ಹಾಸನ, ಅ.15- ಚನ್ನಪಟ್ಟಣ ಉಪಚುನಾವಣೆ ಸ್ಪರ್ಧೆಯಲ್ಲಿ ಎನ್ ಡಿ ಎ ಅಭ್ಯರ್ಥಿ ಚುನಾವಣಾ ಕಣದಲ್ಲಿ ಇರುತ್ತಾರೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದರು. ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬೀದರಕ್ಕ ಗ್ರಾಮದಲ್ಲಿ ಶ್ರೀ ಕೊಳಲು ಗೋಪಾಲಕೃಷ್ಣ ದೇವಾಲಯ ಉದ್ಘಾಟಿಸಿ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್ ಅವರು ಅಭ್ಯರ್ಥಿ ಆದಮೇಲೆ ನಾನು ಅಭ್ಯರ್ಥಿ ಆಗಲೇಬೇಕಲ್ಲ, ಆದ್ದರಿಂದ ನಾನೇ ಅಭ್ಯರ್ಥಿ ಎಂದು ಹೇಳಿದ್ದೇನೆ .ಹಲವರ ಹೆಸರುಗಳು ಇದ್ದು, ಈಗಾಗಲೇ ಕ್ಷೇತ್ರದ ಮತದಾರರು ಕಾರ್ಯಕರ್ತರ ಪ್ರತಿಕ್ರಿಯೆ ಭಾವನೆಗಳನ್ನು ತಿಳಿದುಕೊಂಡಿದ್ದೇನೆ ಎಂದರು.
ಬಿಜೆಪಿ -ಜೆಡಿಎಸ್ ನ ಹೊಂದಾಣಿಕೆಯೊಂದಿಗೆ ದೆಹಲಿಯ ನಾಯಕರ ಜೊತೆ ಚರ್ಚೆ ಮಾಡಿ ಅಂತಿಮವಾದಂತಹ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ. ಇನ್ನೇನು ಎರಡು ಮೂರು ದಿನಗಳಲ್ಲಿ ಚುನಾವಣೆ ಆಯೋಗ ದಿನಾಂಕ ಘೋಷಣೆ ಮಾಡಲಿದ್ದು. ಈ ವಾರದಲ್ಲಿ ದೆಹಲಿಯಲ್ಲಿ ಕುಳಿತು ಅಭ್ಯರ್ಥಿಯ ಆಯ್ಕೆ -ಫೈನಲ್ ಮಾಡಲಾಗುವುದು ಎಂದರು.ಚನ್ನಪಟ್ಟಣ ಉಪಚುನಾವಣೆಯಲ್ಲಿ ಹೊಂದಾಣಿಕೆ ಅಭ್ಯರ್ಥಿನೆ ಇರುತ್ತಾರೆ.ಎನ್ ಡಿಎ ಅಭ್ಯರ್ಥಿ ಚುನಾವಣಾ ಕಣದಲ್ಲಿ ಇರಲಿದ್ದಾರೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಬೆಂಬಲವಿದೆ ಎಂದು ತಥಾಸ್ತು ಅಂದಿದ್ದಾರೆ : ರಾಜ್ಯದ ಜನತೆಯ ಆಶೀರ್ವಾದ ಇರುವವರಿಗೆ ನನ್ನನ್ನು ಏನು ಮಾಡಲು ಆಗೋಲ್ಲ ಎಂದು ಸಿದ್ದರಾಮಯ್ಯ ಹೇಳಿರುವ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿಯವರು ರಾಜ್ಯದ ಜನರ ಸಂಪೂರ್ಣ ಬೆಂಬಲವಿದೆ ಎಂದು ಯಾರಾದರೂ ಬಂದು ತಥಾಸ್ತು ಅಂದಿದ್ದಾರಾ? ಪರ ವಿರೋಧಗಳು ಇದ್ದೇ ಇರುತ್ತವೆ, ದೊಡ್ಡ ಮಟ್ಟದಿಂದ ಸಣ್ಣ ಮಟ್ಟದವರೆಗೂ ಪರವಿರೋಧಗಳು ಇದ್ದೇ ಇರುತ್ತವೆ. ಪೂರ್ಣವಾಗಿ ಯಾರಿಗೂ ಆಶೀರ್ವಾದ ದೊರಕುವುದಿಲ್ಲ . ರಾಜಕಾರಣ ಅಂದಮೇಲೆ ಅದು ದೊರಕುವುದೂ ಇಲ್ಲ ಎಂದರು.
