Friday, November 22, 2024
Homeರಾಜ್ಯಗೊಂದಲದ ಗೂಡಾದ ಸಿಇಟಿ ಪರೀಕ್ಷೆ : ಮರುಪರೀಕ್ಷೆಗೆ ರುಪ್ಸಾ ಆಗ್ರಹ

ಗೊಂದಲದ ಗೂಡಾದ ಸಿಇಟಿ ಪರೀಕ್ಷೆ : ಮರುಪರೀಕ್ಷೆಗೆ ರುಪ್ಸಾ ಆಗ್ರಹ

ಬೆಂಗಳೂರು,ಏ.20- ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಹೊರಪಠ್ಯ (ಔಟ್ ಆಫ್ ಸಿಲಬೆಸ್) ಪ್ರಶ್ನೆಗಳೇ ಹೆಚ್ಚಾಗಿ ವಿದ್ಯಾರ್ಥಿಗಳು, ಪೊಷಕರು ಆತಂಕಗೊಳಗಾಗಿದ್ದಾರೆ, ಉಪನ್ಯಾಸಕರು ಅಸಹಾಯಕರಾಗಿದ್ದಾರೆ, ಕೂಡಲೇ ಮರು ಪರೀಕ್ಷೆ ನಡೆಸಬೇಕೆಂದು ರುಪ್ಸಾ ಸಂಘಟನೆ ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರುಪ್ಸಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಇಂಜಿನಿಯರಿಂಗ್, ಮತ್ತಿತರೆ ಕೋರ್ಸ್ಗಳಿಗೆ ಸೇರಲು 3.50 ಲಕ್ಷ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಳೆದೆರೆಡು ವರ್ಷದಿಂದ ಶ್ರಮ ವಹಿಸಿ ಸಿಇಟಿಗೆ ತಯಾರಾಗಿ ಪರೀಕ್ಷೆ ಎದುರಿಸಿದ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆಗಳಲ್ಲಿ ಹೊರಪಠ್ಯ ಪ್ರಶ್ನೆಗಳನ್ನು ಹೆಚ್ಚು ನೀಡಿರುವುದರಿಂದ ಆತಂಕಕ್ಕೆ ಒಳಗಾಗಿದ್ದಾರೆ.

ಒಂದು ವಿಷಯದಲ್ಲಿ ಒಂದು ಅಥವಾ ಎರಡು ಪ್ರಶ್ನೆಗಳು ತಪ್ಪಾಗಿ ಸಹಜ. ಅವುಗಳಿಗೆ ಗ್ರೇಸ್ ಮಾಕ್ರ್ಸ್ ಕೊಡುವಂತಹುದು ಸಾಮಾನ್ಯವಾಗಿತ್ತು. ಆದರೆ ಪ್ರಸ್ತುತ ನಡೆದ ಸಿಇಟಿ ಪರೀಕ್ಷೆಯ ನಾಲ್ಕೂ ವಿಷಯಗಳಲ್ಲಿ ಒಟ್ಟು 46 ಪ್ರಶ್ನೆಗಳು ಪಠ್ಯವನ್ನು ಹೊರತುಪಡಿಸಿ ಕೇಳಿರುವುದು ಅವಾಂತರಗಳಿಗೆ ಕಾರಣವಾಗಿದೆ. 240 ಅಂಕಗಳಲ್ಲಿ 46 ಪ್ರಶ್ನೆಗಳು ಪಠ್ಯಗಳಲ್ಲಿ ಇಲ್ಲದ ಪ್ರಶ್ನೆಗಳು ಬಂದಿರುವುದು ಇದೇ ಮೊದಲು. ಮರುಪರೀಕ್ಷೆಯಿಂದ ಮಾತ್ರ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ.

ಈ ರೀತಿಯ ಬೇಜವಾಬ್ದಾರಿ ಹಾಗೂ ಪ್ರಮಾದಕ್ಕೆ ಕಾರಣರಾದವರನ್ನು ತಕ್ಷಣ ತನಿಖೆಗೊಳಪಡಿಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಕೂಡಲೇ ಸಿಇಟಿ ಮರು ಪರೀಕ್ಷೆ ನಡೆಸುವ ತೀರ್ಮಾನವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.ವಿಳಂಬ ಮಾಡಿದರೆ ಮಕ್ಕಳ ಹಿತ ಕಾಯಲು ನಮ್ಮ ಸಂಘಟನೆ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲು ಹಿಂಜರಿಯುವುದಿಲ್ಲ. ಶಿಕ್ಷಣ ಮಂತ್ರಿಗಳು ಕೂಡಲೇ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

RELATED ARTICLES

Latest News