-ಉಮೇಶ್‌ಕುಮಾರ್, ಚಿಕ್ಕಮಗಳೂರು
ಚಿಕ್ಕಮಗಳೂರು, ಅ.19– ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗಾ ಶ್ರೀ ದೇವಿರಮ್ಮನವರ ನಾಲ್ಕು ದಿನಗಳ ಜಾತ್ರಾ ಮಹೋತ್ಸವ ಇಂದು ವಿಜೃಂಭಣೆಯಿಂದ ಆರಂಭಗೊಂಡಿತು.
ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಶ್ರೀ ದೇವಿರಮ ಬೆಟ್ಟಕ್ಕೆ ಬರಿಗಾಲಿನಲ್ಲಿ ಭಕ್ತಾದಿಗಳು ಕಡಿದಾದ ದಾರಿಯಲ್ಲಿ ಪ್ರಪಾತಗಳ ಮೈ ಝುಮ್ ಎನಿಸುವ ಅಂಕುಡೊಂಕಿನ ಬೆಟ್ಟಗಳ ಮೇಲೆ ಚುಮು ಚುಮು ಚಳಿಯನ್ನು ಆಸ್ವಾದಿಸುತ್ತಾ ಬೆಟ್ಟದ ತುತ್ತತುದಿಯನ್ನೇರುತ್ತಿದ್ದಂತೆ ವಿಸ್ತಾರವಾಗಿ ಕಾಣುವ ಪ್ರಾಕೃತಿಕ ಸೌಂದರ್ಯ ನೋಡಿ ಎಲ್ಲಾ ದಣಿವನ್ನು ಮರೆಸಿ ಸಾರ್ಥಕ ಭಾವನೆಯಿಂದ ದೇವಿಯ ದರ್ಶನ ಪಡೆದರು.
ನಿನ್ನೆ ಇಡೀದಿನ ರಾತ್ರಿ ಮಳೆ ಆರ್ಭಟಿಸಿದ್ದು, ಇಂದು ಬೆಳಿಗ್ಗೆ ಮಳೆ ಬಿಡುವು ನೀಡಿದ್ದು , ಮಂಜು ಕವಿದ ವಾತಾವರಣ ಬೆಟ್ಟದಲ್ಲಿ ನಿರ್ಮಾಣಗೊಂಡಿತ್ತು. ಇಂದು ಬೆಳಿಗ್ಗೆ 5 ಗಂಟೆಯಿಂದಲೇ ಚಿಕ್ಕಮಗಳೂರು ನಗರದ ಬಸ್ ನಿಲ್ದಾಣದಿಂದ ಪ್ರತಿ ಐದು ನಿಮಿಷಕ್ಕೆ ಒಂದರಂತೆ ಮಲ್ಲೇನಹಳ್ಳಿ ಗೆ ಭಕ್ತರಿಗಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ವಿವಿಧ ವಾಹನಗಳಲ್ಲಿ ಚಿಕ್ಕಮಗಳೂರು ನಗರದ ಮೂಲಕ ಮಲ್ಲೇನಹಳ್ಳಿಗೆ ಸಾವಿರಾರು ಸಂಖ್ಯೆಯಲ್ಲಿ ತೆರಳಿದರು.
ಚಂದ್ರದೋಣ ಪರ್ವತ ಶ್ರೇಣಿಯ ಶ್ರೀದೇವಿರಮ ದೇವಸ್ಥಾನ 850 ವರ್ಷಗಳಿಂದ ಹಂತ ಹಂತವಾಗಿ ಅಭಿವೃದ್ಧಿ ದಾಪುಗಾಲು ಇಡುತ್ತಾ ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹಾಗೆಯೇ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಕೂಡ ನಡೆಯುತ್ತಿವೆ. ಚಾಮುಂಡೇಶ್ವರಿಯು ಉಗ್ರ ಸ್ವರೂಪಿಯಾಗಿದ್ದು, ಮೈಸೂರಿನ ಅಸುರನಾಗಿದ್ದ ಮಹಿಷಾಸುರನ ಮರ್ಧನ ಮಾಡಿ ತನ್ನ ಕೋಧಕ್ಕೆ ಭಕ್ತರು ಸಿಲುಕಬಾರದು ಎಂಬ ಕಾರಣಕ್ಕಾಗಿ ಶಾಂತ ಸ್ವರೂಪವಾಗಲು ಬಯಸಿ ಚಂದ್ರದೋಣ ಪರ್ವತ ಶ್ರೇಣಿಯತ್ತ ಬಂದಿದ್ದರು. ಆ ಸಂದರ್ಭದಲ್ಲಿ ಋಷಿಮುನಿಗಳಾದ ದತ್ತಾತ್ರೇಯ, ಸೀತಾಳಯ್ಯ, ಮುಳ್ಳಯ್ಯನವರು ನೆಲೆಸಿದ್ದು, ಆಗ ತನಗೆ ಸ್ವಲ್ಪ ದಿನ ಇಲ್ಲಿ ನೆಲೆಸಲು ಅವಕಾಶ ಮಾಡಿಕೊಡಲು ಕೇಳಿಕೊಂಡಾಗ ನೀನು ಸ್ತ್ರೀ ಆಗಿರುವುದರಿಂದ ಆ ಬೆಟ್ಟದಲ್ಲಿ ನೆಲೆಸು ಎಂದು ಜಾಗ ತೋರಿಸಿದರು ಆ ಜಾಗವೇ ಈಗ ಶ್ರೀ ದೇವಿರಮನ ಬೆಟ್ಟ ಎಂದು ಪ್ರಸಿದ್ಧಿ ಪಡೆದಿದೆ. ಎಂಬ ಐತಿಹಾಸಿಕ ಹಿನ್ನೆಲೆ ಒಂದಿದ್ದು ಬೆಟ್ಟವನ್ನು ಕಂಡ ದೇವಿಯು ತಾನು ನೆಲಸಲು ಪ್ರಶಸ್ತ ಸ್ಥಳವೆಂದು ಅರಿತು ನೆಲೆ ನಿಂತಳು.