ಭದ್ರಕೋಟೆ ಅಲ್ಲಾಡಿಸಲಾಗೊಲ್ಲ: ಯಾರು ಏನೇ ಮಾಡಿದರು ಈ ಭದ್ರ ಕೋಟೆ ಅಲ್ಲಾಡಿಸಲು ಆಗುವುದಿಲ್ಲ, ಹಾಸನ ಜಿಲ್ಲೆಯಲ್ಲಿ ಬೃಹತ್ ಸಮಾವೇಶ ಮಾಡೋಣ ಭದ್ರ ಕೋಟೆ ಬಿಗಿಯಾಗಿ ನಿಲ್ಲಲು ಏನೇನು ಕ್ರಮ ತೆಗೆದುಕೊಳ್ಳಬೇಕು ಸಂಘಟನೆಯಲ್ಲಿ ತಗೋತೀವಿ ಎಂದು ಕುಮಾರಸ್ವಾಮಿ ಹೇಳಿದರು.
ಶಿರಾಡಿ ಹೆದ್ದಾರಿ ಅವ್ಯವಸ್ಥೆ: ಕೇಂದ್ರ ಸಚಿವರಿಗೆ ದೂರುಹದಗೆಟ್ಟ ಶಿರಾಡಿ ಘಾಟ್ ರಸ್ತೆ ವಿಚಾರವಾಗಿ ಈಗಾಗಲೇ ಕೇಂದ್ರದ ಸಾರಿಗೆ ಸಚಿವರ ಗಮನಕ್ಕೆ ತಂದಿದ್ದೇನೆ. ಗುತ್ತಿಗೆದಾರರನ್ನು ಕೆಲವು ಕಳಪೆ ಮತ್ತು ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ಬಗ್ಗೆ ಗಮನಕ್ಕೆ ತಂದಿದ್ದು ಕೇಂದ್ರ ಸಚಿವರೆ ಒಮ್ಮೆ ಸ್ಥಳ ಪರಿಶೀಲನೆ ಮಾಡಬೇಕೆಂದು ಹೇಳಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ಎಸ್‌ಡಿಕೆಗೆ ಭವ್ಯ ಸ್ವಾಗತ-ರೇವಣ್ಣ ಸಾಥ್:
ಜಿಲ್ಲೆಯ ಶ್ರೀ ಕೊಳಲು ಗೋಪಾಲಕೃಷ್ಣ ದೇವಾಲಯ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ಹೆಚ್ .ಡಿ ಕುಮಾರಸ್ವಾಮಿ ಅವರಿಗೆ ಬಿದರಕ್ಕ ಗ್ರಾಮಸ್ಥರು ಕ್ರೇನ್ ಮೂಲಕ ಬೃಹತ್ ಹಾರಹಾಕಿ ಅದ್ದೂರಿ ಸ್ವಾಗತ ಕೋರಿದರು.
ದೇವಾಲಯ ಉದ್ಘಾಟನೆ ಹಾಗೂ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕುಮಾರಸ್ವಾಮಿ ಅವರಿಗೆ ಸಹೋದರ ಹಾಗೂ ಮಾಜಿ ಸಚಿವ ಎಚ್.ಡಿ .ರೇವಣ್ಣ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಎ ಮಂಜು , ಮಾಜಿ ಶಾಸಕ ಸಿ. ಎಸ್ .ಪುಟ್ಟರಾಜು, ಸಾರಾ ಮಹೇಶ್ , ಕೆ .ಎಸ್ ಲಿಂಗೇಶ್ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಇದ್ದರು.