Sunday, November 24, 2024
Homeರಾಜಕೀಯ | Politicsಪೆನ್‌ಡ್ರೈವ್‌ ಪ್ರಕರಣಕ್ಕೂ ಕಾಂಗ್ರೆಸ್‌‍ ನಾಯಕರಿಗೂ ಯಾವುದೇ ಸಂಬಂಧವಿಲ್ಲ : ಸಚಿವ ಚೆಲುವರಾಯಸ್ವಾಮಿ

ಪೆನ್‌ಡ್ರೈವ್‌ ಪ್ರಕರಣಕ್ಕೂ ಕಾಂಗ್ರೆಸ್‌‍ ನಾಯಕರಿಗೂ ಯಾವುದೇ ಸಂಬಂಧವಿಲ್ಲ : ಸಚಿವ ಚೆಲುವರಾಯಸ್ವಾಮಿ

ಬೆಂಗಳೂರು,ಮೇ 18- ಪೆನ್‌ಡ್ರೈವ್‌ ಪ್ರಕರಣಕ್ಕೂ ಕಾಂಗ್ರೆಸ್‌‍ನ ಯಾವ ನಾಯಕರಿಗೂ ಸಂಬಂಧವಿಲ್ಲ, ಇದರಿಂದ ನಮ್ಮ ಪಕ್ಷಕ್ಕೆ ರಾಜಕೀಯವಾಗಿ ಲಾಭವಾಗಿಲ್ಲ, ಪ್ರಜ್ವಲ್‌ ರೇವಣ್ಣನನ್ನು ಅವರ ಕುಟುಂಬದ ಸದಸ್ಯರು ಕರೆಸಿ ತನಿಖೆಗೆ ಒಳಪಡಿಸಬೇಕು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ನಮಗೂ ನೋವಾಗಿದೆ. ಇದು ಆಗಬಾರದಿತ್ತು. ದೇವೇಗೌಡರ ಕುಟುಂಬಕ್ಕೆ ಈ ರೀತಿಯಾಗಿರುವುದರ ಬಗ್ಗೆ ಬೇಸರವಿದೆ. ರಾಜ್ಯದಲ್ಲಿ ಅತ್ಯಂತ ಪ್ರತಿಷ್ಠಿತ ಕುಟುಂಬ ಅದು. ದೇವೇಗೌಡರನ್ನು ಹೊರತುಪಡಿಸಿದರೆ, ಕುಮಾರಸ್ವಾಮಿಯವರು ಆ ಮನೆಯ ಎರಡನೇಯ ಮುಖ್ಯಸ್ಥರಾಗಿದ್ದಾರೆ. ಈಗಲಾದರೂ ಅವರು ಪ್ರಜ್ವಲ್‌ನನ್ನು ವಾಪಸ್‌‍ ಕರೆಸಲಿ ಎಂದು ಮನವಿ ಮಾಡಿದರು.

ಬಿಇಜೆಪಿ ಮುಖಂಡ ದೇವರಾಜೇಗೌಡ ಒಬ್ಬ ಮಹಿಳೆಯ ಜೊತೆ ಮಾತನಾಡಿರುವ ವಿಡಿಯೋ ಮತ್ತು ಆಡಿಯೋವನ್ನು ಎಲ್ಲರೂ ನೋಡಿದ್ದಾರೆ. ಅಂತಹ ವ್ಯಕ್ತಿ ನಮ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ. ಆತನ ಹೇಳಿಕೆಗೆ ನಾವು ಪ್ರತಿಕ್ರಿಯಿಸುವ ಅಗತ್ಯವೂ ಇಲ್ಲ ಎಂದರು.

