ಚನ್ನಪಟ್ಟಣ,ಅ.28– ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಕಾಂಗ್ರೆಸ್ ಮತ್ತು ಎನ್ಡಿಎ ಪ್ರತಿಷ್ಠೆಯಾಗಿ ಪರಿಗಣಿಸಿರುವುದರಿಂದ ಚುನಾವಣಾ ಅಖಾಡ ಕಾವೇರಿದೆ.
ಎನ್ಡಿಎ ಮಿತ್ರಪಕ್ಷಗಳು ಮತ್ತು ಕಾಂಗ್ರೆಸ್ ತಮತಮ ಅಭ್ಯರ್ಥಿಗಳ ಗೆಲುವಿಗೆ ತಂತ್ರ ಪ್ರತಿತಂತ್ರಗಳನ್ನು ರೂಪಿಸುತ್ತಿವೆ. ಮತದಾರರ ಮನ ಗೆಲ್ಲಲು ನಾನಾ ರೀತಿಯ ಕಾರ್ಯತಂತ್ರಗಳನ್ನು ರೂಪಿಸಿದ್ದು, ಅದರಂತೆ ಚುನಾವಣಾ ಪ್ರಚಾರದ ವೈಖರಿ ಕಂಡುಬರುತ್ತಿದೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರರ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವುದರಿಂದ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ.
ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪರವಾಗಿ ಕಾಂಗ್ರೆಸ್ ಕ್ಷೇತ್ರದೆಲ್ಲೆಡೆ ಬಿರುಸಿನ ಪ್ರಚಾರವನ್ನು ಕೈಗೊಂಡಿದೆ. ಅದೇ ರೀತಿ ಎನ್ಡಿಎ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಪರವಾಗಿ ಬಿಜೆಪಿ ಮತ್ತು ಜೆಡಿಎಸ್ ಕೂಡ ಪ್ರಚಾರ ಆರಂಭಿಸಿವೆ.
ಸ್ಥಳೀಯರ ಮಾಹಿತಿ ಪ್ರಕಾರ, ಕಾಂಗ್ರೆಸ್ ಮತ್ತು ಎನ್ಡಿಎ ಮಿತ್ರಪಕ್ಷಗಳು ಪ್ರಚಾರವನ್ನು ಚುರುಕುಗೊಳಿಸಿವೆ. ತಮತಮ ಪಕ್ಷಗಳ ನಾಯಕರು, ಮುಖಂಡರಿಗೆ ಜವಾಬ್ದಾರಿ ಹಂಚಿಕೆ ಮಾಡಿ ಪ್ರಚಾರದ ಹೊಣೆಗಾರಿಕೆಯನ್ನು ವಹಿಸಲಾಗಿದೆ. ಪ್ರತಿ ಜಿಪಂಗೊಬ್ಬರಂತೆ ಕಾಂಗ್ರೆಸ್ ನಾಯಕರನ್ನು ಪ್ರಚಾರಕ್ಕೆ ನಿಯೋಜಿಸಲಾಗಿದೆ. ಇದರಲ್ಲಿ ಸಚಿವರು, ಶಾಸಕರು ಒಳಗೊಂಡಿದ್ದಾರೆ. ಜೊತೆಗೆ ಪಂಚಾಯಿತಿಗೊಬ್ಬ ಮುಖಂಡರಿಗೆ ಚುನಾವಣಾ ಉಸ್ತುವಾರಿ ನೀಡಿದ್ದು, ಅಭ್ಯರ್ಥಿ ಪರವಾಗಿ ಮತದಾರರ ಮನವೊಲಿಕೆ ಮಾಡುವಂತೆ ಜವಾಬ್ದಾರಿ ವಹಿಸಲಾಗಿದೆ.
ಅದೇ ರೀತಿ ಬಿಜೆಪಿ ಮತ್ತು ಜೆಡಿಎಸ್ ಚುನಾವಣಾ ಕಾರ್ಯತಂತ್ರ ರೂಪಿಸಿದ್ದು, ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೊಬ್ಬರಂತೆ ಚುನಾವಣಾ ಉಸ್ತುವಾರಿ ನೇಮಕ ಮಾಡಿದೆ. ಪ್ರತಿ ಪಂಚಾಯಿತಿಗೊಬ್ಬ ಮುಖಂಡರನ್ನು ನಿಯೋಜಿಸಿದ್ದು, ಮತದಾರರ ಮನ ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿವೆ.
ಪ್ರಚಾರದಲ್ಲಿ ಪೈಪೋಟಿಗಿಳಿದಂತೆ ಇಬ್ಬರು ಅಭ್ಯರ್ಥಿಗಳು ಮಾಡುತ್ತಿದ್ದಾರೆ. ಆರೋಪ, ಪ್ರತ್ಯಾರೋಪಗಳು ಸರ್ವೇಸಾಮಾನ್ಯವಾಗಿದೆ. ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ಕ್ಷೇತ್ರದಲ್ಲಿ ಮಾಡಿದ್ದ ಸಾಧನೆಯನ್ನು ಮುಂದಿಟ್ಟು ಮತಯಾಚನೆ ಮಾಡುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಶಾಸಕರಾಗಿ, ಸಚಿವರಾಗಿ ಕ್ಷೇತ್ರಕ್ಕಾಗಿ ಮಾಡಿರುವ ಸಾಧನೆ ಹಾಗೂ ಕಾಂಗ್ರೆಸ್ ಸರ್ಕಾರ ಆಡಳಿತಾವಧಿಯಲ್ಲಿ ನೀಡಿರುವ ಕೊಡುಗೆಗಳನ್ನು ಮುಂದಿಟ್ಟುಕೊಂಡು ಮತಯಾಚನೆಯಲ್ಲಿ ತೊಡಗಿದ್ದಾರೆ. ಇಬ್ಬರೂ ಅಭ್ಯರ್ಥಿಗಳಿಗೂ ಆಯಾ ಪಕ್ಷದ ನಾಯಕರು, ಮುಖಂಡರು ಸಾಥ್ ನೀಡಿರುವುದ ರಿಂದ ಚುನಾವಣೆ ರಂಗೇರತೊಡಗಿದೆ. ಜಿದ್ದಾಜಿದ್ದಿನ ಅಖಾಡವಾಗಿ ಈ ಉಪಕದನ ಪರಿಣಮಿಸಿದ್ದು, ಪ್ರಬಲ ಪೈಪೋಟಿ ಎದುರಾಗಿದೆ.