ಪೂಜಾರ ದ್ವಿಶತಕ, ಎದುರು ಬಸವಳಿದ ಕರ್ನಾಟಕ ಯುವಪಡೆ

ರಾಜಕೋಟ್, ಜ.12- ಭಾರತ ತಂಡದ ಟೆಸ್ಟ್ ಸ್ಪೆಷಾಲಿಸ್ಟ್, ಸೌರಾಷ್ಟ್ರ ತಂಡದ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಅವರ ಆಕರ್ಷಕ ದ್ವಿಶತಕದ ಎದುರು ಕರ್ನಾಟಕದ ಯುವಪಡೆ ಬಸವಳಿದಿದೆ. ಕರ್ನಾಟಕದ ಅನುಭವಿ ಬೌಲರ್‍ಗಳಾದ ಕೃಷ್ಣಪ್ಪ ಗೌತಮ್, ಅಭಿಮನ್ಯು ಮಿಥನ್ ಹಾಗೂ ನಾಯಕ ಕರಣ್‍ನಾಯರ್‍ರ ಅನುಪಸ್ಥಿತಿಯಲ್ಲಿ ಶ್ರೇಯಾಸ್‍ಗೋಪಾಲ್‍ರ ಮೇಲೆ ಹೆಚ್ಚಿನ ಒತ್ತಡ ಬಿದ್ದಿರುವುದರಿಂದ ಬೌಲಿಂಗ್‍ನಲ್ಲೂ ಎಡವುವ ಮೂಲಕ ಸೌರಾಷ್ಟ್ರದ ಚೇತೇಶ್ವರ ಪೂಜಾರ ಹಾಗೂ ಸೆಲ್ಡಾನ್ ಜಾಕ್ಸನ್‍ರ ಆಕರ್ಷಕ ಶತಕ (155 ರನ್, 7 ಬೌಂಡರಿ, 5 ಸಿಕ್ಸರ್)ರ ರನ್ ದಾಹಕ್ಕೆ ಲಗಾಮು ಹಾಕುವಲ್ಲಿ ಕನ್ನಡಿಗ ಬೌಲರ್‍ಗಳು ಎಡವಿದ್ದಾರೆ.

ಇಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ಬ್ಯಾಟಿಂಗ್ ಮಾಡಿ ಆರಂಭದಲ್ಲೇ ದೇಸಾಯ್ ಹಾಗೂ ವಿಕೆಟ್ ಕೀಪರ್ ಸ್ನೇಹ್ ಪಟೇಲ್‍ರ ವಿಕೆಟ್ ಅನ್ನು ಕಬಳಿಸಿ ಸಂಭ್ರಮಪಟ್ಟಿದ್ದ ರಾಜ್ಯ ಬೌಲರ್‍ಗಳು ನಿನ್ನೆ ಇಡೀ ದಿನ ವಿಕೆಟ್ ಕಬಳಿಸಲು ಪರದಾಡಿದರು, ಪೂಜಾರ, ಜಾಕ್ಸನ್‍ರ ಬ್ಯಾಟಿಂಗ್ ಮೇಳೈಯಿಸಿ ಮೊದಲ ದಿನದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 296 ರನ್ ಗಳಿಸಿತ್ತು.