ದೇವರಾಜೇಗೌಡ ಒಂದು ವರ್ಷದಿಂದಲೇ ರೇವಣ್ಣ ಕುಟುಂಬದ ವಿರುದ್ಧ ಹೋರಾಟ ನಡೆಸುತ್ತಿದ್ದರು. ತಮ್ಮ ಬಳಿ ಪೆನ್‌ಡ್ರೈವ್‌ ಇದೆ ಎಂದು ಹೇಳಿಕೊಂಡಿದ್ದರು. ಅದನ್ನು ತನಿಖಾ ಸಂಸ್ಥೆ ಅಥವಾ ನ್ಯಾಯಾಲಯಕ್ಕೆ ಒಪ್ಪಿಸದೆ ವೈಯಕ್ತಿಕವಾಗಿ ಇಟ್ಟುಕೊಂಡಿದ್ದೇಕೆ? ಇಲ್ಲಿ ಮೂಲ ಪ್ರಶ್ನೆ ಇರುವುದು ಒಂದು ಪ್ರಜ್ವಲ್‌ ರೇವಣ್ಣ ಹೆಣ್ಣು ಮಕ್ಕಳನ್ನು ದುರುಪಯೋಗಪಡಿಸಿಕೊಂಡಿರುವುದು, ಎರಡನೇಯದು ವಿಡಿಯೋವನ್ನು ರೆಕಾರ್ಡ್‌ ಮಾಡಿಕೊಂಡಿರುವುದು, ಮೂರನೆಯದು ಅದು ಎಲ್ಲಿಂದ, ಯಾರ ಮೂಲಕ ಬಹಿರಂಗವಾಯಿತು? ಎಂಬುದು. ಈ ನಿಟ್ಟಿನಲ್ಲಿ ತನಿಖೆ ನಡೆಯಬೇಕೇ ಹೊರತು ಇದರ ನಡುವೆ ನೂರು ಕೋಟಿ ರೂ. ಡೀಲು, ಸರ್ಕಾರ ಪತನ… ಈ ಅನಗತ್ಯ ಚರ್ಚೆಗಳು ಏಕೆ? ಎಂದು ಪ್ರಶ್ನಿಸಿದರು.

ಇದರಲ್ಲಿ ಡಿ.ಕೆ.ಶಿವಕುಮಾರ್‌, ಕೃಷ್ಣಭೈರೇಗೌಡ, ಪ್ರಿಯಾಂಕ್‌ ಖರ್ಗೆ ಅಥವಾ ನನ್ನ ಪಾತ್ರವೇನು? ನಮಗೆ ಇದರಿಂದ ರಾಜಕೀಯ ಲಾಭ ಮಾಡಿಕೊಳ್ಳುವ ಉದ್ದೇಶ ಇದ್ದಿದ್ದರೆ ಚುನಾವಣೆಗೂ ಮೊದಲೇ ಬಹಿರಂಗಪಡಿಸಬಹುದಿತ್ತು. ಆದರೆ ಅದು ನಮಗೆ ಅನಗತ್ಯ. ಇದು ಸಾರ್ವಜನಿಕವಾಗಿ ಚರ್ಚಿಸುವ ವಿಚಾರವಲ್ಲ. ಕಂಡೂ ಕಾಣದಂತೆ ಇರಬಹುದಾದಂತಹ ಸಂಗತಿ. ನಮಂಥವರೇ ಅಲ್ಲ, ಜನಸಾಮಾನ್ಯರೂ ಕೂಡ ವಿಡಿಯೋ ಬಹಿರಂಗಪಡಿಸುವಂತಹ ಕೆಳಹಂತಕ್ಕೆ ಇಳಿಯುವುದಿಲ್ಲ ಎಂದರು.

ಪೆನ್‌ಡ್ರೈವ್‌ ಯಾರ ಬಳಿ ಇತ್ತು? ಯಾರು ಹೊರತಂದರು? ಎಂಬುದು ತನಿಖೆಯಾಗಿ ಸತ್ಯ ಹೊರಬರಬೇಕು. ದೇವರಾಜೇಗೌಡ, ಕಾರ್ತಿಕ್‌, ಪ್ರಜ್ವಲ್‌ ರೇವಣ್ಣ ಪ್ರಕರಣದ ಕೇಂದ್ರ ಸ್ಥಾನದಲ್ಲಿದ್ದಾರೆ. ಅದನ್ನು ಹೊರತುಪಡಿಸಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ನಮ ವಿಚಾರಗಳು ಏಕೆ ಚರ್ಚೆಯಾಗುತ್ತಿವೆ? ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರೇವಣ್ಣ ಅವರ ಬಗ್ಗೆ ಎಲ್ಲರಿಗೂ ಗೌರವವಿದೆ. ಮಹಿಳೆ ಅಪಹರಣ ಪ್ರಕರಣದಲ್ಲಿ ಅವರ ಬಂಧನವಾಗಿದೆ. ಇಲ್ಲದೇ ಇದ್ದಿದ್ದರೆ ರೇವಣ್ಣ ಅವರಿಗೆ ಕಾನೂನಿನ ತೊಡಕಾಗುತ್ತಿರಲಿಲ್ಲ. ಈಗಲೂ ಕುಮಾರಸ್ವಾಮಿಯವರು ಪ್ರಕರಣದ ಬಗ್ಗೆ ಪದೇಪದೇ ಕೆಣಕಿ ಮಾತನಾಡುವುದನ್ನು ನಿಲ್ಲಿಸಿದರೆ ತನಿಖೆಯ ಪಾಡಿಗೆ ತನಿಖೆ ನಡೆಯುತ್ತದೆ. ಡಿ.ಕೆ.ಶಿವಕುಮಾರ್‌ರವರು ಹೇಳಿಕೆ ನೀಡುವಾಗ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.