ಈ ಹಿಂದೆ ಮೈಸೂರು ಸಂಸ್ಥಾನವನ್ನು ಆಳಿದ ರಾಜರು ಮೈಸೂರಿನ ಚಾಮುಂಡೇಶ್ವರಿ ಬೆಟ್ಟದಿಂದಲೇ ಪ್ರತೀ ನರಕ ಚತುರ್ದಶಿ ದಿನದಂದು ಚಿಕ್ಕಮಗಳೂರಿನ ದೇವಿರಮನ ಬೆಟ್ಟದಲ್ಲಿ ನಡೆಯುವ ದೀಪೋತ್ಸವ ಕಾರ್ಯಕ್ರಮ ನೋಡಿ ನಂತರ ಹಬ್ಬವನ್ನು ಆಚರಣೆ ಮಾಡುತ್ತಿದ್ದರು ಎಂಬ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈಗಲೂ ಕೂಡ ಪ್ರತಿ ವರ್ಷ ಮೈಸೂರಿನ ರಾಜ ಮನೆತನದಿಂದ ದೇವಿಗೆ ಬಾಗಿನ ರೂಪದಲ್ಲಿ ಮಡಲಕ್ಕಿ ಬರುತ್ತದೆ.
ಜಿಲ್ಲೆಯ ಸುತ್ತಮುತ್ತ ಹಳ್ಳಿಗಳ ಜನ ಹಾಗೂ ಭಕ್ತಾದಿಗಳು ರಾತ್ರಿ ಬೆಟ್ಟದಲ್ಲಿ ಹತ್ತಿಸುವ ದೀಪೋತ್ಸವವನ್ನು (ಜ್ಯೋತಿ) ನೋಡಿಯೇ ಹಬ್ಬವನ್ನು ಆಚರಣೆ ಮಾಡುತ್ತಾರೆ. ಬೆಟ್ಟದಲ್ಲಿ ಜ್ಯೋತಿಯನ್ನು ಬೆಳಗಿಸಲು ಭಕ್ತರು ಬೆಳಗ್ಗೆ ಬೆಟ್ಟವನ್ನು ಏರಿ ಹರಕೆಯ ರೀತಿಯಲ್ಲಿ ಸಲ್ಲಿಸುವ ಮರದ ದಿಮಿ, ಬಟ್ಟೆ, ಬೆಣ್ಣೆ, ತುಪ್ಪ ಇತ್ಯಾದಿ ವಸ್ತುಗಳನ್ನಿಟ್ಟು ಅದಕ್ಕೆ ಬೆಂಕಿ ಕೊಟ್ಟು ರಾತ್ರಿ 7 ಗಂಟೆ ಗೆ ದೀಪ ಬೆಳಗಿಸಲಾಗುತ್ತದೆ.
