ಚಿಕ್ಕಮಗಳೂರು,ಸೆ.16- ಇಲ್ಲಿನ ಶ್ರೀ ಗಣಪತಿ ಸೇವಾ ಸಮಿತಿ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ದೊಡ್ಡ ಗಣಪತಿಗೆ ಭಕ್ತರು ವಿದೇಶಿ ಕರೆನ್ಸಿಗಳನ್ನು ಅರ್ಪಿಸಿದ್ದಾರೆ.
ಭಕ್ತರು ಹಣ, ಚಿನ್ನ, ಬೆಳ್ಳಿ ನಾಣ್ಯಗಳನ್ನು ಅರ್ಪಣೆ ಮಾಡುವುದು ಸರ್ವೇ ಸಾಧಾರಣವಾದರೂ ಈ ಬಾರಿ ಹುಂಡಿಯಲ್ಲಿ ವಿದೇಶಿ ಕರೆನ್ಸಿಗಳನ್ನು ಹಾಕಿರುವುದು ವಿಶೇಷ.
ಭಕ್ತರೊಬ್ಬರು ಯುನೈಟೆಡ್ ಎಮಿರೇಟ್‌್ಸನ 50 ದೀನರ್ ಹುಂಡಿಗೆ ಹಾಕಿದ್ದಾರೆ ಭಾರತದಲ್ಲಿ ಇದರ ಬೆಲೆ 1200 ರೂಪಾಯಿಗಳು. ಹಾಗೆಯೇ ಶ್ರೀಲಂಕಾ ದೇಶದ ರೂಪಿ ಕೂಡ ಹಾಕಲಾಗಿದ್ದು 20 ರೂಪಿ ಎರಡು ನೋಟುಗಳು ಹಾಗೂ 50 ರೂಪಿ ಎರಡು ನೋಟುಗಳು ಹುಂಡಿಯಲ್ಲಿ ಸಿಕ್ಕಿದೆ. ಶ್ರೀಲಂಕಾದ ರೂಪಿಗೆ ಭಾರತದಲ್ಲಿ ಕಡಿಮೆ ಬೆಲೆ. ವಿದೇಶಿ ನೋಟುಗಳನ್ನು ಬ್ಯಾಂಕಿಗೆ ನೀಡಿ ಭಾರತದ ನೋಟುಗಳಾಗಿ ಪರಿವರ್ತಿಸಿಕೊಳ್ಳಲಾಗುವುದು ಎಂದು ಸೇವಾ ಸಮಿತಿಯ ಅಧ್ಯಕ್ಷ ಸಿ.ಎಸ್ ಕುಬೇರ ತಿಳಿಸಿದ್ದಾರೆ.
ಈಗಾಗಲೇ ಎರಡು ಬಾರಿ ಹುಂಡಿ ಎಣಿಕೆ ಮಾಡಿದ್ದು ಯಾವುದೇ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳು ಬಂದಿಲ್ಲ. ಕೇವಲ ಹಣವನ್ನು ಮಾತ್ರ ಹುಂಡಿಗೆ ಹಾಕಿದ್ದಾರೆ. ಸೆ.7ರಂದು ಹುಂಡಿ ಎಣಿಕೆಯಲ್ಲಿ 68,224 ರೂ.ಸಂಗ್ರಹವಾದರೆ ನಿನ್ನೆಯ ಹುಂಡಿ ಎಣಿಕೆಯಲ್ಲಿ 86,424 ರೂ. ಸಂಗ್ರಹವಾಗಿದೆ ಎಂದು ಹೇಳಿದ್ದಾರೆ.
ಚಲಾವಣೆಯಲ್ಲಿ ಇಲ್ಲದ 25 ಪೈಸೆ 50 ಪೈಸೆ ಕಾಯಿನ್‌ಗಳು ಕೂಡ ಹುಂಡಿಯಲ್ಲಿ ಸಂಗ್ರಹವಾಗಿದೆ. ಸಂಗ್ರಹವಾದ ಹಣವನ್ನು ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಲಾಗುವುದು ಎಂದು ತಿಳಿಸಿದ್ದಾರೆ.