Sunday, September 8, 2024
Homeರಾಜ್ಯತೆರಿಗೆ ಪಾಲು ಹಂಚಿಕೆಯಲ್ಲಿ ಕೇಂದ್ರದಿಂದ 1.87 ಲಕ್ಷ ಕೋಟಿ ಅನ್ಯಾಯ : ಸಿಎಂ

ತೆರಿಗೆ ಪಾಲು ಹಂಚಿಕೆಯಲ್ಲಿ ಕೇಂದ್ರದಿಂದ 1.87 ಲಕ್ಷ ಕೋಟಿ ಅನ್ಯಾಯ : ಸಿಎಂ

ಬೆಂಗಳೂರು,ಫೆ.5- ಕರ್ನಾಟಕ ರಾಜ್ಯದಿಂದ ಕೇಂದ್ರಕ್ಕೆ ವಾರ್ಷಿಕ 4.30 ಲಕ್ಷ ಕೋಟಿ ರೂ. ತೆರಿಗೆ, ಸರ್‍ ಚಾರ್ಜ್, ಸೆಸ್ ರೂಪದಲ್ಲಿ ಆದಾಯ ಕ್ರೂಢೀ ಕರಣ ವಾಗುತ್ತಿದೆ. ಅದರಲ್ಲಿ ಶೇ.12ರಷ್ಟನ್ನು ರಾಜ್ಯಕ್ಕೆ ಮರಳಿಸ ಲಾಗುತ್ತಿದ್ದು, ಸುಮಾರು 1,87,867 ಕೋಟಿ ರೂ. ಕಳೆದ ಐದು ವರ್ಷಗಳಿಂದ ನಷ್ಟವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಆರ್ಥಿಕ ತಾರತಮ್ಯ ಕುರಿತಂತೆ ವಿಧಾನಸೌಧದಲ್ಲಿಂದು ಸುದೀರ್ಘ ಪತ್ರಿಕಾಗೋಷ್ಠಿ ನಡೆಸಿ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟರು. 2017ರಿಂದ 2023-24ರವರೆಗೆ ಜಿಎಸ್‍ಟಿ ನಷ್ಟದಿಂದ 59,274 ಕೋಟಿ 15ನೇ ಹಣಕಾಸು ಆಯೋಗದ ತೆರಿಗೆ ಪಾಲು ಹಂಚಿಕೆಯಲ್ಲಿ 62,098 ಕೋಟಿ ಸೆಸ್, ಸಬ್‍ಚಾರ್ಜ್‍ಗಳ ಮೂಲಕ 55,000 ಕೋಟಿ, ವಿಶೇಷ ಅನುದಾನ ಕೊಡದೆ ವಂಚನೆಯಾಗಿರುವುದು 11,495 ಕೋಟಿ ಸೇರಿ ಒಟ್ಟು 1.87 ಲಕ್ಷ ಕೋಟಿ ಆರ್ಥಿಕವಾಗಿ ರಾಜ್ಯಕ್ಕೆ ನಷ್ಟವಾಗಿದೆ ಎಂದು ವಿವರಿಸಿದರು.

2013-14ನೇ ಸಾಲಿನಲ್ಲಿ 1,41,270 ಕೋಟಿ ಸೆಸ್ ಮತ್ತು ಸರ್‍ಚಾರ್ಜ್‍ಗಳ ಮೊತ್ತ ವಸೂಲಿಯಾಗುತ್ತಿತ್ತು. 2023-24ನೇ ಸಾಲಿಗೆ ಅದು ಐದು ಪಟ್ಟು ಹೆಚ್ಚಾಗಿ, 5,52,789 ಕೋಟಿಯಷ್ಟಾಗಿದೆ. ಆದರೆ ಇದರಲ್ಲಿ ರಾಜ್ಯಕ್ಕೆ ಯಾವುದೇ ಪಾಲು ನೀಡುತ್ತಿಲ್ಲ ಎಂದು ಆಕ್ಷೇಪಿಸಿದರು. ಕೇಂದ್ರ ಸರ್ಕಾರದ ಬಜೆಟ್ 2017-18ನೇ ಸಾಲಿನಲ್ಲಿ 21.46 ಲಕ್ಷ ಕೋಟಿಯಷ್ಟು ಇತ್ತು. ಆಗ 47,990 ಕೋಟಿ ರೂ.ಗಳು ಕೇಂದ್ರದಿಂದ ತೆರಿಗೆ ಪಾಲು ಮತ್ತು ಕೇಂದ್ರದ ಪ್ರಾಯೋಜಿತ ಯೋಜನೆಗಳಡಿ ಬರುತ್ತಿತ್ತು.

