Friday, November 21, 2025
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಚಿಕ್ಕಮಗಳೂರು : ಚಿರತೆ ದಾಳಿಗೆ 5 ವರ್ಷದ ಹೆಣ್ಣು ಮಗು ಬಲಿ

ಚಿಕ್ಕಮಗಳೂರು : ಚಿರತೆ ದಾಳಿಗೆ 5 ವರ್ಷದ ಹೆಣ್ಣು ಮಗು ಬಲಿ

Chikkamagaluru: Five-year-old girl killed in leopard attack

ಚಿಕ್ಕಮಗಳೂರು,ನ.21-ಚಿರತೆ ದಾಳಿಗೆ ಐದು ವರ್ಷದ ಹೆಣ್ಣು ಮಗು ಬಲಿಯಾಗಿದ್ದು, ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಸಮೀಪದ ನವಿಲೇಕಲ್ಲುಗುಡ್ಡ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮನೆಗೆ ಹಿಂದೆ ಆಟವಾಡುತ್ತಿದ್ದ ಮಗುವನ್ನು ತಂದೆಯ ಮುಂದೆಯೇ ಚಿರತೆ ಹೊತ್ತುಕೊಂಡು ಹೋಗಿದೆ. ಕೂಲಿ ಕಾರ್ಮಿಕ ಬಸವರಾಜ್‌ ಎಂಬುವರ ಪುತ್ರಿ ಸಾನ್ವಿ(5) ಚಿರತೆಗೆ ಆಹಾರವಾದ ಮಗು. ಬೇಟೆಯಾಡುವ ರೀತಿ ಚಿರತೆ ಕಾದು ಕುಳಿತು ಏಕಾಏಕಿ ದಾಳಿ ಮಾಡಿ ಮಗುವಿನ ಕುತ್ತಿಗೆಗೆ ಬಾಯಿ ಹಾಕಿ ಹೊತ್ತೊಯ್ದಿದೆ.

ಮಗುವಿನ ತಂದೆ ಬಸವರಾಜ್‌ ಸಹಾಯಕ್ಕಾಗಿ ಕೂಗಿಕೊಂಡರಾದರೂ ಗ್ರಾಮಸ್ಥರು ಬರುವಷ್ಟರಲ್ಲಿ ಚಿರತೆ ಮಗುವಿನ ದೇಹದೊಂದಿಗೆ ಸ್ಥಳದಿಂದ ಪರಾರಿಯಾಗಿದೆ ಎನ್ನಲಾಗಿದೆ. ಬೆಂಗಳೂರು ಮೂಲದ ರಾಮಚಂದ್ರ ಅವರ ಅಡಿಕೆ ತೋಟದಲ್ಲಿ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕುಮತ್ತಗಿರಿ ಮೂಲದ ಬಸವರಾಜ್‌ ಕುಟುಂಬದವರು ಕೂಲಿ ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆಯೂ ಹಲವು ಬಾರಿ ಚಿರತೆ ದಾಳಿ ಮಾಡಿತ್ತು. ಚಿರತೆ ಸೆರೆಗಾಗಿ ಹಲವು ಬಾರಿ ಸ್ಥಳೀಯರು ಮನವಿ ಮಾಡಿದ್ದರೂ ಅರಣ್ಯ ಇಲಾಖೆ ನಿರ್ಲಕ್ಷಿಸಿತ್ತು ಎಂದು ದೂರಲಾಗಿದೆ.

ಬೀರೂರು ಪೊಲೀಸ್‌‍ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ. ಮಗುವಿನ ಮೃತದೇಹಕ್ಕಾಗಿ ಅರಣ್ಯ ಸಿಬ್ಬಂದಿ ಹಾಗು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

RELATED ARTICLES
- Advertisment -

Latest News