Sunday, July 7, 2024
Homeಜಿಲ್ಲಾ ಸುದ್ದಿಗಳುಅವ್ಯವಸ್ಥೆಯ ಆಗರವಾದ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ

ಅವ್ಯವಸ್ಥೆಯ ಆಗರವಾದ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ

ವರದಿ : ಎಂ ಕೃಷ್ಣಪ್ಪ, ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ,ಜು.1- ಹೆರಿಗೆ ವಾರ್ಡ್‌ಗಳಲ್ಲಿ ಬಿಸಿ ನೀರಿನ ಅವ್ಯವಸ್ಥೆ, ಲಿಫ್‌್ಟ ಇದೆ ಆದರೆ ಚಾಲನೆಯಲ್ಲಿಲ್ಲ, ಹೀಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದ್ದು, ರೋಗಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಯಾವುದೇ ವಾರ್ಡ್‌ಗಳಲ್ಲಿಯೂ ಕುಡಿಯುವ ನೀರಿಲ್ಲ, ರೋಗಿಗಳು ಮತ್ತು ಅವರ ಕಡೆಯವರು ಆಸ್ಪತ್ರೆಯ ಹೊರಭಾಗದಿಂದ ನೀರು ತರುವಂತಹ ಅನಿವಾರ್ಯತೆ ಎದುರಾಗಿದೆ.ಆಸ್ಪತ್ರೆಯಲ್ಲಿ ಲಿಫ್‌್ಟ ಇದೆ ಕೆಲಸ ಮಾಡುತ್ತಿಲ್ಲವಾದ ಕಾರಣ ಮೊದಲ ಮತ್ತು ಎರಡನೇ ಮಹಡಿಗೆ ಹೋಗಲು ರೋಗಿಗಳು ಮೆಟ್ಟಿಲು ಹತ್ತಿಕೊಂಡೇ ಹೋಗಬೇಕಾಗಿದೆ.

ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು, ಶಿಡ್ಲಘಟ್ಟ ಮತ್ತು ಚಿಂತಾಮಣಿ ಭಾಗಗಳಲ್ಲಿ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದರೂ ಸಹ ಸಣ್ಣಪುಟ್ಟ ಖಾಯಿಲೆಗಳಿಗೆ ಅಲ್ಲಿನ ವೈದ್ಯರು ಜಿಲ್ಲಾಸ್ಪತ್ರೆಗೆ ರೆಫರ್‌ ಮಾಡುತ್ತಾರೆ. ಜಿಲ್ಲಾಸ್ಪತ್ರೆಗೆ ಬಂದರೆ ಅಲ್ಲಿನ ವೈದ್ಯರು ಬೆಂಗಳೂರಿನತ್ತ ಬೆಟ್ಟು ತೋರಿಸುತ್ತಾರೆ. ಹೀಗಾಗಿದೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ.

ಇಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ ಇನ್ನು ಆಸ್ಪತ್ರೆಯ ವೈದ್ಯರು ಬರುವ ರೋಗಿಗಳಿಗೆ ಚಿಕಿತ್ಸೆ ಕೊಡುವುದು ಇರಲಿ, ಅವರನ್ನು ಮುಟ್ಟಿಯೂ ನೋಡದೆ ಇರುವ ಪ್ರಕರಣಗಳು ಇಲ್ಲ ಎನ್ನುವಂತಿಲ್ಲ. ರೋಗಿಗಳನ್ನು ಬೆಂಗಳೂರಿನತ್ತ ರೆರ್‌ ಮಾಡುವುದೇ ಇಲ್ಲಿನ ವೈದ್ಯರ ಕಾಯಕವಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಜಿಲ್ಲಾಸ್ಪತ್ರೆಗೆ ಬಳಸುವ ನೀರಿನಲ್ಲಿ ಹಳೆಯ ಬಟ್ಟೆಗಳು, ಮಾತ್ರೆಗಳು ಸೇರಿದಂತೆ ಅಪಯಕಾರಿ ವಸ್ತುಗಳು ಪತ್ತೆಯಾಗಿದ್ದು, ರೋಗಿಗಳಲ್ಲಿ ಆತಂಕ ಮೂಡಿಸಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಹಾಗೂ ಸಂಸದರು ಪರಸ್ಪರ ರಾಜಕೀಯ ಕೆಸರೇಚಾಟಗಳಲ್ಲೇ ಬ್ಯೂಸಿಯಾಗಿದ್ದು ಇತ್ತ ಅಭಿವೃದ್ಧಿ ವಿಚಾರಗಳನ್ನು ಮರೆತು ಹೋಗಿದ್ದಾರೆ.

ಚಿಕ್ಕಬಳ್ಳಾಪುರ ನಗರ ಹೃದಯ ಭಾಗದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ರೋಗಿಗಳು, ಸಾರ್ವಜನಿಕರು ಭೇಟಿ ನೀಡಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ. ಆದರೆ ಆಸ್ಪತ್ರೆಗೆ ಬಳಸುವ ನೀರಿನಲ್ಲಿರುವ ವಸ್ತುಗಳಿಂದ ಮತ್ತೆ ಹೊಸ ರೋಗಗಳು ಹರಡುವಂತಾಗಿದೆ.

ಹೆಸರಿಗೆ ಮಾತ್ರ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ. ಆದರೆ ಇಲ್ಲಿಗೆ ಬಂದರೆ ಮಾತ್ರ ಮತ್ತೆ ಹೊಸ ರೋಗಗಳೊಂದಿಗೆ ಮನೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ರತಿನಿತ್ಯ ಬಳಸುವ ನೀರಿನಲ್ಲಿ ಇಷ್ಟೊಂದು ಅಪಾಯಕಾರಿ ವಸ್ತುಗಳು ಪತ್ತೆಯಾಗಿರುವುದು ಆಸ್ಪತ್ರೆಯ ಸಿಬ್ಬಂದಿ, ವೈದ್ಯರ ನಿರ್ಲಕ್ಷ್ಯ ನೇರವಾಗಿ ಕಂಡು ಬರುತ್ತಿದೆ.

ಆಸ್ಪತ್ರೆಯ ಮೇಲಾಧಿಕಾರಿ ಸೇರಿದಂತೆ ಯಾರೊಬ್ಬರೂ ಆಸ್ಪತ್ರೆಯ ಕಡೆ ಗಮನ ಕೊಡುತ್ತಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ. ಸದ್ಯ ಈಗಲಾದರೂ ಇತ್ತ ಗಮನವಹಿಸಿ ಸುರಕ್ಷತೆಗೆ ಹೆಚ್ಚಿನ ಗಮನ ಕೊಡುತ್ತಾರೋ ಇಲ್ಲವೋ ಕಾದು ನೋಡಬೇಕಾಗಿದೆ.

RELATED ARTICLES

Latest News