400 ರನ್‍ಗಳ ಜೊತೆಯಾಟ: ಕರ್ನಾಟಕದ ಬೌಲರ್‍ಗಳ ಮೇಲೆ ಬ್ಯಾಟಿಂಗ್ ವೈಭವ ಪ್ರದರ್ಶಿಸಿದ ಚೇತೇಶ್ವರ ಪೂಜಾರ ಹಾಗೂ ಶೆಲ್ಡನ್ ಜಾಕ್ಸನ್ 3ನೆ ವಿಕೆಟ್‍ಗೆ 400 ರನ್‍ಗಳ ಜೊತೆಯಾಟ ನೀಡುವ ಮೂಲಕ ಮೈದಾನದಲ್ಲಿ ನೆರೆದಿದ್ದ ಸೌರಾಷ್ಟ್ರ ತಂಡದ ಅಭಿಮಾನಿಗಳನ್ನು ಕುಣಿಯುವಂತೆ ಮಾಡಿದರು.  ನಿನ್ನೆ 99 ರನ್ ಗಳಿಸಿ ಶತಕದ ಅಂಚಿನಲ್ಲಿದ್ದ ಶೆಲ್ಡನ್ ಜಾಕ್ಸನ್ ಇಂದು ಎರಡನೇ ಎಸೆತದಲ್ಲೇ ಶತಕ (198 ಎಸೆತ) ಸಂಭ್ರಮ ಆಚರಿಸಿಕೊಂಡರೆ, ಚೇತೇಶ್ವರ ಪೂಜಾರ ಮತ್ತೊಂದು ದ್ವಿಶತಕವನ್ನು ತಮ್ಮ ಖಾತೆಗೆ ಸೇರಿಸಿಕೊಂಡರು.
ಎರಡನೇ ದಿನದ ಭೋಜನ ವಿರಾಮದ ವೇಳೆಗೆ 352 ರನ್‍ಗಳನ್ನು ಸೌರಾಷ್ಟ್ರ ಗಳಿಸಿತ್ತು.

ಈ ಜೋಡಿಯನ್ನು ಬೇರ್ಪಡಿಸಲು ಕರ್ನಾಟಕದ ನಾಯಕ ಶ್ರೇಯಾಸ್ ಗೋಪಾಲ್ ಮಾಡಿದ ತಂತ್ರವನ್ನೆಲ್ಲ ವಿಫಲಗೊಳಿಸಿದ ಈ ಜೋಡಿಯು 120 ಓವರ್‍ಗಳಲ್ಲಿ 400 ರನ್‍ಗಳ ಜೊತೆಯಾಟ ನೀಡಿದರು.

ಬ್ರೇಕ್ ನೀಡಿದ ಪವನ್ : ಕರ್ನಾಟಕದ ಬೌಲರ್‍ಗಳನ್ನು ಕಾಡಿದ ಚೇತೇಶ್ವರ ಪೂಜಾರ ಹಾಗೂ ಶೆಲ್ಡನ್ ಜಾಕ್ಸನ್ ಜೋಡಿಯು ತಂಡದ ಮೊತ್ತವನ್ನು 427 ರನ್ ಗಳ ಗಡಿ ಮುಟ್ಟಿಸುತ್ತಿದ್ದಂತೆ ಭರ್ಜರಿ ಹೊಡೆತಕ್ಕೆ ಮುಂತಾದ ಶೆಲ್ಡನ್ ಜಾಕ್ಸನ್ (161 ರನ್, 7 ಬೌಂಡರಿ, 6 ಸಿಕ್ಸರ್) ರೋಹಿತ್ ಮೋರೆಗೆ ಕ್ಯಾಚ್ ನೀಡಿದಾಗ ಕರ್ನಾಟಕ ತಂಡದಲ್ಲಿ ನೆಮ್ಮದಿ ಮನೆ ಮಾಡಿತು.
ಈ ಜೋಡಿಯು ಬೇರ್ಪಡುವ ಮುನ್ನ 108.1 ಓವರ್‍ಗಳಲ್ಲಿ 394 ರನ್‍ಗಳ ಜೊತೆಯಾಟ ನೀಡಿದರು.

250 ರನ್‍ಗಳ ಹೊಸ್ತಿನಲ್ಲಿದ್ದ ಪೂಜಾರ (248 ರನ್) ರೋಹಿತ್ ಮೋರೆ ಬೌಲಿಂಗ್‍ನಲ್ಲಿ ದೇವದತ್ ಪಡಿಕ್ಕಲ್ ಹಿಡಿದ ಕ್ಯಾಚಿಗೆ ಔಟಾಗಿ ಮೈದಾನ ತೋರೆದರು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಸೌರಾಷ್ಟ್ರ 4 ವಿಕೆಟ್ ಕಳೆದುಕೊಂಡು 470 ರನ್ ಗಳಿಸಿತ್ತು. ಎ.ವಿವಾಸುದೇವ ( 14 ರನ್, 2 ಬೌಂಡರಿ) ಹಾಗೂ ಪರೀಕ್ ಮಕಂಡ್(9 ರನ್, 1 ಬೌಂಡರಿ) ಕ್ರೀಸ್‍ನಲ್ಲಿದ್ದರು.