2024-25ನೇ ಸಾಲಿಗೆ ಬಜೆಟ್‍ನ ಗಾತ್ರ 45.03 ಲಕ್ಷ ಕೋಟಿಯಷ್ಟಾಗಿದೆ. ಇದರ ಪ್ರಮಾಣಕ್ಕೆ ಅನುಗುಣವಾಗಿ ರಾಜ್ಯಕ್ಕೆ ಅನುದಾನ ಹೆಚ್ಚಾಗಿಲ್ಲ. ಕೇವಲ 50,257 ಕೋಟಿ ರೂ. ಮಾತ್ರ ದೊರೆತಿದೆ. ಬಜೆಟ್ ಪ್ರಮಾಣಕ್ಕೆ ಅನುಗುಣವಾಗಿ 5 ವರ್ಷಗಳ ಹಿಂದೆ 2.2ರಷ್ಟು ಅನುದಾನ ಹಂಚಿಕೆಯಾಗಿದ್ದು, ಈ ವರ್ಷಕ್ಕೆ 1.23ಕ್ಕೆ ಕುಸಿದಿದೆ.

ಯಾವ ಕ್ಷೇತ್ರಕ್ಕೂ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿಲ್ಲ : ವಿಜಯೇಂದ್ರ ಸ್ಪಷ್ಟನೆ

ಅವೈಜ್ಞಾನಿಕ ಜಿಎಸ್‍ಟಿಯಿಂದ ರಾಜ್ಯಕ್ಕೆ ಆಗುತ್ತಿರುವ ನಷ್ಟದ ಪರಿಹಾರವನ್ನು ಕೇಂದ್ರ ಸರ್ಕಾರ ಭರ್ತಿ ಮಾಡಿಕೊಡುವುದನ್ನು ನಿಲ್ಲಿಸಿದೆ. ದೇಶದಲ್ಲೇ 2ನೇ ಅತಿಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಆದಾಯ ತೆರಿಗೆ, ಕಾಪೆರ್ರೇಟ್ ತೆರಿಗೆ, ಜಿಎಸ್‍ಟಿ, ಪೆಟ್ರೋಲ್, ಡೀಸೆಲ್, ಕಸ್ಟಮ್ ತೆರಿಗೆ, ಹೆದ್ದಾರಿ ಟೋಲ್‍ಗಳು, ಬಂದರು, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಿಂದ ಕೇಂದ್ರಕ್ಕೆ 4.37 ಲಕ್ಷ ಕೋಟಿ ರೂ. ಆದಾಯ ರವಾನೆಯಾಗುತ್ತಿದೆ. ಇದರಲ್ಲಿ ಕನಿಷ್ಟವೆಂದರೂ ರಾಜ್ಯಕ್ಕೆ ವರ್ಷಕ್ಕೆ ಒಂದು ಲಕ್ಷ ಕೋಟಿ ರೂ. ಮರುಪಾವತಿಯಾಗಬೇಕಿತ್ತು. 50 ಸಾವಿರ ಕೋಟಿ ರೂ. ನೀಡುವ ಭರವಸೆ ಮಾತ್ರ ದೊರೆತಿದೆ ಎಂದು ವಿಶ್ಲೇಷಿಸಿದರು.

ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕಳೆದ ಬಜೆಟ್‍ನಲ್ಲಿ ಭದ್ರ ಮೇಲ್ದಂಡೆಗೆ 5,300 ಕೋಟಿ ಕೆರೆಗಳ ಪುನರ್ ಅಭಿವೃದ್ಧಿಗೆ 3000 ಕೋಟಿ, ಪೆರಿಪರಲ್ ರಿಂಗ್ ರಸ್ತೆ 3000 ಕೋಟಿ, 15ನೇ ಹಣಕಾಸು ಆಯೋಗದ ಮಧ್ಯಂತರ ವರದಿ ಪ್ರಕಾರ 5 ಸಾವಿರ ಕೋಟಿ ಸೇರಿದಂತೆ ಸಾಕಷ್ಟು ಅನುದಾನ ನಿರ್ಮಲಾ ಸೀತಾರಾಮನ್ ಅವರ ಮೂಲಕವೇ ರಾಜ್ಯಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಅದೆಲ್ಲವನ್ನೂ ತಿರಸ್ಕಾರ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಬಿಜೆಪಿಗೆ ಮನವಿ:
ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಫೆ.7ರಂದು ಬೆಳಗ್ಗೆ 11 ಗಂಟೆಗೆ ಜಂತರ್‍ಮಂತರ್‍ನಲ್ಲಿ ಕರ್ನಾಟಕದ ಎಲ್ಲಾ ಸಚಿವರು, ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು, ಪ್ರತಿಭಟನೆ ನಡೆಸುತ್ತಿದ್ದೇವೆ. ಇದು ಬಿಜೆಪಿ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ರಾಜಕೀಯ ಪ್ರತಿಭಟನೆ ಅಲ್ಲ. ಬದಲಾಗಿ ರಾಜ್ಯಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ. ಹೀಗಾಗಿ ಬಿಜೆಪಿಯ ಶಾಸಕರು, ಸಂಸದರೂ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಮಧ್ಯ ಚಿಲಿಯಲ್ಲಿ ಕಾಡ್ಗಿಚ್ಚಿಗೆ 112 ಮಂದಿ ಸಾವು

ರಾಜ್ಯದಿಂದ ಕೇಂದ್ರದಲ್ಲಿ ಸಚಿವರಾಗಿರುವವರು, 27 ಮಂದಿ ಸಂಸದರು, ಬಿಜೆಪಿಯ ರಾಜ್ಯ ನಾಯಕರಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ಸೇರಿದಂತೆ ಯಾರಿಗೂ ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಮುಂದೆ ನಿಂತು ಮಾತನಾಡುವ ಧೈರ್ಯವಿಲ್ಲ. ಹೀಗಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಇದೆ. ಇಲ್ಲಿ ಸುಳ್ಳು ಆರೋಪ ಮಾಡುವ ಬದಲು ದೆಹಲಿಗೆ ಬಂದು ನಮ್ಮ ಜೊತೆ ಕೈಜೋಡಿಸಲಿ ಎಂದು ಸವಾಲು ಹಾಕಿದರು.

ಕೇಂದ್ರದಿಂದ ಸಾಲದ ಪ್ರಮಾಣ ಕೂಡ ಹೆಚ್ಚಾಗಿದೆ. ಇದು ಆರ್ಥಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಹಣದುಬ್ಬರವನ್ನು ತಪ್ಪಿಸುವ ಬದಲು ನಿಯಮಾವಳಿಗಳನ್ನು ಬದಲಾವಣೆ ಮಾಡಿ ಸರ್ವಾಕಾರ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ರಾಜ್ಯದ ಪಂಚಖಾತ್ರಿ ಯೋಜನೆಗಳಿಂದ ಜಿಎಸ್‍ಟಿ ಸಂಗ್ರಹ ಮತ್ತಷ್ಟು ಹೆಚ್ಚಾಗಿದೆ ಎಂದು ಸಿದ್ಧರಾಮಯ್ಯ ವಿವರಿಸಿದರು.

ಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News