ಚಿಕ್ಕಮಗಳೂರು, ಮಾ.19-ಸಿಮೆಂಟ್ ತುಂಬಿದ್ದ ಬೃಹತ್ ಲಾರಿಯೊಂದು ಚಾರ್ಮಾಡಿ ಘಾಟ್‍ನ ಹತ್ತನೇ ತಿರುವಿನಲ್ಲಿ ಕೆಟ್ಟು ನಿಂತ ಪರಿಣಾಮ ಕಿಲೋಮೀಟರ್‍ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತು ಗಂಟೆಗಟ್ಟಲೆ ವಾಹನದಲ್ಲೇ ಕಾಲ ಕಳೆಯುವಂತಾಗಿತ್ತು.
ಹುಬ್ಬಳ್ಳಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಸಿಮೆಂಟ್ ಲಾರಿಯೊಂದು ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನಲ್ಲಿ ಕೆಟ್ಟು ನಿಂತ ಪರಿಣಾಮ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಚಾರ್ಮಾಡಿ ಘಾಟಿಯಲ್ಲಿ 10 ಚಕ್ರದ ವಾಹನಕ್ಕಿಂತ ದೊಡ್ಡ ವಾಹನಗಳು ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವಂತಿಲ್ಲ, ಆದರೂ ವಾಹನ ಸವಾರ ಗೊತ್ತಿದ್ದೋ ಗೊತ್ತಿಲ್ಲದೆಯೋ ಬಂದಿದ್ದಾನೆ. ಈ ವೇಳೆ ಹತ್ತನೇ ತಿರುವಿನಲ್ಲಿ ಹಿಂದೆಯೂ ಹೋಗಲಾಗದೆ, ಮುಂದೆಯೂ ಹೋಗಲಾಗದೆ ಸಿಲುಕಿಕೊಂಡಿದೆ. ಈ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ಇತರ ವಾಹನಗಳು ತಿರುವಿನಲ್ಲಿ ಸಂಚರಿಸಲಾಗದೆ ಸಾಲು ಗಟ್ಟಿ ನಿಂತಿರುವ ಚಿತ್ರಣ ಕಂಡು ಬಂದಿದೆ.
ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ ಇದಾಗಿದ್ದು, ಹೆಚ್ಚಿನ ವಾಹನಗಳು ಇದೇ ಮಾರ್ಗವನ್ನು ಅವಲಂಬಿಸುತ್ತವೆ. ಹಾಗಾಗಿ ಈ ಮಾರ್ಗದಲ್ಲಿ ಹೆಚ್ಚಿನ ವಾಹನಗಳು ಸಂಚರಿಸುತ್ತಿರುವುದರಿಂದ ಕಿಲೋಮೀಟರ್‍ಗಟ್ಟಲೆ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಕೊಟ್ಟಿಗೆಹಾರ ಚೆಕ್‍ಪೋಸ್ಟ್ ನಲ್ಲಿ ಪೊಲೀಸರು ಇದ್ದರೂ ಲಾರಿಯನ್ನು ಸಂಚರಿಸಲು ಹೇಗೆ ಬಿಟ್ಟರು ಎಂಬುದು ಅಲ್ಲಿನ ಜನರ ಪ್ರಶ್ನೆಯಾಗಿದೆ. ಇದಲ್ಲದೆ ಸ್ಥಳೀಯರು ಪೊಲೀಸರ ವಿರುದ್ಧ ಅಸಮಾಧಾನಗೊಂಡಿದ್ದಾರೆ.