತರವನ್ನು ನೀಡುತ್ತದೆ.