ವಿಜಯವಾಡ,ಜೂ.12- ಇತ್ತೀಚೆಗೆ ನಡೆದ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಐತಿಹಾಸಿಕ ಗೆಲುವು ಸಾಧಿಸಿದ್ದ ಟಿಡಿಪಿ ಮುಖಂಡ ಎನ್.ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ವಿಜಯವಾಡ ವಿಮಾನ ನಿಲ್ದಾಣದ ಗನ್ನಾವರಂ ಐಟಿಪಾರ್ಕ್ ಸಮೀಪ ಇರುವ ಕೆಸರಪಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಕಾರ್ಯಕರ್ತರ ಮುಗಿಲು ಮುಟ್ಟಿದ ಹರ್ಷೋದ್ಘಾರಗಳ ನಡುವೆ ರಾಜ್ಯಪಾಲ ಅಬ್ದುಲ್ ನಜೀರ್ ಅವರು ಅಧಿಕಾರ ಗೌಪ್ಯತೆ ಬೋಧಿಸಿದರು.ಇದೇ ವೇಳೆ ಜನಸೇನೆ ಪಕ್ಷದ ಮುಖಂಡ ಪವನ್ ಕಲ್ಯಾಣ್ ಕೂಡ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು.
ಚಂದ್ರಬಾಬು ನಾಯ್ಡು ಅವರು ತಮ ಸಂಪುಟಕ್ಕೆ ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಟಿಡಿಪಿ ಜೊತೆ ಜನಸೇನೆಗೆ 3 ಹಾಗೂ ಬಿಜೆಪಿಗೆ ಒಂದು ಸ್ಥಾನವನ್ನು ಸಂಪುಟದಲ್ಲಿ ನೀಡಿದ್ದಾರೆ.
ಸಂಪುಟಕ್ಕೆ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್, ಕಿಂಜರಾಪು ಅಚ್ಚನ್ನಾಯ್ಡು, ನಿಮಲಾ ರಾಮಾನಾಯ್ಡು, ಎನ್.ಎಂ.ಡಿ.ಫಾರೂಕ್, ಆನಂ ರಾಮನಾರಾಯಣ ರೆಡ್ಡಿ, ಪಯ್ಯಾವುಳ ಕೇಶವ್, ಕೊಲ್ಲು ರವೀಂದ್ರ, ಪೊಂಗೂರು ನಾರಾಯಣ, ವಂಗಲಪುಡಿ ಅನಿತಾ, ಆನಗಣಿ ಸತ್ಯ ಪ್ರಸಾದ್, ಕೊಲುಸು ಪಾರ್ಥಸಾರಧಿ, ಕೋಲ ಬಲವೀರಾಂಜನೇಯ ಸ್ವಾಮಿ, ಗೊಟ್ಟಿಪಾಟಿರನ್, ಗುಮಲಾ ರಾಮಾನಾಯ್ಡು, ಜಿ. ಭರತ್, ಎಸ್.ಸವಿತಾ, ವಾಸಮಶೆಟ್ಟಿ ಸುಭಾಷ್, ಕೊಂಡಪಲ್ಲಿ ಶ್ರೀನಿವಾಸ್ ಮತ್ತು ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ಸೇರ್ಪಡೆಯಾಗಿದ್ದಾರೆ.
ಪ್ರಧಾನಿ ನರೇಂದ್ರಮೋದಿ, ಕೇಂದ್ರ ಸಚಿವರಾದ ಅಮಿತ್ ಷಾ, ಜೆ.ಪಿ.ನಡ್ಡಾ, ಚಿತ್ರನಟ ಚಿರಂಜೀವಿ, ರಾಮ್‌ಚರಣ್, ಅಲ್ಲು ಅರ್ಜುನ್, ರಜನಿಕಾಂತ್, ಮೋಹನ್ ಬಾಬು, ಜೂನಿಯರ್ ಎನ್‌ಟಿಆರ್ ಸೇರಿದಂತೆ ಅನೇಕರು ಸಮಾರಂಭದಲ್ಲಿ ಭಾಗಿಯಾಗಿದ್ದರು.
ಆಂಧ್ರಪ್ರದೇಶದ 175 ಕ್ಷೇತ್ರಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ, ಜನಸೇನೆ ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 164 ಸ್ಥಾನಗಳನ್ನು ಗೆದ್ದು ವೈಎಸ್‌ಆರ್‌ಪಿ ಪಕ್ಷವನ್ನು ಧೂಳಿಪಟ ಮಾಡಿತ್ತು. ಟಿಡಿಪಿ 135, ಜೆಎಸ್‌ಪಿ 21, ಬಿಜೆಪಿ 8, ವೈಎಸ್‌ಆರ್‌ಸಿಪಿ 11 ಸ್ಥಾನಗಳಲ್ಲಿ ಗೆಲುವು ಕಂಡಿತ್ತು.