ದೇವಿರಮನ ಬೆಟ್ಟದ ತಪ್ಪಲಿನ ಕೆಳಗೆ ವಿಶಾಲವಾದ ಬಯಲಿನಲ್ಲಿ ಪ್ರಶಾಂತವಾಗಿ ನೆಲೆಸಿರುವ ತಾಯಿ (ಚಾಮುಂಡೇಶ್ವರಿ) ಶ್ರೀ ದೇವಿರಮ ಭಕ್ತರ ಇಷ್ಟಾರ್ಥಗಳನ್ನು ಕರುಣಿಸುತ್ತಾ ಪ್ರಾರ್ಥಿಸಿ ಬಂದವರನ್ನು ಮನಸಾರೆ ಪೊರೆಯುತ್ತಿದ್ದಾಳೆ . ವರ್ಷದ 365 ದಿನವೂ ಅನ್ನದಾಸೋಹ ಕಾರ್ಯಕ್ರಮ ಇಲ್ಲಿ ಜರುಗುತ್ತದೆ. ಶ್ರೀ ದೇವಿರಮ ಅಭಿವೃದ್ಧಿ ಟ್ರ್ಟ್ ಹಾಗೂ ಜಿಲ್ಲಾಡಳಿತ ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
ಈ ಬಾರಿ ಮಳೆಯ ಕಾರಣದಿಂದಾಗಿ ಎರಡು ದಿನಗಳ ಕಾಲ ಬೆಟ್ಟವನ್ನು ಹತ್ತಲು ಅವಕಾಶ ಮಾಡಿಕೊಟ್ಟಿದ್ದು ಇಂದು ಮತ್ತು ನಾಳೆ ಮಧ್ಯಾಹ್ನ 3ರ ವರೆಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ಲಾಸ್ಟಿಕ್ ತಿಂಡಿ ಪಟ್ಟಣಗಳನ್ನು ಗಿರಿ ಪ್ರದೇಶಕ್ಕೆ ಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರು, ಆರೋಗ್ಯ ಸಮಸ್ಯೆ ಇರುವವರು ಬೆಟ್ಟ ಹತ್ತಲು ಅವಕಾಶ ಇರುವುದಿಲ್ಲ ಹಾಗೂ ಪಟಾಕಿ ಮತ್ತಿತರ ಸಿಡಿಮದ್ದುಗಳನ್ನು ಕೊಂಡೊಯ್ಯುವಂತಿಲ್ಲ.
ಪಾದರಕ್ಷೆಯನ್ನು ಗಿರಿಯ ಕೆಳಭಾಗದಲ್ಲೇ ಬಿಟ್ಟು ಬರಿಗಾಲಿನಲ್ಲಿ ಬೆಟ್ಟ ಹತ್ತಬೇಕು. ದೇವಿಯ ದರ್ಶನದ ಕೂಡಲೇ ಸಮಯ ವ್ಯರ್ಥ ಮಾಡದೆ ಬೆಟ್ಟದಿಂದ ಕೆಳಗೆ ಇಳಿದು ಬೇರೆ ಭಕ್ತರಿಗೆ ಅವಕಾಶ ಮಾಡಿಕೊಡಬೇಕು. ಮದ್ಯಪಾನ, ಧೂಮಪಾನ ಮಾಡಿ ಬೆಟ್ಟ ಹತ್ತುವಂತಿಲ್ಲ ಎಂದು ಅಭಿವೃದ್ಧಿ ಸಮಿತಿ ತಿಳಿಸಿದೆ. ಹಾಗೂ ಜಿಲ್ಲಾಡಳಿತ ಮತ್ತು ಅಭಿವೃದ್ಧಿ ಸಮಿತಿ ಸೂಚಿಸಿರುವ ಮಾರ್ಗದಲ್ಲೇ ಬೆಟ್ಟ ಹತ್ತಬೇಕು ಎಂದು ಸೂಚಿಸಲಾಗಿದೆ.
ನಾಳೆ (ಅ.20) ಬೆಟ್ಟದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಅ.21 ಮಂಗಳವಾರ ಬೆಟ್ಟದ ಕೆಳಗಿರುವ ಶ್ರೀ ದೇವಿರಮನವರ ದೇವಸ್ಥಾನದಲ್ಲಿ ದೇವಿಗೆ ಉಡುಗೆ ಪೂಜೆ ನಡೆಯಲಿದೆ. ಅ 22 ಬುಧವಾರ ಬೆಳಗ್ಗೆ 8 ಗಂಟೆಗೆ ಶ್ರೀ ದೇವಿರಮನವರಿಗೆ ಮಹಾ ಮಂಗಳಾರತಿ ಪೂಜಾ ಕಾರ್ಯಕ್ರಮಗಳು, ಶ್ರೀ ಮಹಾ ಗಣಪತಿ ಪೂಜೆ, ಅಗ್ನಿಕುಂಡ ಸ್ಥಾಪನೆ ಯೊಂದಿಗೆ ಧಾರ್ಮಿಕ ಕಾರ್ಯಗಳು ನಡೆಯಲಿವೆ.
ಅ.23ರ ಗುರುವಾರ ಸೂರ್ಯೋದಯಕ್ಕೆ ಕೆಂಡಾರ್ಚನೆ ನಂತರ ಮಹಾಮಂಗಳಾರತಿ ಹರಕೆ ಒಪ್ಪಿಸುವುದು, ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಈ ವರ್ಷದ ಶ್ರೀ ದೇವಿರಮನವರ ದೀಪೋತ್ಸವ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದು ಟ್ರ್ಟ್‌ನ ಅಧ್ಯಕ್ಷ ಎಂ.ಎ. ಕುಲಶೇಖರ ತಿಳಿಸಿದ್ದಾರೆ.