Friday, November 22, 2024
Homeರಾಷ್ಟ್ರೀಯ | Nationalತಿಹಾರ್ ಜೈಲಿನಲ್ಲಿ ಯೋಗ-ಧ್ಯಾನ ಮಾಡಿಕೊಂಡು ಕಾಲ ಕಳೆಯುತ್ತಿರುವ ಕೇಜ್ರಿವಾಲ್

ತಿಹಾರ್ ಜೈಲಿನಲ್ಲಿ ಯೋಗ-ಧ್ಯಾನ ಮಾಡಿಕೊಂಡು ಕಾಲ ಕಳೆಯುತ್ತಿರುವ ಕೇಜ್ರಿವಾಲ್

ನವದೆಹಲಿ,ಏ.4- ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ತಿಹಾರ್ ಜೈಲಿಗೆ ಕಳುಹಿಸಲಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸೆಲ್‍ನಲ್ಲಿ ಧ್ಯಾನ, ಪುಸ್ತಕಗಳನ್ನು ಓದುವುದು ಮತ್ತು ಯೋಗ ಮಾಡಿಕೊಂಡು ಸಮಯ ಕಳೆಯುತ್ತಿದ್ದಾರೆ.

ಏಷ್ಯಾದ ಅತಿದೊಡ್ಡ ಜೈಲಿನಲ್ಲಿ ಇರಿಸಲಾಗಿರುವ ಮೊದಲ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ತಿಹಾರ್‍ನ ಜೈಲು ಸಂಖ್ಯೆ 2 ರ ಸಾಮಾನ್ಯ ವಾರ್ಡ್ ಸಂಖ್ಯೆ 3ರಲ್ಲಿ 14×8 ಅಡಿ ಕೊಠಡಿಯಲ್ಲಿ ಇರಿಸಲಾಗಿದೆ. ಕೇಜ್ರಿವಾಲ್ ದಿನದ ಬಹುಪಾಲು ಪುಸ್ತಕಗಳನ್ನು ಓದುತ್ತಾರೆ ಮತ್ತು ಪ್ರತಿದಿನ ಎರಡು ಬಾರಿ ಯೋಗ ಮತ್ತು ಧ್ಯಾನ ಮಾಡುತ್ತಾರೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸುಮಾರು ಒಂದೂವರೆ ಗಂಟೆ ಯೋಗ ಮಾಡುತ್ತಾರೆ ಮತ್ತು ಧ್ಯಾನ ಮಾಡುತ್ತಾರೆ.

ಕೇಜ್ರಿವಾಲ್‍ಗೆ ಒದಗಿಸಿದ ಪುಸ್ತಕಗಳಲ್ಲಿ ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಪ್ರಮುಖವಾಗಿವೆ. ತಮ್ಮ ಸೆಲ್‍ನಲ್ಲಿ ಕುರ್ಚಿಯ ಮೇಲೆ ಕುಳಿತು ಈ ಪುಸ್ತಕಗಳನ್ನು ಓದುತ್ತಾರೆ ಮತ್ತು ಏನನ್ನಾದರೂ ಬರೆಯುತ್ತಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ.

ಕ್ರೇಜಿವಾಲ್ ಅವರ ಸೆಲ್‍ನಲ್ಲಿ 20 ಚಾನೆಲ್‍ಗಳ ಟಿವಿಯನ್ನು ಒದಗಿಸಲಾಗಿದೆ, ಆದರೆ ಅವರು ಅದನ್ನು ವೀಕ್ಷಿಸಲು ಹೆಚ್ಚು ಇಷ್ಟಪಡುವುದಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ಅವರಿಗೆ ಟೇಬಲ್ ಮತ್ತು ಕುರ್ಚಿ ಜೊತೆಗೆ ವಿದ್ಯುತ್ ಕೆಟಲ್ ಅನ್ನು ಒದಗಿಸಲಾಗಿದೆ. ಅವರ ಕೊಠಡಿಯನ್ನು ಸ್ವಚ್ಛಗೊಳಿಸಲು ಅವರಿಗೆ ಬ್ರೂಮ್, ಬಕೆಟ್ ಮತ್ತು ಬಟ್ಟೆಯ ತುಂಡು ನೀಡಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ತಿಹಾರ್ ಅಧಿಕಾರಿಗಳು ಸೆಲ್‍ನಲ್ಲಿ ಎರಡು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ 24 ಗಂಟೆಗಳ ಕಾಲ ಆತನ ಮೇಲೆ ನಿಗಾ ಇಡಬಹುದು. ಅವರ ಕೊಠಡಿಯ ಹೊರಗೆ ಇರುವ ಲಾಬಿಯಲ್ಲಿ ಅವರು ಕುಳಿತುಕೊಳ್ಳಲು ಅವಕಾಶವಿದೆ.

ಭದ್ರತಾ ಕಾರಣಗಳಿಂದ ಕೇಜ್ರಿವಾಲ್‍ಗೆ ಇತರ ಕೈದಿಗಳನ್ನು ಭೇಟಿಯಾಗಲು ಅವಕಾಶವಿಲ್ಲ. ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ತಮಿಳುನಾಡು ವಿಶೇಷ ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ಕ್ವಿಕ್ ರಿಯಾಕ್ಷನ್ ತಂಡವನ್ನು ಅವರ ವಾರ್ಡ್‍ನ ಹೊರಗೆ 24 ಗಂಟೆಯೂ ನಿಯೋಜಿಸಲಾಗಿದೆ.

ಅವರು ಪ್ರತಿದಿನ ತಮ್ಮ ವಕೀಲರನ್ನು ಭೇಟಿ ಮಾಡಲು ಹೋದಾಗಲೆಲ್ಲಾ, ಅವರನ್ನು ಕ್ಯೂಆರ್‍ಟಿ ಸಿಬ್ಬಂದಿ ಬೆಂಗಾವಲು ಮಾಡುತ್ತಾರೆ. ಚಹಾ ಮತ್ತು ಮನೆಯಲ್ಲಿ ಬೇಯಿಸಿದ ಆಹಾರವನ್ನು ಅವರಿಗೆ ದಿನನಿತ್ಯ ನಿಗದಿತ ಸಮಯಕ್ಕೆ ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

RELATED ARTICLES

Latest News