ನಮಗೆ ಪೆನ್‌ಡ್ರೈವ್‌ ವಿಚಾರಕ್ಕಿಂತಲೂ ಮಹತ್ವದ ಬೇರೆ ವಿಚಾರಗಳಿವೆ. ಮಳೆಯಾಗಿದೆ, ಕೃಷಿ ಚಟುವಟಿಕೆ ಬಗ್ಗೆ ಗಮನ ಹರಿಸುತ್ತಿದ್ದೇವೆ. ದೇವರಾಜೇಗೌಡ ಆರೋಪ ಮಾಡಿದಂತೆ ನಾವು ನಾಲ್ಕು ಜನ ಸಚಿವರು ಸಭೆ ನಡೆಸಿ, ಷಡ್ಯಂತ್ರ ಮಾಡಿರುವುದನ್ನು ಸಾಬೀತುಪಡಿಸಿದರೆ ಬಹಿರಂಗ ಕ್ಷಮೆ ಕೇಳಲು ನಾನು ಸಿದ್ಧ ಎಂದು ಸವಾಲು ಹಾಕಿದರು.

ಬಿಜೆಪಿ ಮುಖಂಡ ಎಲ್‌.ಆರ್‌.ಶಿವರಾಮೇಗೌಡರ ಜೊತೆ ನನಗೆ ವೈಯಕ್ತಿಕ ಸ್ನೇಹವಿದೆ. ಆದರೆ ರಾಜಕೀಯವಾಗಿ ಇಬ್ಬರೂ ಬೇರೆ ಪಕ್ಷದಲ್ಲಿದ್ದೇವೆ. ಪೆನ್‌ಡ್ರೈವ್‌ ವಿಚಾರದಲ್ಲಿ ಡಿ.ಕೆ.ಶಿವಕುಮಾರ್‌ ಅವರ ಜೊತೆ ಚರ್ಚೆ ಮಾಡಿರುವುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ನಾನು ಯಾರ ಬಳಿಯೂ ವಿಚಾರ ವಿನಿಮಯ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಜನತಾದಳದವರು ಯಾವ ಕಾರಣಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದೇ ಅರ್ಥವಾಗುವುದಿಲ್ಲ. ಆ ಪಕ್ಷದ ಬಹಳಷ್ಟು ಶಾಸಕರಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಆಸಕ್ತಿ ಇಲ್ಲ. ಆದರೂ ನಾಯಕರ ಒತ್ತಡಕ್ಕೆ ಮಣಿದು ಹೋಗುತ್ತಿದ್ದಾರೆ ಎಂದು ಹೇಳಿದರು. ಜೆಡಿಎಸ್‌‍ ಮತ್ತು ಬಿಜೆಪಿಯಿಂದ ಕಾಂಗ್ರೆಸ್‌‍ಗೆ ಸೇರಲು ಹಲವು ಶಾಸಕರು, ಮಾಜಿ ಶಾಸಕರು, ಲೋಕಸಭಾ ಚುನಾವಣೆಗೂ ಮುನ್ನ ಚರ್ಚೆ ನಡೆಸಿದ್ದರು. ಫಲಿತಾಂಶದ ಬಳಿಕ ಯಾವ ರೀತಿ ಬೆಳವಣಿಗೆಗಳಾಗುತ್ತವೆ ಎಂಬುದು ಗೊತ್ತಿಲ್ಲ. ಬಹಳಷ್ಟು ಮಂದಿ ಬರಬಹುದು ಎಂದ ಅವರು, ರಾಜ್ಯದಲ್ಲಿ ಚುನಾಯಿತ ಸರ್ಕಾರವನ್ನು ಪತನಗೊಳಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಮಾತ್ರವಲ್ಲ. ಅಪರಾಧ ಕೂಡ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಚೆಲುವರಾಯಸ್ವಾಮಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದಿಗೂ ತಮ ಸ್ನೇಹಿತರು. ಅವರು ನನ್ನನ್ನು ವೈರಿ ಎಂದು ತಿಳಿದುಕೊಳ್ಳಬಹುದು. ನಾನು ಅವರನ್ನು ಹಾಗೆ ಭಾವಿಸುವುದಿಲ್ಲ ಎಂದರು.

RELATED ARTICLES

Latest News